ಕೊವಿಡ್-೧೯ರ ವಿರುದ್ಧ ಭಾರತದ ಸಮರವನ್ನು ಕೋಮುಗ್ರಸ್ತಗೊಳಿಸುವುದನ್ನು ನಿಲ್ಲಿಸಿ: ಸಿಪಿಐ(ಎಂ) ಪೊಲಿಟ್‌ಬ್ಯುರೊ

0
65

ನವದೆಹಲಿ: ದಿಲ್ಲಿಯಲ್ಲಿ ತಬ್ಲೀಘಿ ಜಮಾತ್‌ನ ಒಂದು ಸಭೆಯಲ್ಲಿ ಹಾಜರಿದ್ದ ಬಹಳಷ್ಟು ಜನಗಳು ದೇಶದ ವಿವಿಧ ಭಾಗಗಳಿಗೆ ಹೋಗಿದ್ದು ಅವರಲ್ಲಿ ಹಲವರಿಗೆ ಕೊರೊನ ಸೋಂಕು ತಗಲಿದೆ ಎಂದು ಪತ್ತೆಯಾಗಿರುವುದು ಒಂದು ಗಂಭೀರ ಆತಂಕದ ಸಂಗತಿ ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೊ ಹೇಳಿದೆ. ಮಾರ್ಚ್ ಮಧ್ಯಭಾಗದಲ್ಲಿ ಸಭೆ-ಸಮಾರಂಭಗಳ ಸಂಖ್ಯೆಯ ಮೇಲೆ ನಿರ್ಬಂಧಗಳಿದ್ದಾಗ ಇಂತಹ ಒಂದು ಸಭೆಯನ್ನು ನಡೆಸುವುದು ಜಮಾತ್ ಮುಖಂಡತ್ವದ ಬೇಜವಾಬ್ದಾರಿತನ. ಆದರೆ ಮಾರ್ಚ್ ೨೦-೨೧ ರಂದು ಮತ್ತೊಂದು ಸಮಾರಂಭಕ್ಕೆ ಅಧಿಕಾರಿಗಳು ಅವಕಾಶ ಹೇಗೆ ನೀಡಿದರು ಎಂಬುದು ಅರ್ಥವಾಗದ ಸಂಗತಿ ಎಂದು ಪೊಲಿಟ್ ಬ್ಯುರೊ ಟಿಪ್ಪಣಿ ಮಾಡಿದೆ.

ಇದಕ್ಕೆ ಒಂದು ಕೋಮುವಾದಿ ಬಣ್ಣ ಕೊಡಲು ಮತ್ತು ಒಂದು ನಿರ್ದಿಷ್ಟ ಸಮುದಾಯವನ್ನು ಗುರಿ ಮಾಡುವ ಪ್ರಯತ್ನಗಳನ್ನು, ಸಾಮಾಜಿಕ ಮಾಧ್ಯಮಗಳಲ್ಲಿ ಇಂತಹ ಪ್ರಚಾರವನ್ನು ಸಿಪಿಐ(ಎಂ) ಪೊಲಿಟ್ ಬ್ಯುರೊ ಖಂಡಿಸಿದೆ. ಕೊರೊನ ವೈರಸ್ ಧರ್ಮದ ಆಧಾರದಲ್ಲಿ ಭೇದ ಮಾಡುವುದಿಲ್ಲ. ಈ ಪ್ರಶ್ನೆಯನ್ನು ಕೋಮುಗ್ರಸ್ತಗೊಳಿಸುವ ಎಲ್ಲ ಪ್ರಯತ್ನಗಳಿಗೆ ತಕ್ಕ ಪ್ರತ್ಯುತ್ತರ ನೀಡಬೇಕು. ಮಾರ್ಚ್ ೧೩ ರಂದು ೨೦೦ಕ್ಕಿಂತ ಹೆಚ್ಚು ಜನಗಳಿರುವ ಸಾಮಾಜಿಕ, ಧಾರ್ಮಿಕ, ರಾಜಕೀಯ ಸಭೆ ಸಮಾರಂಭಗಳನ್ನು ನಿಷೇಧಿಸಿದ ನಂತರ ದೇಶದ ಹಲವು ಭಾಗಗಳಲ್ಲಿ ನಡೆದಿರುವ ಎಲ್ಲ ದೊಡ್ಡ ಸಮಾರಂಭಗಳ ಆಮೂಲಾಗ್ರ ತನಿಖೆ ನಡೆಸಬೇಕು. ಅವುಗಳಲ್ಲಿ ಭಾಗವಹಿಸಿದವರನ್ನು ಪತ್ತೆ ಹಚ್ಚಿ ತಪಾಸಣೆಗೆ ಒಳಪಡಿಸಬೇಕು. ದಕ್ಷಿಣ ಕೊರಿಯ ಮತ್ತು ಸಿಂಗಾಪುರದಲ್ಲಿ ದೊಡ್ಡ ಗೋಷ್ಠಿಗಳಲ್ಲಿ ಭಾಗವಹಿಸಿದ ಎಲ್ಲರನ್ನೂ ಅತ್ಯಂತ ಜಾಗರೂಕತೆಯಿಂದ ಪತ್ತೆ ಹಚ್ಚಿ, ತೀವ್ರ ತಪಾಸಣೆಯ ನಂತರ ಅವರನ್ನು ಪ್ರತ್ಯೇಕಗೊಳಿಸಿ ಕೋವಿಡ್-೧೯ರ ಸಾಮುದಾಯಿಕ ಪ್ರಸರಣ  ನಡೆಯದಂತೆ ತಡೆದಿವೆ. ಅದರಿಂದ ನಾವು ಪಾಟ ಕಲಿಯಬೇಕು ಎಂದು ಪೊಲಿಟ್‌ಬ್ಯುರೊ ಹೇಳಿದೆ. ಭಾರತದ ತಪಾಸಣಾ ದರ ತುಂಬಾ ಕಳಗಿದೆ, ದಕ್ಷಿಣ ಕೊರಿಯಾದ್ದು ನಮ್ಮ ದರದ ೨೪೧ ಪಟ್ಟು. ಇದನ್ನು ತುರ್ತಾಗಿ ಸರಿಪಡಿಸಬೇಕು ಎಂದೂ ಅದು ಹೇಳಿದೆ.

Contact Your\'s Advertisement; 9902492681

ಇದು ಕೋವಿಡ್-೧೯ರ ವಿರುದ್ಧ ಭಾರತದ ಸಮರ. ಇದನ್ನು ಕೋಮುಗ್ರಸ್ತಗೊಳಿಸುವ ಎಲ್ಲ ಪ್ರಯತ್ನಗಳೂ ಈ ವೈರಸ್ಸನ್ನು ತಡೆಗಟ್ಟುವಲ್ಲಿ ನಮ್ಮ ವಿಜಯವನ್ನು ಶಿಥಿಲಗೊಳಿಸುತ್ತವೆ. ಇದು ನಮ್ಮನ್ನು ನಾವೇ ಸೋಲಿಸುವ ಒಂದು ಕೆಲಸವಾಗುತ್ತದೆ. ಸರಕಾರ ಇಂತಹ ಅಪಾಯಕಾರೀ ಕೋಮುವಾದಿ ಧ್ರುವೀಕರಣ ಹರಡುವುದನ್ನು ನಿಲ್ಲಿಸಲು ಸರ್ವ ಪ್ರಯತ್ನಗಳನ್ನು ನಡೆಸಬೇಕು ಎಂದು ಪೊಲಿಟ್ ಬ್ಯುರೊ ಆಗ್ರಹಿಸಿದೆ.

ಪ್ರಚೋದನೆಗಳಿಗೆ ಬಲಿ ಬೀಳಬಾರದು, ಈ ಮಹಾಮಾರಿಯ ವಿರುದ್ದ ನಮ್ಮ ಐಕ್ಯ ಪ್ರಯತ್ನಗಳನ್ನು ಬಲಪಡಿಸಬೇಕು ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೊ ಎಲ್ಲರಿಗೂ ಮನವಿ ಮಾಡಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here