ಕೊರೋನಾ ಭೀತಿ: ಲಾಕ್‌ಡೌನ್‌ನಿಂದ ಸಂಪೂರ್ಣ ಸ್ಥಬ್ದಗೊಂಡ ಕಲಬುರಗಿ

0
66

ಕಲಬುರಗಿ: ಮಹಾಮಾರಿ ಕೊರೋನಾಕ್ಕೆ ನಗರದಲ್ಲಿ ಇಬ್ಬರು ಬಲಿಯಾಗಿದ್ದರಿಂದ ಜಿಲ್ಲಾಡಳಿತವು ಗಂಭೀರವಾಗಿ ಪರಿಗಣಿಸಿ ಲಾಕ್‌ಡೌನ್‌ನನ್ನು ಮತ್ತಷ್ಟು ಬಿಗಿಗೊಳಿಸಿದೆ. ಜತೆಗೆ ಸಾರ್ವಜನಿಕರೂ ಸಹ ಸ್ವಯಂ ಪ್ರೇರಿತರಾಗಿ ತಮ್ಮ ತಮ್ಮ ಪ್ರದೇಶಗಳಿಗೆ ಸಂಚಾರವನ್ನು ಸ್ವಯಂ ಪ್ರೇರಿತರಾಗಿ ನಿರ್ಬಂಧಿಸಿರುವುದರಿಂದ ಇಡೀ ನಗರ ಸಂಪೂರ್ಣ ಸ್ಥಬ್ದಗೊಂಡಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಮೊದಲು ಜನತಾ ಕರ್ಫ್ಯೂಕ್ಕೆ ಕರೆ ನೀಡಿದರು. ಅದು ಬಹುತೇಕ ಜಿಲ್ಲೆಯಲ್ಲಿ ಯಶಸ್ವಿಯಾಯಿತು. ನಂತರ ಲಾಕ್‌ಡೌನ್‌ನನ್ನು ೨೧ ದಿನಗಳವರೆಗೆ ಜಾರಿಗೊಳಿಸಿದರು. ಆರಂಭದಲ್ಲಿ ಕಣ್ಣಿ ಮಾರುಕಟ್ಟೆ, ಸೂಪರ್ ಮಾರ್ಕೆಟ್ ಸೇರಿದಂತೆ ವಿವಿಧೆಡೆ ವ್ಯಾಪಾರಿಗಳು ಹಾಗೂ ಸಾರ್ವಜನಿಕರು ಸ್ಪಂದಿಸಲಿಲ್ಲ. ಹೀಗಾಗಿ ಪೋಲಿಸರು ಲಾಠಿ ಪ್ರಹಾರ ಮಾಡಿದರು. ಕಣ್ಣಿ ಮಾರುಕಟ್ಟೆ ನಗರದ ಹೊರವಲಯದ ಅಟಲ್ ಬಿಹಾರಿ ವಾಜಪೇಯಿ ನಗರಕ್ಕೆ ಸ್ಥಳಾಂತರಗೊಂಡಿತು.

Contact Your\'s Advertisement; 9902492681

ಅನಗತ್ಯವಾಗಿ ಸಂಚರಿಸುವವರಿಗೆ ಬಸ್ಕಿ ಹೊಡೆಸುವುದು, ಕಸಗೂಡಿಸುವುದು, ತಿಪ್ಪೆ ಸ್ವಚ್ಛಗೊಳಿಸುವುದು, ಪ್ರಾಣಾಯಾಮ ಮಾಡಿಸುವುದು ಹಾಗೂ ವಾಹನಗಳನ್ನು ಜಪ್ತಿ ಮಾಡಿಕೊಳ್ಳುವುದು ಮುಂತಾದ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡರೂ ಸಹ ಅನಗತ್ಯ ಸಂಚಾರ ಮುಂದುವರೆದಿತ್ತು. ನಂತರ ಅನಗತ್ಯ ಸಂಚರಿಸುವವರಿಗೆ ಪೆಟ್ರೋಲ್ ಪಂಪ್‌ಗಳನ್ನು ಮುಚ್ಚಲಾಯಿತು. ಆದಾಗ್ಯೂ, ಜನರ ಸಂಚಾರ ಯಥಾರೀತಿ ಮುಂದುವರೆದು ಜಿಲ್ಲಾಡಳಿತಕ್ಕೆ ದೊಡ್ಡ ತಲೆನೋವಾಗಿತ್ತು.

ಈಗ ಬಾಳೆಹಣ್ಣಿನ ವ್ಯಾಪಾರಿ ಕೊರೋನಾಕ್ಕೆ ಬಲಿಯಾಗಿದ್ದು, ಜಿಲ್ಲೆಯ ಜನತೆ ಬೆಚ್ಚಿ ಬಿದ್ದಿದೆ. ಈಗ ಮಹಾಮಾರಿಯಿಂದ ರಕ್ಷಿಸಿಕೊಳ್ಳಲು ವಿವಿಧ ಪ್ರದೇಶಗಳ ಜನರು ತಮ್ಮ ತಮ್ಮ ಸರಹದ್ದಿನಲ್ಲಿ ಕಲ್ಲುಗಳನ್ನು ಇಟ್ಟು, ಕಂಟೆಗಳನ್ನು ಹಾಕಿ ಸ್ವಯಂ ನಿರ್ಬಂಧ ವಿಧಿಸಿದ್ದಾರೆ.

ಸಂತ್ರಾಸವಾಡಿಯ ಪ್ರದೇಶಗಳಲ್ಲಿ ಟಾಂಗಾಗಳನ್ನು ರಸ್ತೆ ಮಧ್ಯೆ ಅಡ್ಡಹಾಕಿ ಸಂಚಾರ ನಿಬಂಧಿಸಲಾಗಿದೆ. ಉದಯನಗರದ ಉದ್ಯಾನವನದಲ್ಲಿನ ರಸ್ತೆಯ ಮೇಲೆ ಬಾಟಲಿಗಳ ಗಾಜುಗಳನ್ನು ಒಡೆದುಹಾಕಿ ಸಂಚಾರ ನಿರ್ಬಂಧಿಸುವಂತಹ ಅಪಾಯಕಾರಿ ಕೃತ್ಯವೂ ಸಹ ವರದಿಯಾಗಿದೆ.

ಇನ್ನು ಸಂಚಾರಿ ಠಾಣೆಯ ಪೋಲಿಸರು ಕಳೆದ ಬುಧವಾರ ಸಂಜೆಯಿಂದಲೇ ನಗರದ ನಾಲ್ಕು ದಿಕ್ಕಿನಲ್ಲಿಯೂ ಹಾಗೂ ನಗರದ ಪ್ರಮುಖ ವೃತ್ತಗಳಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿ ಸಂಚಾರ ಸ್ಥಗಿತಗೊಳಿಸಿದ್ದಾರೆ. ಇದರಿಂದ ಜನರಿಗೆ ಸಾಕಷ್ಟು ತೊಂದರೆ ಆಗಿದ್ದರೂ ಸಹ ಲಾಕ್‌ಡೌನ್ ಸಲುವಾಗಿ ಬಿಗಿಗೊಳಿಸಲಾಗಿದೆ.

ಬೆಳಿಗ್ಗೆಯೇ ಗಸ್ತು ವಾಹನದಲ್ಲಿನ ಪೋಲಿಸರು ಮನೆ, ಮನೆಗೆ ತೆರಳಿ, ಮನೆಯಿಂದ ಹೊರಬರದೇ ಇರಲು ಸಾರ್ವಜನಿಕರಿಗೆ ಕೋರಿದರು. ಹೀಗಾಗಿ ಸಾರ್ವಜನಿಕರು ಈ ಬಾರಿ ಲಾಕ್‌ಡೌನ್‌ಗೆ ಉತ್ತಮವಾಗಿ ಸ್ಪಂದಿಸಿಸಿದ್ದಾರೆ. ಜನರ ಅನಗತ್ಯ ಸಂಚಾರಕ್ಕೆ ಸಂಪೂರ್ಣ ಸ್ಥಗಿತಗೊಂಡಿದ್ದು, ಇಡೀ ನಗರ ಜನಸಂಚಾರ ಇಲ್ಲದೇ ಬಿಕೋ ಎನ್ನುತ್ತಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here