ಕಲಬುರಗಿ: ಲಾಕ್ ಡೌನ್‌ನಿಂದಾಗಿ ಬೆಂಗಳೂರಿನಲ್ಲಿಯೇ ಉಳಿದ ಕಲಬುರಗಿ ಹಾಗೂ ಚಿತ್ತಾಪುರ ತಾಲೂಕಿನ ಕನಿಷ್ಠ 600 ಕ್ಕೂ ಅಧಿಕ ದಿನಗೂಲಿ ಮಾಡುವ ಕುಟುಂಬಗಳಿಗೆ ಎರಡು ತಿಂಗಳಿಗೆ ಆಗುವಷ್ಟು ಧವಸ ಧಾನ್ಯ ಮುಖ್ಯವಾಗಿ ಅಕ್ಕಿ ಬೇಳೆ ಹಾಗೂ ಅಡುಗೆ ಎಣ್ಣೆಯನ್ನು ಪಾಕೇಟ್ ಮಾಡಿ ಶಾಸಕರಾದ ಪ್ರಿಯಾಂಕ್ ಖರ್ಗೆ ಅವರು ಇಂದು ವಿತರಿಸಿದರು.
ಬೆಂಗಳೂರು ನಗರದ ಹಲವೆಡೆ ಹಾಗೂ ಹೊರಭಾಗದಲ್ಲಿ ಅಲ್ಲಲ್ಲಿ ವಾಸವಾಗಿದ್ದ ಕಲಬುರಗಿ ಹಾಗೂ ಚಿತ್ತಾಪುರ ತಾಲೂಕಿನ ಸುಮಾರು 600 ಕುಟುಂಬಗಳು ಲಾಕ್ ಡೌನ್ ಆದಾಗಿನಿಂದ ಊರುಗಳಿಗೆ ತಲುಪಲಾಗಿರಲಿಲ್ಲ. ಮಾಡಲು ಕೆಲಸವಿಲ್ಲದೆ. ಅನ್ನ, ನೀರು ಹಾಗೂ ವೈದ್ಯಕೀಯ ಸೌಲಭ್ಯಗಳಿಲ್ಲದೆ ಸದರಿ ಕುಟುಂಬದ ಸದಸ್ಯರು ಸಂಕಟಪಡುತ್ತಿರುವ ವಿಷಯ ಇತ್ತೀಚಿಗೆ ಚಿತ್ತಾಪುರದಲ್ಲಿ ಪ್ರಾರಂಭಿಸಲಾಗಿದ್ದ ಸಹಾಯವಾಣಿ ಹಾಗೂ ಕೆಪಿಸಿಸಿ ವತಿಯಿಂದ ಆರಂಭಿಸಲಾಗಿದ್ದ ಸಹಾಯವಾಣಿಯ ಮೂಲಕ ತಿಳಿದು ಬಂತು.
ತಕ್ಷಣ ಕಾರ್ಯಪ್ರವೃತ್ತರಾದ ಶಾಸಕರು ಅಕ್ಕಿ, ಬೇಳೆ ಹಾಗೂ ಅಡುಗೆ ಎಣ್ಣೆಯನ್ನು ಪ್ಯಾಕೇಟ್ ಮೂಲಕ ಎರಡು ತಿಂಗಳಿಗಾಗುವಷ್ಟು ಎಲ್ಲ ಕುಟುಂಬಗಳಿಗೆ ತಲುಪಿಸಿ ಸಮಾಜಿಕ ಜವಾಬ್ದಾರಿ ಮೆರೆದಿದ್ದಾರೆ. ಶಾಸಕರ ಕರೆಗೆ ಓಗೊಟ್ಟು ಸಂಘ ಸಂಸ್ಥೆಗಳು, ವ್ಯಾಪಾರಿಗಳು, ಎಪಿಎಂಸಿ ವರ್ತಕರು ಚಿತ್ತಾಪುರ ಪಟ್ಟಣದಲ್ಲಿ ಈಗಾಗಲೇ ಅಲ್ಲಿನ ಜನರಿಗೆ ಜೀವನಾಶ್ಯಕ ವಸ್ತುಗಳನ್ನು ತಲುಪಿಸಿದ್ದಾರೆ.
” ಜನರು ತುಂಬಾ ಸಂಕಷ್ಟದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಚಿತ್ತಾಪುರ ಶಾಸಕನಾಗಿ ಹಾಗೂ ಕಲಬುರಗಿ ಜಿಲ್ಲೆಯ ಮಣ್ಣಿನ ಮಗನಾಗಿ ನಾನು ನನ್ನ ಕರ್ತವ್ಯವವನ್ನು ನಿಭಾಯಿಸುತ್ತಿದ್ದೇನೆ. ಇದು ನಿರಂತರವಾಗಿ ಮುಂದುವರೆಯಲಿದೆ. ಯಾರು ಹಸಿವಿನಿಂದ ಬಳಲಬಾರದು. ಕಲಬುರಗಿ ಹಾಗೂ ಚಿತ್ತಾಪುರ ತಾಲೂಕಿನ ನಾಗರಿಕರು ಇದೇ ರೀತಿ ಸಂಕಟಪಡುತ್ತಿದ್ದರೆ ಸಾರ್ವಜನಿಕರು ನನ್ನ ಗಮನಕ್ಕೆ ತನ್ನಿ, ನಾನು ತಕ್ಷಣಕ್ಕೆ ಸ್ಪಂದಿಸುತ್ತೇನೆ. ನೊಂದ ಜನರ ಕಣ್ಣೀರು ಒರೆಸುವ ಮಹತ್ಕಾರ್ಯದಲ್ಲಿ ನಾವು ನೀವೆಲ್ಲ ಕೈಜೋಡಿಸೋಣ” ಎಂದು ಶಾಸಕರು ಕರೆ ನೀಡಿದ್ದಾರೆ.