ಸುರಪುರ: ಇಂದು ಕೊರೊನಾ ಕಾರಣದಿಂದ ದೇಶದಲ್ಲಿ ಲಾಕ್‌ಡೌನ್ ಘೋಷಣೆಯಾಗಿ ಬಡವರು ನಿರ್ಗತಿಕರು ಮಾನಸಿಕ ಅಸ್ವಸ್ಥರು ಮತ್ತು ಭೀಕ್ಷುಕರು ಹೀಗೆ ಅನೇಕರು ನಿತ್ಯವು ಅನ್ನ ಆಹಾರಕ್ಕಾಗಿ ಪರದಾಡುವ ಸ್ಥಿತಿ ದೇಶದಲ್ಲಿ ಉಂಟಾಗಿದೆ. ಹಸಿದವರ ಹೊಟ್ಟೆ ತುಂಬಿಸಲು ಅನೇಕ ಸಂಘ ಸಂಸ್ಥೆಗಳು ಜನಪ್ರತಿನಿಧಿಗಳು ಮತ್ತು ಸಮಾಜ ಸೇವಕರು ಮುಂದೆ ಬಂದು ನಿತ್ಯವು ಲಕ್ಷಾಂತರ ಜನರ ನೆರವಿಗೆ ನಿಲ್ಲುತ್ತಿದ್ದಾರೆ.ಅಂತಹ ಜನರ ಮದ್ಯೆ ಮಾನವೀಯತೆ ಮೆರೆವ ಪೊಲೀಸ್ ಪೇದೆ ದಯಾನಂದ್ ಜಮಾದರ.
ಕಲಬುರ್ಗಿ ಸಮೀಪದ ತೇಗನುರ ಗ್ರಾಮದ ದಯಾನಂದ್ ಜಮಾದಾರ ಸುರಪುರ ಠಾಣೆಯಲ್ಲಿ ಸದ್ಯ ಪೊಲೀಸ್ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು,ತನಗೆ ಬರುವ ಸಂಬಳದಲ್ಲಿ ಒಂದಿಷ್ಟು ಹಣವನ್ನು ಬಡ ಜನರ ಹಸಿವು ನೀಗಿಸಲು ಮೀಸಲಿಡುವ ಮೂಲಕ ಮಾದರಿಯಾಗಿದ್ದಾನೆ.ಕಳೆದ ಆರು ತಿಂಗಳಿಂದ ನಿತ್ಯವು ರಾತ್ರಿ ಬಸ್ ನಿಲ್ದಾಣ ಮತ್ತಿತರೆಡೆಗಳಲ್ಲಿರುವ ಮಾನಸಿಕ ಅಸ್ವಸ್ಥರು,ಬುದ್ಧಿ ಮಾಂದ್ಯರು,ನಿರ್ಗತಿಕರು,ವಯೊವೃಧ್ಧರು ಹೀಗೆ ಹಸಿವಿನಿಂದ ಬಳಲುವವರಿಗೆ ತನ್ನ ಸ್ವಂತ ಹಣದಿಂದ ಅನ್ನ ನೀರು ಹಣ್ಣು ಹೀಗೆ ವಿವಿಧ ರೀತಿಯ ಪದಾರ್ಥಗಳನ್ನು ವಿತರಿಸುವ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ.
ನನ್ನ ಪ್ರತಿ ತಿಂಗಳಿನ ಸಂಬಳದಲ್ಲಿ ಮೂರು ಸಾವಿರ ರೂಪಾಯಿ ನಿರ್ಗತಿಕರಿಗೆ ಆಹಾರ ನೀರು ಹಣ್ಣು ನೀಡಲು ಮೀಸಲಿರಿಸುತ್ತಿದ್ದು, ಇದರಿಂದ ನನ್ನ ಕರ್ತವ್ಯದ ಜೊತೆಗೆ ಜನರ ಹಸಿವು ನೀಗಿಸಿದ ನೆಮ್ಮದಿ ಇದೆ. – ದಯಾನಂದ್ ಜಮಾದಾರ್ ಪೊಲೀಸ್ ಪೇದೆ.
ಈಗ ಕೊರೊನಾದಿಂದ ಅನೇಕ ಬಡ ಜನರು ಕೆಲಸವಿಲ್ಲದೆ ಜೀವನ ನಡೆಸಲು ಕಷ್ಟಪಡುವವರಿಗೆ ನೆರವಿಗೆ ನಿಲ್ಲುವ ಮೂಲಕ ಔದಾರ್ಯ ತೋರುತ್ತಿದ್ದಾರೆ.ಇವರ ಕಾರ್ಯಕ್ಕೆ ಸುರಪುರ ಉಪ ವಿಭಾಗದ ಡಿವಾಯ್‌ಎಸ್ಪಿ ವೆಂಕಟೇಶ ಹುಗಿಬಂಡಿ,ಸುರಪುರ ಠಾಣೆಯ ಪಿಐ ಸಾಹೇಬಗೌಡ ಎಂ.ಪಾಟೀಲ ಹೀಗೆ ಎಲ್ಲರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.