ಸುರಪುರ: ಕೊರೊನಾ ವೈರಸ್ ನಿತ್ಯವು ತನ್ನ ರಣಕೇಕೆಯನ್ನು ವಿಸ್ತರಿಸುತ್ತಿದೆ.ದಿನದಿಂದ ದಿನಕ್ಕೆ ಸಾವಿನ ಸಂಖ್ಯೆ ಮತ್ತು ಸೊಂಕಿತರ ಸಂಖ್ಯೆ ಹೆಚ್ಚುತ್ತಿದೆ.ಸರಕಾರಗಳು ಜನರ ಅಂತರ ಕಾಯ್ದುಕೊಳ್ಳಲು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸುತ್ತಿವೆ.ಆದರೆ ಜನರು ಮಾತ್ರ ಇವುಗಳ ಪರಿವಿಲ್ಲದಂತೆ ನಡೆದುಕೊಳ್ಳುವ ಮೂಲಕ ನಿರ್ಲಕ್ಷ್ಯ ತೋರುತ್ತಿದ್ದಾರೆ.
ನಗರದ ರಂಗಂಪೇಟೆಯಲ್ಲಿನ ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್ ಕಚೇರಿ,ಮಹಾತ್ಮಾ ಗಾಂಧಿ ವೃತ್ತದ ಬಳಿಯ ಡಿಸಿಸಿ ಬ್ಯಾಂಕ್ ಕಚೇರಿ ಹಾಗು ಭಾರತೀಯ ಸ್ಟೇಟ್ ಬ್ಯಾಂಕ್ ಶಾಖೆಯ ಮುಂದೆ ಜನತೆ ಸಾಮಾಜಿಕ ಅಂತರ ಪರಿವೆ ಇಲ್ಲದೆ ಮುಗಿಬಿದ್ದು ನಿಲ್ಲುವ ಮೂಲಕ ಸಾಮಾಜಿಕ ಅಂತರಕ್ಕೆ ಅರ್ಥವಿಲ್ಲದಂತೆ ನಡೆದುಕೊಳ್ಳುತ್ತಿದ್ದಾರೆ.
ಸರಕಾರಗಳು ಜನರು ಹೊರಗೆ ಬರಬೇಕಾದರೆ ಮಾಸ್ಕ್ ಧರಿಸಿರಿ,ಆಗಾಗ ಸ್ಯಾನಿಟೈಜರ್‌ನಿಂದ ಕೈಗಳನ್ನು ತೊಳೆಯುತ್ತಿರಿ,ಹೊರಗೆ ಬಂದಾಗ ಕನಿಷ್ಠ ಮೂರು ಅಡಿಗಳ ಅಥವಾ ಒಂದು ಮೀಟರ್ ದೂರ ನಿಲ್ಲುವಂತೆ ಹಗಲಿರಳು ಪ್ರಚಾರ ಮಾಡುತ್ತಿದ್ದರು,ಬ್ಯಾಂಕ್ ಕಚೇರಿಗಳ ಮುಂದೆ ನಿಲ್ಲುವ ಜನ ಗುಂಪಾಗಿರುವುದಲ್ಲದೆ ಮಾಸ್ಕ್‌ಕೂಡ ಧರಿಸದೆ ನಿರ್ಲಕ್ಷ್ಯ ತೋರುತ್ತಿದ್ದಾರೆ.ಇದರಿಂದ ಕೊರೊನಾ ಸೊಂಕು ಯಾರಿಂದ ಯಾರಿಗೆ ಬರುತ್ತದೆ ಎಂಬುದನ್ನು ಊಹಿಸಲು ಸಾಧ್ಯವಾಗದಂತಾಗಿದೆ.
ಇದನ್ನು ಕಂಡ ಅನೇಕ ಪ್ರಜ್ಞಾವಂತರು ಜನರ ನಿರ್ಲಕ್ಷ್ಯವನ್ನು ಕಂಡು ಬೇಸರ ವ್ಯಕ್ತಪಡಿಸುವುದಲ್ಲದೆ,ಕೂಡಲೆ ಬ್ಯಾಂಕ್ ಆಡಳಿತ ಮಂಡಳಿಯಾಗಲಿ ತಾಲೂಕು ಆಡಳಿತವಾಗಲಿ ಜನರನ್ನು ಸಾಲಾಗಿ ಮತ್ತು ಸಾಮಾಜಿಕ ಅಂತರದ ನಿಯಮದಂತೆ ನಿಲ್ಲಿಸಲು ಸಿಬ್ಬಂದಿಗಳನ್ನು ನೇಮಿಸಿಕೊಳ್ಳಬೇಕೆಂದು ಆಗ್ರಹಿಸುತ್ತಿದ್ದಾರೆ.