ಕಲಬುರಗಿ: ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಪಡಿತರ ಚೀಟಿದಾರರಿಗೆ ಎರಡು ತಿಂಗಳ ಪಡಿತರವನ್ನು ಏಕಕಾಲದಲ್ಲಿ ಉಚಿತವಾಗಿ ವಿತರಣೆ ಮಾಡಲಾಗುತ್ತಿದೆ. ಆದರೆ ಕೆಲವು ನ್ಯಾಯಬೆಲೆ ಅಂಗಡಿ ಮಾಲೀಕರು ಉಚಿತ ಪಡಿತರ ವಿತರಣೆ ಆದೇಶ ಉಲ್ಲಂಘಿಸಿ, ಪಡಿತರ ಚೀಟಿದಾರರಿಂದ 10 ರೂ. ರಿಂದ 20 ರೂ. ವರೆಗೆ ಹಣ ಪಡೆಯುತ್ತಿರುವುದು ಹಾಗೂ ತೂಕದಲ್ಲಿ ವ್ಯತ್ಯಾಸ ಮಾಡುತ್ತಿರುವ ಕುರಿತು ದೂರು ಬಂದ ಹಿನ್ನೆಲೆಯಲ್ಲಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಕಲಬುರಗಿ ಜಿಲ್ಲೆಯ ಒಟ್ಟು 07 ನ್ಯಾಯಬೆಲೆ ಅಂಗಡಿಗಳನ್ನು ಅಮಾನತ್ತುಗೊಳಿಸಲಾಗಿದೆ ಎಂದು ಕಲಬುರಗಿ ಜಿಲ್ಲಾಧಿಕಾರಿ ಬಿ. ಶರತ್ ಅವರು ತಿಳಿಸಿದ್ದಾರೆ.
ಆಳಂದ ತಾಲೂಕಿನ ಸಾವಳೇಶ್ವರ (ಮಾಲೀಕರು ಮತ್ತು ಅಧ್ಯಕ್ಷರು ಕವಿತಾ ಮಹಿಳಾ ಮಂಡಳ) ನ್ಯಾಯಬೆಲೆ ಅಂಗಡಿ ಸಂಖ್ಯೆ 85, ಹಿತ್ತಲಶಿರೂರು ಗ್ರಾಮದ (ಮಾಲೀಕರಾದ ಮಹಾದೇವಪ್ಪ ಸನಗುಂದಿ) ನ್ಯಾಯಬೆಲೆ ಅಂಗಡಿ ಸಂಖ್ಯೆ 48, ಬೆಟ್ಟ ಜೇವರ್ಗಿ ಗ್ರಾಮದ (ಮಾಲೀಕರಾದ ಭಾಗ್ಯಶ್ರೀ ಶಿವರುದ್ರಪ್ಪ) ನ್ಯಾಯಬೆಲೆ ಅಂಗಡಿ ಸಂಖ್ಯೆ 23, ಚಿಂಚೋಳಿ ತಾಲೂಕಿನ ನಿಮಾ ಹೊಸಳ್ಳಿ ಗ್ರಾಮದ (ಮಾಲೀಕರಾದ ಅಬ್ದುಲ್ ಖಾದಿರ್ ಖಾಜಾ ಮೋಯಿನುದ್ದಿನ್) ನ್ಯಾಯಬೆಲೆ ಅಂಗಡಿ ಸಂಖ್ಯೆ 78, ಧುತ್ತರಗಾ ಗ್ರಾಮದ (ಮಾಲೀಕರು ಹಾಗೂ ಕಾರ್ಯದರ್ಶಿ ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಯುವಕ ಸಂಘ) ನ್ಯಾಯಬೆಲೆ ಅಂಗಡಿ ಸಂಖ್ಯೆ 95, ಸೇಡಂ ತಾಲೂಕಿನ ಕುರುಕುಂಟಾ ಗ್ರಾಮದ (ಮಾಲೀಕರಾದ ಶಾಂತಯ್ಯ ಶರಣಯ್ಯ) ನ್ಯಾಯಬೆಲೆ ಅಂಗಡಿ ಸಂಖ್ಯೆ 51 ಹಾಗೂ ಕಲಬುರಗಿ ನಗರದ ಕಲಬುರಗಿ ಪಡಿತರ ಪ್ರದೇಶದಲ್ಲಿನ (ಮಾಲೀಕರಾದ ಶಿವಶರಣಪ್ಪ ಮಾಳಪ್ಪಾ ಬರಗಾಲಿ) ನ್ಯಾಯಬೆಲೆ ಅಂಗಡಿ ಸಂಖ್ಯೆ 164 ನ್ನು ಅಮಾನತ್ತುಗೊಳಿಸಲಾಗಿದೆ. ನ್ಯಾಯಬೆಲೆ ಅಂಗಡಿದಾರರು ಪಡಿತರ ಚೀಟಿದಾರರಿಂದ ಹಣ ವಸೂಲಿ ಮಾಡುತ್ತಿರುವ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ತಪಾಸಣೆ ನಡೆಸಿ ಕ್ರಮಕೈಗೊಳ್ಳಲಾಗಿದೆ.
ಅಕ್ರಮವಾಗಿ ಪಡಿತರ ಅಕ್ಕಿ ಹಾಗೂ ಗೋಧಿಯನ್ನು ದಾಸ್ತಾನು ಮಾಡಿ ಕಾಳಸಂತೆಯಲ್ಲಿ ಮಾರಾಟ ಮಾಡಲು ಕಲಬುರಗಿ ನಗರದ ಕಪನೂರ ಕೈಗಾರಿಕಾ ಪ್ರದೇಶದಲ್ಲಿರುವ ಶ್ರೀ ರಾಮಲಿಂಗೇಶ್ವರ ದಾಲ್ ಮತ್ತು ಪ್ಲೋರ್ ಮಿಲ್‍ನಲ್ಲಿ ಸಂಗ್ರಹಿಸಿಟ್ಟಿದ್ದ 187.22 ಕ್ವಿಂಟಲ್ ಅಕ್ಕಿ, 72.68 ಕ್ವಿಂಟಲ್ ಗೋಧಿ, 36 ಕ್ಷೀರ ಭಾಗ್ಯ ಹಾಲಿನ ಪೌಡರ್ ಪಾಕೇಟ್, ಎರಡು ತೂಕದ ಯಂತ್ರ ಹಾಗೂ ಆಹಾರ ಸಾಮಗ್ರಿಗಳನ್ನು ಸಾಗಿಸಲು ಬಳಸುತ್ತಿದ್ದ ಟಾಟಾ 407 ಟೆಂಪೊ ವಾಹನವನ್ನು ಜಪ್ತಿಪಡಿಸಿ ಅಗತ್ಯ ವಸ್ತುಗಳ ಕಾಯ್ದೆ 1955 ರ ಸೆಕ್ಷೆನ್ 3 ಮತ್ತು 7 ರಡಿ ಕಲಬುರಗಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ಅವರು ತಿಳಿಸಿದ್ದಾರೆ.
ಪಡಿತರ ವಿತರಣೆಗೆ ಯಾರಾದರೂ ಹಣ ಕೇಳಿದ್ದಲ್ಲಿ ಶಿಸ್ತು ಕ್ರಮ: ಕಲಬುರಗಿ ಜಿಲ್ಲೆಯಲ್ಲಿ ಇನ್ನಿತರ ನ್ಯಾಯಬೆಲೆ ಅಂಗಡಿದಾರರು ಕಡಿಮೆ ಪ್ರಮಾಣದಲ್ಲಿ ಪಡಿತರ ವಿತರಿಸುವುದು, ಹಣ ಪಡೆಯುವುದು, ಸರಿಯಾದ ಸಮಯಕ್ಕೆ ನ್ಯಾಯಬೆಲೆ ಅಂಗಡಿಯನ್ನು ತೆರೆಯದಿರುವುದು ಇನ್ನೂ ಮುಂತಾದ ಲೋಪದೋಷಗಳು ಕಂಡುಬಂದಲ್ಲಿ ಅಥವಾ ಪಡಿತರ ಚೀಟಿದಾರರ ದೂರು ಸ್ವೀಕೃತವಾದಲ್ಲಿ ಅಂತಹ ನ್ಯಾಯಬೆಲೆ ಅಂಗಡಿಗಳ ವಿರುದ್ಧ ಕರ್ನಾಟಕ ಅಗತ್ಯ ವಸ್ತುಗಳ ಸಾರ್ವಜನಿಕ ವಿತರಣಾ ಪದ್ಧತಿ (ನಿಯಂತ್ರಣ) ಆದೇಶ 2016 ರನ್ವಯ ಅಮಾನತ್ತು/ರದ್ದುಪಡಿಸಲು ಸೂಕ್ತ ಕ್ರಮಕೈಗೊಳ್ಳಲಾಗುವುದೆಂದು ಜಿಲ್ಲೆಯ ಎಲ್ಲಾ ನ್ಯಾಯಬೆಲೆ ಅಂಗಡಿ ಮಾಲೀಕರುಗಳಿಗೆ ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.