ಬಸವಣ್ಣ ಛೀ ಮಾರಿ ಹಾಕಿದ್ದು ಯಾರಿಗೆ?

0
184

ಸಮಾಜ ಸುಧಾರಣೆಯೇ ವಚನ ಚಳವಳಿಯ ಕೇಂದ್ರಬಿಂದು ಮಾಡಿಕೊಂಡಿದ್ದ ಬಸವಣ್ಣನವರು “ಎಡದ ಕೈಯಲ್ಲಿ ಸುರೆ ಮಾಂಸ, ಬಲದ ಕೈಯಲ್ಲಿ ಕತ್ತಿ” ಇದ್ದರೂ ಅಂಥವರನ್ನು ಅಕ್ಕರೆಯಾಗಿ ಕಂಡವರು. ಬಸವಣ್ಣನವರ ಈ ನಡವಳಿಕೆ ಕೆಲವು ಜನರಿಗೆ ತಪ್ಪಾಗಿ ಕಾಣಬಹುದು. ಆದರೆ ಬಸವಣ್ಣನವರು ವ್ತಕ್ತಿಯ ಅವಗುಣಕ್ಕೆ ಮುನಿವವರಾಗಿದ್ದರೆ ವಿನಃ ಅವಲ್ಲಿರುವ ಶಿವಗುಣಕ್ಕೆ ಮುನಿವವರಾಗಿರಲಿಲ್ಲ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು.

ವ್ಯಷ್ಟಿಯಾಗಿ ತುಂಬ ಮೃದು ಹೃದಯಿ, ಮಾತೃ ಹೃದಯಿಯಾಗಿದ್ದ ಬಸವಣ್ಣನವರು ಸಮಷ್ಟಿಯಾಗಿ ತುಂಬಾ ಖಡಕ್, ಕಠಿಣ ಹೃದಯಿ ಆಗಿದ್ದರು. ವ್ಯಕ್ತಿಗಳು ಖಾಸಗಿಯಾಗಿ ಎಷ್ಟೇ ದೊಡ್ಡ ತಪ್ಪುಗಳನ್ನು ಮಾಡಿದವರಿದ್ದರೂ ಅಂಥವರನ್ನು ಉದಾರವಾಗಿ ಕ್ಷಮಿಸುತ್ತಿದ್ದರು. ಅವರನ್ನು ಸಾಕ್ಷಾತ್ ಕೂಡಲಸಂಗಮದೇವನ ಸ್ವರೂಪಿಗಳು ಎಂದು ಕರೆದು ಅವರ ತಪ್ಪುಗಳನ್ನು ಮನ್ನಿಸುತ್ತಿದ್ದರು ಕೂಡ! ಆದರೆ ಅದೇ ಜನಗಳೇ ಸಾರ್ವತ್ರಿಕವಾಗಿ ಒಂದು ಸಣ್ಣ ತಪ್ಪು ಮಾಡಿದರೂ ಅದನ್ನು ಮಹಾ ಅಪರಾಧವೆಂದು ಪರಿಗಣಿಸಿ ಸಾರ್ವಜನಿಕರ ಎದುರಲ್ಲೇ ಬಹಿರಂಗವಾಗಿ ಅವರಿಗೆ ಛೀ ಮಾರಿ ಹಾಕುತ್ತಿದ್ದರು.

Contact Your\'s Advertisement; 9902492681
ಲೋಕದ ಡೊಂಕ ನೀವೆಕೆ ತಿದ್ದುವಿರಿ?
ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ
ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ
ನೆರೆಮನೆಯ ದುಃಖಕ್ಕೆ ಅಳುವವರ
ಮೆಚ್ಚ ಕೂಡಲಸಂಗಮದೇವ
-ಬಸವಣ್ಣನವರು

ಮೇಲಿನ ಈ ವಚನವು ವ್ಯಕ್ತಿಯ ಅಂತರಂಗ-ಬಹಿರಂಗ ಶುದ್ಧಿಯ ಬಗ್ಗೆ ಹೇಳುವಂತಿದ್ದು, ವ್ಯಕ್ತಿಗಳ ವೈಯಕ್ತಿಕ ಒಲವು-ನಿಲುವುಗಳೇ ಸಾಮಾಜಿಕ ನಿಲುವುಗಳಾಗಿ ಪರಿಣಮಿಸುತ್ತವೆ. ಹೀಗಾಗಿ ವ್ಯಕ್ತಿಯಾದವನಿಗೆ ಸಾಮಾಜಿಕ ಹೊಣೆಗಾರಿಕೆಯೂ ಇದೆ ಎಂಬುದನ್ನು ಮೇಲ್ನೋಟಕ್ಕೆ ವಿವರಿಸುವಂತಿದೆ. ಆದರೆ ಈ ವಚನದ ಒಡಲು ಬೇರೆಯದೇ ಅರ್ಥವನ್ನು ಕೊಡುವಂತಿದೆ.

ತಮ್ಮ ತಟ್ಟೆಯಲ್ಲಿ ಕತ್ತೆ ಸತ್ತು ಬಿದ್ದಿದ್ದರೂ ಇನ್ನೊಬ್ಬರ ತಟ್ಟೆಯಲ್ಲಿನ ನೊಣಕ್ಕೆ ಪರಾಂಬರಿಸುವ ಆಷಾಢಭೂತಿಗಳನ್ನು ಬಸವಣ್ಣ ಇಲ್ಲಿ ವಿಡಂಬಿಸಿದ್ದಾನೆ. ಅವರು ತಮ್ಮನ್ನು ತಾವು ಮುಟ್ಟಿಕೊಂಡು ನೋಡುವಂತೆ ಕಟುವಾಗಿ ಟೀಕಿಸಿದ್ದಾರೆ. ಬೇರೆಯವರ ಕಡೆ ಬೆರಳು ಮಾಡಿ ತೋರಿಸುವವರ ಒಳ ಹುನ್ನಾರ ಏನೆಂದರೆ, ತಮ್ಮ ಕಡೆ ಯಾರೂ ನೋಡಿರಬಾರದು ಎಂಬುದು. ಆದ್ದರಿಂದ ಮೊದಲು ನಿಮ್ಮ ತನುವಿನ ಕಡೆ, ಮನದ ಕಡೆಗೆ ನೋಡಿಕೊಳ್ಳಿರಿ. ನಿಮಗಾಗಿ ನೀವು ಒಮ್ಮೆ ಅತ್ತು ನೋಡಿರಿ. ಆಮೇಲೆ ಇನ್ನೊಬ್ಬರಿಗಾಗಿ ಮತ್ತೆ ಅಳುವಿರಂತೆ! ಲೋಕದ ಡೊಂಕು ತಿದ್ದಲು ನೀವ್ಯಾರು? ಮೊದಲು ನಿಮ್ಮ ನಿಮ್ಮ ಡೊಂಕುಗಳನ್ನು ತಿದ್ದಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ.

ಈ ವಚನ ಏಕಕಾಲದಲ್ಲಿಯೇ ವ್ಯಷ್ಟಿಯನ್ನು ಸಮಷ್ಟಿಯನ್ನು ಉದ್ದೇಶಿಸಿ ಹೇಳಿದಂತಿದೆ. ತಮ್ಮ ತಪ್ಪುಗಳನ್ನು ಹಾಗೆಯೇ ಉಳಿಸಿಕೊಂಡು ಇನ್ನೊಬ್ಬರ ತಪ್ಪುಗಳನ್ನು ಎಣಿಸಲು, ತಿದ್ದಲು ಹೊರಟಿದ್ದ ವ್ಯಕ್ತಿಯ ಇಬ್ಬಗೆಯ ನೀತಿಯನ್ನು ಖಂಡಿಸುತ್ತಲೇ ಸಮಷ್ಟಿ ಹಿತದ ಕುರಿತು ಚಿಂತಿಸುತ್ತಾರೆ. ಅನೇಕ ಸಂದರ್ಭದಲ್ಲಿ ಇಂತಹ ಆಷಾಢಭೂತಿಗಳೇ ಸಮಾಜದ ಹಿತಕ್ಕೆ ಧಕ್ಕೆ ತರುತ್ತಿದ್ದುದನ್ನು ಗಮನಿಸುತ್ತಿದ್ದ ಬಸವಣ್ಣನವರಿಗೆ ಈ ಗೋಸುಂಬೆಗಳನ್ನು ಸಹ ಬಿಟ್ಟು ಕೊಡಲು ಮನಸ್ಸಿಲ್ಲ. ಅವರನ್ನೂ ಬದಲಾವಣೆಗೆ ಒಳಪಡಿಸಬೇಕಿದೆ ಅವರಿಗೆ. ಅದಕ್ಕಾಗಿಯೇ “ಲೋಕದ ಡೊಂಕ ನೀವೇಕೆ ತಿದ್ದುವಿರಿ?” ಎಂದು ಅವರಿಗೆ ಕೇಳುತ್ತಾರೆ.

ವ್ಯಕ್ತಿ ತನ್ನನ್ನು ತಾನು ತಿದ್ದಿಕೊಳ್ಳುವುದನ್ನು ಕಲಿತರೆ ಆತ ಮುಂದೆ ಸಾರ್ವತ್ರಿಕ ಬದಲಾವಣೆಗೆ ಕಾರಣನಾಗುತ್ತಾನೆ. ನೂರು ಜನ ಕಳ್ಳರಲ್ಲಿ ಒಬ್ಬರಾದರೂ ಕದಿಯುವುದನ್ನು ಬಿಟ್ಟರೆ ಎಷ್ಟು ಭಾಗ ಒಳ್ಳೆಯದು ಮಾಡಿದಂತಾಗುತ್ತದೆ. ಜನಸಮುದಾಯ ಈ ರೀತಿ ತಮ್ಮನ್ನೇ ತಾವು ಇಣುಕಿ ನೋಡಿಕೊಳ್ಳುವ ಗುಣ ಬೆಳೆಸಿಕೊಳ್ಳಬೇಕು. ಅಂದಾಗ ಮಾತ್ರ ಸಾರ್ವಜನಿಕ ಶುದ್ಧೀಕರಣ ಆಗುತ್ತದೆ. ಯಾರಿಗೆ ತಮ್ಮ ನೋವು ತಮಗೆ ಕಾಣಿಸುವುದಿಲ್ಲವೋ ಅವರಿಗೆ ಇನ್ನೊಬ್ಬರ ನೋವು ಅರ್ಥವಾಗುವುದಾದರೂ ಹೇಗೆ? ತಮ್ಮ ನೋವಿಗೆ ತಾವು ಧ್ವನಿಕೊಡದವರು ಇನ್ನೊಬ್ಬರ ನೋವಿಗೆ ಹೇಗೆ ಸ್ಪಂದಿಸಬಲ್ಲರು? ಒಂದು ವೇಳೆ ಯಾರಾದರೂ ಹಾಗೆ ವರ್ತಿಸಿದರೆ ಅದೆಲ್ಲ ಬರೀ ಬೊಗಳೆ ಬೂಟಾಟಿಕೆಯಾಗಿರುತ್ತದೆ. ಆದ್ದರಿಂದ ಅಂಥವರನ್ನು ಸಾರ್ವಜನಿಕರು ನಂಬಬಾರದು ಎಂಬ ಸಾರ್ವತ್ರಿಕ ಸಂದೇಶ ಸಾರುವ ವಚನ ಇದಾಗಿದೆ.

ಇನ್ನೊಬ್ಬರ ದುಃಖದ ಕಾರಣ ತಿಳಿಯಬೇಕಾದರೆ ಮೊದಲು ನೀನು ದುಃಖವನ್ನು ಅನುಭವಿಸಿರಬೇಕು. ಅಂಥವರಿಗೆ ಮಾತ್ರ ಲೋಕವನ್ನು ಸಂತೈಸುವ ಗುಣ ಬರಲು ಸಾಧ್ಯ. ಇಲ್ಲದಿದ್ದಲ್ಲಿ ಅದು ಕೇವಲ ಡಂಬಾಚಾರವಾಗುತ್ತದೆ. ಬಹಿರಾಡಂಬರಕ್ಕಿಂತ ಅಂತರಂಗದ ಕಾಳಜಿ, ಕಕ್ಕುಲಾತಿಯಿಂದ ಮಾತ್ರ ಸಮಾಜವನ್ನು ತಿದ್ದಬಹುದು ಎಂಬುದನ್ನು ಸೂಚ್ಯವಾಗಿ ತಿಳಿಸುವ ವಚನ ಇದಾಗಿದೆ.

ಏನೋನೋ ಹೇಳಿ ಜನರನ್ನು ಮೋಸಗೊಳಿಸುವ ಬದಲಾಗಿ, ಜನರನ್ನು ವಾಸ್ತವಲೋಕಕ್ಕೆ ಹತ್ತಿರವಾಗಿ ಬದುಕುವಂತೆ ಮಾಡುವುದು “ತಿದ್ದುವ” ಕೆಲಸ ಆಗಬೇಕಿದೆ. ಈ ತಿದ್ದುವ ಪ್ರಕ್ರಿಯೆ ತನ್ನಿಂದಲೇ ಆರಂಭಗೊಳ್ಳಬೇಕು. ಅಂದಾಗ ಮಾತ್ರ ಲೋಕ ಸುಧಾರಣೆ ಸಾಧ್ಯ. ಲೋಕ ಸುಧಾರಣೆಗೆ ಪ್ರತಿಯೊಬ್ಬರ ಸಹಕಾರವೂ ಅಗತ್ಯ ಎಂಬುದನ್ನು ಈ ವಚನ ಪ್ರತಿಪಾದಿಸುತ್ತದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here