ಕಲಬುರಗಿ: ರೈತರ ಹಿತ ಗಮನದಲ್ಲಿಟ್ಟುಕೊಂಡು ಮತ್ತು ಬೇಸಿಗೆ ಸಮಯ ಇದಾಗಿರುವುದರಿಂದ ಕೃಷಿ ಚಟುವಟಿಕೆ ಸಾಗಲು ಮತ್ತು ಕಟ್ಟಡ ನಿರ್ಮಾಣ ಕಾರ್ಯಕ್ಕೆ ಸುಲಲಿತವಾಗಿ ನಡೆಯಲು ಕಂಟೇನ್‍ಮೆಂಟ್ ಝೋನ್ ಪ್ರದೇಶ ಹೊರತುಪಡಿಸಿ ಉಳಿದ ಪ್ರದೇಶಗಳಿಗೆ ಲಾಕ್ ಡೌನ್‍ದಿಂದ ವಿನಾಯ್ತಿ ನೀಡಲಾಗಿದೆ ಎಂದು ರಾಜ್ಯದ ಉಪಮುಖ್ಯಮಂತ್ರಿಗಳು, ಲೋಕೋಪಯೋಗಿ, ಸಮಾಜ ಕಲ್ಯಾಣ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಎಂ. ಕಾರಜೋಳ ಅವರು ತಿಳಿಸಿದರು.
ಗುರುವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಕೆರೆ-ಕಟ್ಟಡ ನಿರ್ಮಾಣ, ಚೆಕ್ ಡ್ಯಾಂ, ರಸ್ತೆ ಕಾಮಗಾರಿಗಳು ಕೈಗೊಳ್ಳಲು ಮತ್ತು ತಮ್ಮ ಹೊಲದಲ್ಲಿ ಬದು ನಿರ್ಮಾಣ ಮಾಡಿಕೊಳ್ಳಲು ಬಡ ಕೂಲಿ ಕಾರ್ಮಿಕರಿಗೆ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನೀಡಲು ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ ಎಂದರು.
ಹೊರ ಜಿಲ್ಲೆ, ರಾಜ್ಯ, ದೆಹಲಿ ಮತ್ತು ವಿದೇಶದಿಂದ ಮರಳಿದವರು ಸ್ವಯಂಪ್ರೇರಿತರಾಗಿ ಆರೋಗ್ಯ ತಪಾಸಣೆಗೆ ಒಳಪಡುವ ಮೂಲಕ ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು. ಇಲ್ಲದಿದ್ದಲ್ಲಿ ಪೊಲೀಸ್ ಇಲಾಖೆಯ ನೆರವಿನಿಂದ ತಪಾಸಣೆಗೆ ಒಳಪಡಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಕೊರೋನಾ ಸೊಂಕು ಪತ್ತೆಯಾದ ಪ್ರದೇಶವನ್ನು ಕಂಟೇನ್‍ಮೆಂಟ್ ಝೋನ್ ಎಂದು ಗುರುತಿಸುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿನ ಪ್ರದೇಶದಲ್ಲಿ ಸಂಪೂರ್ಣ ಸಂಚಾರ ನಿಷೇಧಿಸಲಾಗುತ್ತದೆ. ಹೀಗಾಗಿ ಪ್ರದೇಶದ ಜನರು ಅನಗತ್ಯ ಮನೆಯಿಂದ ಹೊರಬರಬಾರದು ಎಂದು ಸಚಿವರು ಮನವಿ ಮಾಡಿದರು.