ದೇವರಿಗೆ ಸವಾಲು ಹಾಕಿದ ಶರಣರು

0
77

೧೨ನೇ ಶತಮಾನದಲ್ಲಿ ನಡೆದ ವಚನ ಚಳವಳಿ ಸಮಾಜೋದ್ಧಾರ್ಮಿಕವಾದ ಒಂದು ವಿನೂತನ ಚಳವಳಿ. ಸಮಾಜದಲ್ಲಿನ ಅನಿಷ್ಟ ಪದ್ಧತಿ, ಮೂಢನಂಬಿಕೆ, ಕಂದಾಚಾರಗಳನ್ನು ನಿವಾರಿಸುವ ಮೂಲಕ ಬದುಕಿನ ಸಾರ್ಥಕತೆಯ ಮಾರ್ಗ ತೋರಿದ ವಿಶಿಷ್ಟ ಚಳವಳಿ. ಮನುಷ್ಯ ಬದುಕಿಗೆ ಕಾಯಕ-ದಾಸೋಹ ಎಂಬ ಎರಡು ಹೊಸ ಮಂತ್ರಗಳನ್ನು ಬೋಧಿಸುವುದರ ಜೊತೆಗೆ ಹಾಗೆಯೇ ಬದುಕಿದ ಶರಣರು ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಶ್ರೀಮಂತಗೊಳಿಸಿದವರು.

ತಾವು ಮಾಡುವ ಕಾಯಕವನ್ನೇ ತಮ್ಮ ಅಡ್ಡ ಹೆಸರುಗಳನ್ನಾಗಿ ಬಳಸುವುದರ ಮೂಲಕ ಜಾತಿ ನಿರ್ಮೂಲನೆಗೆ ತೊಡಗಿದ ಶರಣರು ತಮ್ಮ ಕಾಯಕದ ಉಪಕರಣಗಳಿಂದಲೇ ಅಧ್ಯಾತ್ಮವನ್ನು ಬೋಧಿಸಿದರು. ಸಾರ್ಥಕ ಬದುಕಿಗೆ ಸೂತ್ರಗಳನ್ನು ಹೇಳಿದರು. ಕಾಯಕವೇ ಕೈಲಾಸ, ಕಾಯವೇ ಕೈಲಾಸ ಎಂದು ಕರೆಯುವ ಮೂಲಕ ದೇವರು, ಧರ್ಮ, ಸಮಾಜವನ್ನು ಕುರಿತು ತುಂಬಾ ವೈಜ್ಞಾನಿಕ ಮತ್ತು ವಾಸ್ತವಿಕ ವಿಚಾರಗಳನ್ನು ಹೇಳಿದ್ದಾರೆ. ೧೨ನೇ ಶತಮಾನ ಎಂಬುದು ತಿರುವು ಮುರುವು ಆಗಿ ೨೧ನೇ ಶತಮಾನ ಆಗಿರುವ ಈ ಸಂದರ್ಭದಲ್ಲೂ ಶರಣರ ವಿಚಾರಗಳು ಪ್ರಸ್ತುತವಾಗಿವೆ.

ಒಡಲುಗೊಂಡವ ಹಸಿವ; ಒಡಲುಗೊಂಡವ ಹುಸಿವ
ಒಡಲುಗೊಂಡವನೆಂದು
ನೀನೆನ್ನ ಜಡಿದೊಮ್ಮೆ ನುಡಿಯದಿರ
ನೀನೆನ್ನಂತೆ ಒಡಲುಗೊಂಡು ನೋಡಾ! ರಾಮನಾಥ
Contact Your\'s Advertisement; 9902492681

ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಮುದನೂರಿನ ಜೇಡರ ದಾಸಿಮಯ್ಯ ಹಾಗೂ ಇವರ ಸತಿ ದುಗ್ಗಳೆಯ ಕಾಯಕ ನೇಯ್ಗೆ ಆಗಿತ್ತು. ರಾಮನಾಥ ಅಂಕಿತದಲ್ಲಿ ವಚನಗಳನ್ನು ಬರೆದಿದ್ದಾರೆ. ೧೭೬ ವಚನಗಳು ದುಗ್ಗಳೆಯ ಎರಡು ವಚನಗಳು ಪ್ರಕಟವಾಗಿವೆ. ಜೇಡರ ದಾಸಿಮಯ್ಯ ಅವರನ್ನು ಆದ್ಯ ವಚನಕಾರ ಎಂದು ಗುರುತಿಸಲಾಗುತ್ತದೆ. ಅವರು ಬರೆದ ವಚನಗಳ ಬಗ್ಗೆ ಸಾಕಷ್ಟು ಚರ್ಚೆ, ಚಿಂತನೆಯ ಜೊತೆಗೆ ಅವರ ಹುಟ್ಟೂರಿನ ಬಗೆಗೂ ಮತ್ತಷ್ಟು ಜಿಜ್ಞಾಸೆ ನಡೆದಿದೆ. ಎಲ್ಲರೂ ತಮ್ಮ ಮೂಗಿನ ನೇರಕ್ಕೆ ತಮ್ಮ ಚಿಂತನಾ ಲಹರಿ ಹರಿಯಬಿಟ್ಟಿರುವುದನ್ನು ಕಾಣಬಹುದಾಗಿದೆ. ಆದರೆ ಅವರ ಬಗ್ಗೆ ಶಾಸನಾಧಾರಿತ ಮತ್ತು ಸಾಕ್ಷಾಧಾರಿತ ಅಧ್ಯಯನ ಈವರೆಗೆ ನಡೆದಿಲ್ಲ. ಯಾವುದೇ ಒಬ್ಬ ವ್ಯಕ್ತಿ ಇಲ್ಲವೇ ಒಂದು ವಿಷಯ ಅಥವಾ ಚರಿತ್ರೆಯ ಬಗ್ಗೆ ಸಾಕ್ಷಾಧಾರಗಳಿಲ್ಲದೆ ಮಾತನಾಡುವುದು ಇಲ್ಲವೇ ಬರೆಯುವುದೆಂದರೆ ಅದು ಸುಮ್ಮನೆ ತಿಪ್ಪೆ ಸಾರಿಸಿದಂತಾಗುತ್ತದೆ. ಅಂತಹ ತಿಪ್ಪೆ ಸಾರಿಸುವ ಕೆಲಸ ಮಾಡುವುದಕ್ಕಿಂತ ಸುಮ್ಮೆನೆ ಕೂಡುವುದೇ ವಾಸಿ ಎಂದು ಒಮ್ಮೊಮ್ಮೆ ಅನ್ನಿಸುತ್ತದೆ.

“ಮರದೊಳಗೆ ಮಂದಾಗ್ನಿಯ ಉರಿಯದಂತಿರಿಸಿದೆ” ಎಂದು ದೇವರ ಬೆರೆಸುವಿಕೆಗೆ ಬೆರಗುಗೊಂಡಿದ್ದ ದಾಸಿಮಯ್ಯನವರು ತಮ್ಮ ಈ ವಚನದಲ್ಲಿ ದೇವರಿಗೆ ಸವಾಲು ಹಾಕಿದ್ದಾರೆ. ಬಸವಾದಿ ಶರಣರಿಗಿಂತ ಪೂರ್ವದ ವಚನಕಾರನ ಈ ನಿಲುವು ಬಸವಾದಿ ಶರಣರಲ್ಲಿ ಸಹಜವಾಗಿಯೇ ಬಂದಿತು ಎಂದರೆ ಬಹುಶಃ ತಪ್ಪಾಗಲಿಕ್ಕಿಲ್ಲ. ಒಡಲುಗೊಂಡಿರಬೇಕಾದರೆ ಹಸಿವು ಹಾಗೂ ಹುಸಿ ಮಾತನಾಡುವುದು ಸಹಜ. ಆದರೆ ಮಾತು ಮಾತಿಗೆ ನೀನು ನನ್ನನ್ನು ಒಡಲುಗೊಂಡವ ಎಂದು ಜರಿಯಬೇಡ. ಹೀಗೆ ನನ್ನನ್ನು ಜರಿಯುವ ಮುನ್ನ ನೀನೊಮ್ಮೆ ಎನ್ನಂತೆ ಒಡಲುಗೊಂಡು ನೋಡು ಎಂಬ ಪ್ರಶ್ನೆ ಕೇಳುತ್ತ ಆ ದೇವರನ್ನೇ ಇಕ್ಕಟ್ಟಿಗೆ ಸಿಲುಕಿಸುವ ನೈತಿಕ ಮತ್ತು ಸಾತ್ವಿಕ ಧೈರ್ಯ ವಚನಕಾರರಿಗಲ್ಲದೇ ಇನ್ನಾರಿಗುಂಟು?

ಎಲ್ಲವೂ ನೀನಿಟ್ಟಂತೆ, ನಿನ್ನ ಕೃಪೆಯೊಂದಿದ್ದರೆ ಸಾಕು ಎಂದು ದೇವರಲ್ಲಿ ಮೊರೆಯಿಡುವಾಗ, ನೀನೊಮ್ಮೆ ಎನ್ನಂತೆ ಒಡಲುಗೊಂಡು ನೋಡು ಎಂದು ಪ್ರಶ್ನಸಿರುವುದು ದಾಸಿಮಯ್ಯನ ಧೈರ್ಯ ಎಂಥದು ಎಂಬುದನ್ನು ತೋರಿಕೊಡುತ್ತದೆ. ಇಂತಹ ಒಬ್ಬ ವಚನಕಾರ ನಮ್ಮ ನಾಡಿನವರು. ಅದರಲ್ಲೂ ಸಗರನಾಡಿನವರು ಎಂಬುದು ಇನ್ನೂ ಹೆಮ್ಮೆಯ ಸಂಗತಿ! ಕನ್ನಡ ಸಾಹಿತ್ಯಕ್ಕೆ ವಿಶ್ವಮಾನ್ಯತೆ ತಂದುಕೊಟ್ಟ ಕನ್ನಡದ ಮೊದಲ ವಚನಕಾರ ದೇವರ ದಾಸಿಮಯ್ಯ ಎಂಬುದಕ್ಕಿಂತ ಮಹತ್ವದ ಸಂಗತಿ ಬೇರೋಂದಿಲ್ಲ.

ಬಸವಣ್ಣನವರ ನೇತೃತ್ವದಲ್ಲಿ ನಡೆದ ಈ ವಚನ ಚಳವಳಿಗೆ ಆಕರ್ಷಿತರಾಗಿ ನಾಡಿನ ವಿವಿಧ ಮೂಲೆ ಮೂಲೆಗಳಿಂದ ಅಲ್ಲದೆ ಕಾಶ್ಮೀರ, ಅಫಘಾನಿಸ್ತಾನ ಮುಂತಾದ ಕಡೆಗಳಿಂದ ಅನೇಕ ಶರಣರು ಬಸವಕಲ್ಯಾಣಕ್ಕೆ ಬಂದು ನೆಲೆಸಿದರು. ಅದೇರೀತಿಯಾಗಿ ಕಲ್ಯಾಣ ಕರ್ನಾಟಕ ಭಾಗದ ಹತ್ತೆಂಟು ಜನ ಶರಣರು ಈ ಚಳವಳಿಯಲ್ಲಿ ಭಾಗವಹಿಸಿದ್ದರು. ವಚನ ಸಾಹಿತ್ಯದ ಮುಂಗೋಳಿ ಎಂದು ಕರೆಯಲಾಗುವ ಮುದನೂರಿನ ಜೇಡರ ದಾಸಿಮಯ್ಯ ಹಾಗೂ ವಚನ ವಸಂತದ ಕೋಗಿಲೆ ಎಂದು ಕರೆಯಲಾಗುವ ಕೊನೆಯ ವಚನಕಾರ ಜೇವರ್ಗಿಯ ಷಣ್ಮುಖ ಶಿವಯೋಗಿಗಳ ತವರು ನೆಲ ಕಲ್ಯಾಣ ಕರ್ನಾಟಕ ಎಂಬುದು ಹೆಮ್ಮೆಯ ವಿಷಯ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here