ವಾಡಿ: ಪ್ರತಿ ವರ್ಷ ವಾಡಿ ನಗರದಲ್ಲಿ ಬೌರ್ದಧ ಸಮಾಜದ ವತಿಯಿಂದ ಅಶೋಕ ಚಕ್ರ ಮೆರವಣಿಗೆ ಹಾಗೂ ಬ್ರಹತ್ ಸಾರ್ವಜನಿಕ ಸಭೆ ನಡೆಸುವುದು ಮತ್ತು ಏ.28 ರಂದು ಸಾವಿರಾರು ಜನರ ಮಧ್ಯೆ ಅಂಬೇಡ್ಕರ್ ಭಾವಚಿತ್ರ ಮೆರವಣಿಗೆ ಆಯೋಜಿಸುವುದು ಯಾವತ್ತಿಗೂ ತಪ್ಪಿರಲಿಲ್ಲ. ಆದರೆ ಈ ಬಾರಿ ಕೊರೊನಾ ಸಂಕಟ ಎದುರಾಗಿದ್ದರಿಂದ ಸಾಂಕ್ರಾಮಿಕ ರೋಗ ನಿಯಂತ್ರಣಕ್ಕಾಗಿ ಜಾರಿಗೊಳಿಸಲಾದ ಲಾಕ್‍ಡೌನ್ ಆದೇಶವನ್ನು ಗೌರವಿಸುವ ಮೂಲಕ ಸ್ಥಳೀಯ ಬೌದ್ಧ ಸಮಾಜದ ನಾಯಕರು, ಐತಿಹಾಸಿಕ ಜಯಂತಿಯನ್ನು ಮುಂದೂಡುವ ಮೂಲP ಬಾಬಾಸಾಹೇಬರ ಪ್ರತಿಮೆಗೆ ಕೇವಲ ಹೂಮಾಲೆ ಹಾಕಿ ಆದರ್ಶ ಮೆರೆದಿದ್ದಾರೆ.
ಮಂಗಳವಾರ ಬೆಳಗ್ಗೆ ಅಂಬೇಡ್ಕರ್ ವೃತ್ತಕ್ಕೆ ಆಗಮಿಸಿದ ಬೌದ್ಧ ಸಮಾಜದ ಕೆಲ ಮುಖಂಡರು, ಅಂಬೇಡ್ಕರ್ ಅವರ ಪಂಚಲೋಹದ ಪ್ರತಿಮೆಗೆ ಪುಷ್ಪಮಾಲೆ ಹಾಕಿ ಗೌರವಿಸಿದರು. ಐದು ಮೇಣದ ದೀಪಗಳನ್ನು ಬೆಳಗಿಸುವ ಮೂಲಕ ಧಮ್ಮ ಪ್ರಾರ್ಥನೆ ಬುದ್ಧಂ ಶರಣಂ ಗಚ್ಚಾಮಿ ಬೋಧಿಸಿ ಹತ್ತೇ ನಿಮಿಷದಲ್ಲಿ ಜಯಂತಿಗೆ ಮಂಗಳ ಹಾಡಿದರು. ಈ ವೇಳೆ ಮಾತನಾಡಿದ ಬೌದ್ಧ ಸಮಾಜದ ಅಧ್ಯಕ್ಷ ಟೋಪಣ್ಣ ಕೋಮಟೆ, ಎಂಥಹದ್ದೇ ಪ್ರಸಂಗಗಳು ಎದುರಾದರೂ ಏ.27 ಹಾಗೂ 28 ರಂದೇ ವಾಡಿಯಲ್ಲಿ ಜಯಂತಿ ನಡೆಯುತ್ತಿತ್ತು. ಬಾಬಾಸಾಹೇಬರು ವಾಡಿಗೆ ಬಂದು ಹೋಗಿ ಇಂದಿಗೆ 75 ವರ್ಷಗಳಾದವು. ಈ ವರ್ಷ ಹತ್ತಾರು ವೈಚಾರಿಕ ಕಾರ್ಯಕ್ರಮಗಳನ್ನು ರೂಪಿಸಲಾಗಿತ್ತು.
ಕೊರೊನಾ ರೋಗದ ಪರಿಣಾಮ ಜಯಂತಿ ಮುಂದೂಡಲಾಗಿದ್ದು, ಈ ದಿನ ಭಾವಚಿತ್ರ ಮಾಲಾರ್ಪಣೆಗೆ ಸೀಮಿತಗೊಳಿಸಿದ್ದೇವೆ ಎಂದರು. ಮುಖಂಡರಾದ ಚಂದ್ರಸೇನ ಮೇನಗಾರ, ಇಂದ್ರಜೀತ ಸಿಂಗೆ, ಗಿರಿಜಾಶಂಕರ ವರ್ಮಾ, ಶರಣಬಸು ಸಿರೂರಕರ, ಮಜರ್ ಹುಸೇನ್, ರಮೇಶ ಬಡಿಗೇರ, ಚಂದ್ರಶೇಖರ ಧನ್ನೇಕರ ಪಾಲ್ಗೊಂಡಿದ್ದರು.