ಕಲಬುರಗಿ: ವಿಶ್ವಗುರು ಬಸವಣ್ಣನವರ ೮೮೭ನೇ ಜಯಂತಿಯ ಸಂದರ್ಭದಲ್ಲಿ ಎತ್ತಿನ ಪೂಜೆ ಮಾಡುವ ಮೂಲಕ ಬಸವಣ್ಣನವರಿಗೆ ಹಾಗೂ ಅವರ ಅನುಯಾಯಿಗಳಿಗೆ ಅವಮಾನ ಮಾಡಿದ್ದು, ಕೂಡಲೇ ಅಖಿಲ ಭಾರತ ವೀರಶೈವ ಮಹಾಸಭೆಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರು ಬಹಿರಂಗವಾಗಿ ಕ್ಷಮೆ ಕೇಳಬೇಕು ಎಂದು ಜಾಗತಿಕ ಲಿಂಗಾಯತ ಮಹಾಸಭೆಯ ಜಿಲ್ಲಾ ಘಟಕದ ಅಧ್ಯಕ್ಷ ಪ್ರಭುಲಿಂಗ್ ಮಹಾಗಾಂವಕರ್ ಹಾಗೂ ಮಹಾ ಪ್ರಧಾನ ಕಾರ್ಯದರ್ಶಿ ಆರ್.ಜಿ. ಶೆಟಗಾರ್ ಅವರು ಒತ್ತಾಯಿಸಿದ್ದಾರೆ.
ಶಾಮನೂರು ಶಿವಶಂಕರಪ್ಪ ಅವರ ಕೃತ್ಯವು ಖಂಡನೀಯವಾಗಿದೆ. ಕೂಡಲೇ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು ಎಂದು ಅವರು ಜಂಟಿ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ. ವಿಶ್ವಗುರು ಬಸವಣ್ಣನವರ ಜಯಂತಿಯನ್ನು ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಆಚರಿಸುತ್ತಿರುವ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ೧೨ನೇ ಶತಮಾನದಲ್ಲಿ ಬಸವಣ್ಣನವರು ಬೋಧಿಸಿದ ತತ್ವಗಳು ವಿಶ್ವಕ್ಕೆ ಕೊರೋನಾ ಸಂಕಟ ತಂದಿರುವ ಸಂದರ್ಭದಲ್ಲಿ ಮಾನವ ಜನಾಂಗಕ್ಕೆ ಪ್ರೇರಣೆಯನ್ನು ನೀಡುತ್ತವೆ. ಜಗತ್ತಿನಾದ್ಯಂತ ಬಸವಣ್ಣನವರ ತತ್ವ ಪಾಲಿಸಲು ಕರೆ ನೀಡಿದರು.
ಆದಾಗ್ಯೂ, ಬಸವ ಜಯಂತಿಯನ್ನು ಮೊಟ್ಟ ಮೊದಲ ಬಾರಿಗೆ ದಾವಣಗೆರೆಯಲ್ಲಿ ಹರ್ಡೇಕರ್ ಮಂಜಪ್ಪನವರು ಪ್ರಾರಂಭಿಸಿದರು. ಅಂತಹ ಸ್ಥಳದಲ್ಲಿ ಶಾಮನೂರು ಶಿವಶಂಕರಪ್ಪ ಅವರು ಬಸವಣ್ಣನವರಿಗೆ ಅಪಮಾನವಾಗುವಂತಹ ಕೃತ್ಯ ಎಸಗಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಶಾಮನೂರು ಶಿವಶಂಕರಪ್ಪ ಅವರು ಎತ್ತಿನ ಪೂಜೆ ಮಾಡುವುದರ ಮೂಲಕ ವಿಶ್ವಗುರು ಬಸವಣ್ಣನವರಿಗೆ ಮತ್ತು ವಿಶ್ವದ ಬಸವಾಭಿಮಾನಿಗಳಿಗೆ ಅವಮಾನಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಅಖಿಲ ಭಾರತ ವೀರಶೈವ ಮಹಾಸಭಾಧ್ಯಕ್ಷರಾಗಿದ್ದುಕೊಂಡು ಬೇಜವಾಬ್ದಾರಿಯಿಂದ ಅಜ್ಞಾನವನ್ನು ಪ್ರದರ್ಶಿಸಿದ್ದಾರೆ. ಆ ಸಂಸ್ಥೆಯ ಪದಾಧಿಕಾರಿಗಳು ತಲೆತಗ್ಗಿಸಿ ನಾಚಿಕೆಪಡುವಂತಾಗಿದೆ. ಇಂಥವರಿಂದ ಸಮಾಜದ ಪ್ರಗತಿ ಹೇಗೆ ಸಾಧ್ಯ? ಎಂದು ಅವರು ಖಾರವಾಗಿ ಪ್ರಶ್ನಿಸಿದ್ದಾರೆ.
ಅಖಿಲ ಭಾರತ ವೀರಶೈವ ಮಹಾಸಭೆ ಹಾಗೂ ಜಿಲ್ಲಾ ಘಟಕದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಜವಾಬ್ದಾರಿಯಿಂದ ಹೊಣೆಗಾರಿಕೆ ಅರ್ಥ ಮಾಡಿಕೊಂಡು ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಶಾಮನೂರು ಶಿವಶಂಕರಪ್ಪ ಅವರು ಸಾರ್ವಜನಿಕ ಸಂಸ್ಥೆಯಲ್ಲಿ ಹೊಂದಿರುವ ಎಲ್ಲ ಸ್ಥಾನಮಾನಗಳಿಗೆ ಕಡ್ಡಾಯವಾಗಿ ನಿವೃತ್ತಿ ಹೊಂದಿ ವಿಶ್ರಾಂತಿ ಪಡೆಯಲು ಆದೇಶಿಸಬೇಕು. ಇಂತಹ ಅಜ್ಞಾನದ ಪ್ರಮಾದವನ್ನು ಮಾಡಿರುವುದಕ್ಕೆ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.