ಕಲಬುರಗಿ: ಕಾರ್ಮಿಕ ದಿನಾಚರಣೆ ಹಿನ್ನೆಲೆಯಲ್ಲಿ ಶ್ರಮಿಕರ ವರ್ಗಕ್ಕೆ ಶುಭಾಶಯ ತಿಳಿಸಿ, ಬಸವಣ್ಣನವರ ಕಾಯಕವೇ ಕೈಲಾಸ ತತ್ವದಂತೆ ಕಾರ್ಮಿಕರು ತಮ್ಮ ದುಡಿಮೆಯಲ್ಲೇ ದೇವರನ್ನು ಕಾಣುತಿದ್ದಾರೆ. ಆದರೆ, ಈಗ ಅವರ ಜೀವನ ಅತಂತ್ರ ಸ್ಥಿತಿಯಲ್ಲಿದೆ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.
ಕೊರೋನಾ ವೈರಸ್ ತಡೆಗೆ ಲಾಕ್ ಡೌನ್ ಘೋಷಿಸಿದ ನಂತರ ಕೂಲಿ ಕಾರ್ಮಿಕರನ್ನ ಕೇಂದ್ರ ಹಾಗೂ ರಾಜ್ಯ ಸರಕಾರಗಳು ನಿರ್ಲಕ್ಷಿಸಿವೆ ಎಂದು ಅಸಮಧಾನ ವ್ಯಕ್ತಪಡಿಸಿರುವ ಶಾಸಕರು ಲಾಕ್ ಡೌನ್ ನಂತರ ಬಹಳ ದೊಡ್ಡ ಸಂಖ್ಯೆಯ ವಲಸೆ ಕಾರ್ಮಿಕರು ನಿರುದ್ಯೋಗಿಗಳಾಗಿ ಒಂದೊತ್ತಿನ ಊಟಕ್ಕೂ ಪರದಾಡುವಂತಾಗಿದೆ.
ತಮ್ಮ ತಮ್ಮ ಊರುಗಳಿಗೆ ಬರಲಾಗದೇ ದೊಡ್ಡ ನಗರಗಳಲ್ಲಿ ಸಿಲುಕಿರುವ ಅವರು ಒಂದುಕಡೆಯಾದರೆ ಹಾಗೂ ವಾಪಸ್ ಊರಿಗೆ ಬಂದು ನಿರುದ್ಯೋಗಿಗಳಾಗಿರುವ ಭಾರೀ ಸಂಖ್ಯೆಯ ಕಾರ್ಮಿಕರು ಮತ್ತೊಂದು ಕಡೆಯಿದ್ದು ಅವರ ಸಹಾಯಕ್ಕಾಗಿ ಇದುವರೆಗೂ ಯಾವುದೇ ಯೋಜನೆ ಘೋಷಣೆಯಾಗಿಲ್ಲ ಎಂದು ಪ್ರಿಯಾಂಕ್ ಖರ್ಗೆ ಅವರು ಪುನರುಚ್ಚರಿಸಿದ್ದಾರೆ.
ಈ ಕೂಡಲೇ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕಾರ್ಮಿಕರ ಅನುಕೂಲಕ್ಕೆ ವಿಶೇಷ ಪ್ಯಾಕೇಜ್ ಘೋಷಿಸುವ ಮೂಲಕ ಅವರ ಬದುಕಿಗೆ ಒಂದು ಭದ್ರ ಬುನಾದಿ ಹಾಕಬೇಕಿದೆ ಎಂದು ಅವರು ಒತ್ತಿ ಹೇಳಿದ್ದಾರೆ.