ವಾಡಿ: ದೇಶದ ವಿವಿಧ ರಾಜ್ಯಗಳಿಗೆ ವಲಸೆ ಹೋಗಿರುವ ಕರ್ನಾಟಕದ ಕಾರ್ಮಿಕರನ್ನು ಅಗೌರವದಿಂದ ಕಾಣದೆ, ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸುವ ಮೂಲಕ ಗೌರವದಿಂದ ತವರಿಗೆ ಕರೆತರಬೇಕು ಎಂದು ಸೋಷಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಎಸ್‍ಯುಸಿಐ) ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಸಮಿತಿ ಸದಸ್ಯ, ವಾಡಿ ಕಾರ್ಯದರ್ಶಿ ಕಾಮ್ರೇಡ್ ವೀರಭದ್ರಪ್ಪ ಆರ್.ಕೆ ಸರಕಾರಕ್ಕೆ ಸಲಹೆ ನೀಡಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು ಗುಳೆ ಹೋಗಿ ಸಂಕಷ್ಟದಲ್ಲಿರುವ ಕಾರ್ಮಿಕರೊಂದಿಗೆ ಸರಕಾರ ನಡೆದುಕೊಳ್ಳುತ್ತಿರುವ ಅಮಾನವೀಯ ರೀತಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರಿಯಾದ ಯೋಜನೆ, ಪೂರ್ವ ತಯಾರಿ ಇಲ್ಲದೆ ಮಾಡಿದ ಲಾಕ್‍ಡೌನ್ ಘೋಷಣೆಯಿಂದಾಗಿ ನಮ್ಮ ರಾಜ್ಯವೂ ಸೇರಿದಂತೆ ದೇಶದ ವಿವಿದೆಢೆಗಳಲ್ಲಿ ಇರುವ ಕೋಟ್ಯಂತರ ವಲಸೆ ಕಾರ್ಮಿಕರ ಬದುಕು ಅತಂತ್ರವಾಗಿದೆ. ಕೊನೆಗೂ ವಲಸೆ ಕಾರ್ಮಿಕರಿಗೆ ತಮ್ಮ ಊರುಗಳಿಗೆ ವಾಪಸ್ಸಾಗಲು ಅವಕಾಶ ನೀಡಲಾಗಿದ್ದು, ಅವರ ಪ್ರಯಾಣದ ಮೂರುಪಟ್ಟು ವೆಚ್ಚವನ್ನು ಅವರೇ ಭರಿಸಬೇಕು ಎಂದು ಹೇಳುತ್ತಿರುವ ಸರಕಾರಗಳು ನಿರ್ದಯಿಯಾಗಿವೆ ಎಂದು ಟೀಕಿಸಿದ್ದಾರೆ.
ವಿದೇಶಗಳಿಂದ ವಿಮಾನಗಳಲ್ಲಿ ಭಾರತೀಯರನ್ನು ಉಚಿತವಾಗಿ ಕರೆಯಿಸಿಕೊಂಡ ಸರ್ಕಾರ, ವಾಯುಪಡೆಯ ಹೆಲಿಕಾಪ್ಟರ್‍ಗಳಲ್ಲಿ ದೇಶದಾದ್ಯಂತ ಹೂಮಳೆಗರೆಯಲು ಕೋಟ್ಯಾಂತರ ರೂಪಾಯಿ ಖರ್ಚು ಮಾಡಿದೆ. ಈಗ ಬಡ ಕಾರ್ಮಿಕರ ಪ್ರಯಾಣ ವೆಚ್ಚವನ್ನು ಭರಿಸಲು ಹಿಂದೇಟು ಹಾಕುತ್ತಿದೆ. ಸಾವಿರಾರು ಮಂದಿ ಪ್ರಯಾಣ ವೆಚ್ಚವನ್ನು ಭರಿಸಿ ತಮ್ಮ ಊರುಗಳಿಗೆ ಹೋದಮೇಲೆ ಕರ್ನಾಟಕ ಸರ್ಕಾರ ರಾಜಕೀಯ ಒತ್ತಡಕ್ಕೆ ಒಳಗಾಗಿ ಬಸ್ ಪ್ರಯಾಣವನ್ನು ಉಚಿತಗೊಳಿಸಿತು. ಕೇಂದ್ರ ಸರ್ಕಾರವೂ ಕೂಡ ರೈಲು ಪ್ರಯಾಣ ದರವನ್ನು ಮನ್ನಾ ಮಾಡಿರುವುದಾಗಿ ಹೇಳಿಕೊಂಡಿದೆ.
ಆದರೆ ಪತ್ರಿಕೆಗಳಲ್ಲಿ ವರದಿಯಾಗಿರುವಂತೆ ಇನ್ನೂ ಕೂಡ ಈ ಕುರಿತು ರಾಜ್ಯ ಸರ್ಕಾರಗಳಿಗೆ ಅಧಿಕೃತ ಆದೇಶ ನೀಡಿಲ್ಲ. ರಾಜ್ಯದ ವಲಸೆ ಕಾರ್ಮಿಕರು ರೈಲ್ವೆ ಟಿಕೆಟ್ ಪಡೆದು ಪ್ರಯಾಣಿಸಿದ್ದಾರೆ ಎಂದು ದೂರಿರುವ ವೀರಭದ್ರಪ್ಪ, ಕಾರ್ಮಿಕರನ್ನು ಉತ್ಪಾದನೆಯ ಸರಕುಗಳನ್ನಾಗಿ ಮಾತ್ರ ನೋಡದೆ, ಹೃದಯ, ಭಾವನೆಗಳುಳ್ಳ ಮಾನವರಂತೆ ಕಾಣಬೇಕು ಎಂದು ಒತ್ತಾಯಿಸಿದ್ದಾರೆ.