ಸುರಪುರ: ಈಗಾಗಲೆ ದೇಶಾದ್ಯಂತ ಲಾಕ್‍ಡೌನ್ ಘೋಷಣೆಯಾಗಿ ಅನಾವಶ್ಯಕವಾಗಿ ಜನರು ಹೊರಗೆ ಬರದಂತೆ ಆದೇಶ ಹೊರಡಿಸಲಾಗಿದೆ.
ಅಲ್ಲದೆ ಕೊರೊನಾ ಸೊಂಕು ಹರಡದಂತೆ ತಡೆಯಲು ವ್ಯಕ್ತಿಯಿಂದ ವ್ಯಕ್ತಿಗೆ ಆರು ಫೀಟ್‍ಗಳ ಅಂತರದ ಸಾಮಾಜಿಕ ಅಂತರ ಪಾಲನೆ ಹಾಗು ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಆದೇಶ ಹೊರಡಿಸಲಾಗಿದೆ.ಆದರೆ ಸರಕಾರಗಳ ನಿಯಮಗಳನ್ನು ಮೀರಿ ಮಾಸ್ಕ್ ಇಲ್ಲದೆ ಹೊರಗೆ ಬರುವವರಿಗೆ ದಂಡ ಹಾಕುವ ಪ್ರಕ್ರಿಯೆ ನಗರದಲ್ಲಿ ಆರಂಭಗೊಂಡಿದೆ.
ನಗರದ ನಗರಸಭೆ ಮುಂಬಾಗದಲ್ಲಿಯ ಮುಖ್ಯ ರಸ್ತೆಯ ಮೇಲೆ ಮಾಸ್ಕ್ ಇಲ್ಲದೆ ಬಂದ ಬೈಕ್ ಸವಾರರಿಗೆ ಮತ್ತಿತರರಿಗೆ ನಗರಸಭೆ ಸಿಬ್ಬಂದಿ ದಂಡ ವಿಧಿಸಿದರು.ಬೈಕ್ ಸವಾರರು ಮುಖಕ್ಕೆ ಮಾಸ್ಕ್ ಇಲ್ಲದೆ ಬಂದವರನ್ನು ಪಕ್ಕಕ್ಕೆ ನಿಲ್ಲಿಸಿ ನೂರು ರೂಪಾಯಿಗಳ ದಂಡ ಹಾಕಿ ಒಂದು ಮಾಸ್ಕ್ ನೀಡಿ ಸದಾಕಾಲ ಮಾಸ್ಕ್ ಹಾಕಿಕೊಂಡೆ ಹೊರಗೆ ಬರುವಂತೆ ತಿಳಿಸಿದರು.ಬೆಳಿಗ್ಗೆಯಿಂದ ಮದ್ಹ್ಯಾನದ ವರೆಗೆ ಸುಮಾರು ಅರವತ್ತಕ್ಕೂ ಹೆಚ್ಚು ಬೈಕ್ ಸವಾರರಿಗೆ ದಂಡ ಹಾಕಿ ಅರಿವು ಮೂಡಿಸಿದರು.
ಸಾಮಾಜಿಕ ಅಂತರ ಪಾಲಿಸುವುದು ಪ್ರತಿಯೊಬ್ಬ ವ್ಯಕ್ತಿಗೆ ಕಡ್ಡಾಯ ನಿಯಮವಾಗಿದ್ದು ಪಾಲಿಸದವರಿಗೆ ದಂಡ ವಿಧಿಸಲಾಗುವುದು ಎಂದು ಸುರಪುರ ಉಪ ವಿಭಾಗದ ಉಪ ಅಧೀಕ್ಷಕ ವೆಂಕಟೇಶ ಹುಗಿಬಂಡಿ ತಿಳಿಸಿದ್ದಾರೆ.
ಮೋಟರ ಬೈಕ್ ಮೇಲೆ ಕೇವಲ ಒಬ್ಬರು ಮಾತ್ರ ಪ್ರಯಾಣಿಸಬೇಕು. ಆಟೋದಲ್ಲಿ ಕೇವಲ ಮೂರು ಜನರು,ಕಾರ್‍ನಲ್ಲಿ ಕೇವಲ ಮೂರು ಜನರು ಮಾತ್ರ ಪ್ರಯಾಣಿಸಬಹುದು ಈ ನಿಯಮಕ್ಕಿಂತ ಹೆಚ್ಚಿನ ಜನರು ಪ್ರಯಾಣಿಸುವುದು ಕಂಡು ಬಂದಲ್ಲಿ ಅಂತಹ ವಾಹನಗಳಿಗೆ ದಂಡ ಹಾಕುವುದು ಅಥವಾ ಪ್ರಕರಣವನ್ನು ದಾಖಲಿಸಲಾಗುವುದು ಎಂದು ತಿಳಿಸಿದ್ದಾರೆ.ಜನರು ತಮ್ಮ ಆರೋಗ್ಯದ ಹಿತ ದೃಷ್ಟಿಯಿಂದ ಸಾಮಾಜಿಕ ಅಂತರ ಪಾಲನೆಗೆ ಆದ್ಯತೆ ನೀಡುವಂತೆ ತಿಳಿಸಿದ್ದಾರೆ.