ಶಹಾಪುರ: ಆಟೊ ಮತ್ತು ಟ್ಯಾಕ್ಸಿ ಚಾಲಕ, ಕ್ಷೌರಿಕ, ನೇಕಾರ ಮತ್ತು ಪುಷ್ಪ ಬೆಳೆಗಾರರು ಲಾಕ್‌ಡೌನ್‌ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಕಾರಣ ಪರಿಹಾರ ಘೋಷಿಸಿರುವುದು ಸ್ವಾಗತಾರ್ಹ ಅದರಂತೆ ಅಸಂಘಟಿತ ಕಾರ್ಮಿಕರಿಗೆ ಸರಕಾರ ಪರಿಹಾರ ಘೋಷಿಸಬೇಕು ಎಂದು ಬಾಷುಮಿಯಾ ವಡಿಗೇರಾ ಒತ್ತಾಯಿಸಿದರು.
ಆದರೆ, ಲಾಕ್‌ಡೌನ್‌ನಿಂದ ರಾಜ್ಯದ ಬೀಡಿ ಕಾರ್ಮಿಕರು, ಹಮಾಲರು, ಬೀದಿಬದಿ ಮಾರಾಟಗಾರರು, ಮನೆಗೆಲಸಗಾರರು, ಬಸ್ -ಟ್ರಕ್ ಚಾಲಕರು, ಟೇಲರ್‌ಗಳು, ಮೆಕ್ಯಾನಿಕ್‌ಗಳು ಮತ್ತು ಚಿಂದಿ ಆಯುವವರು ಹೀಗೆ ಅಸಂಖ್ಯಾತ ಅಸಂಘಟಿತ ಕಾರ್ಮಿಕರಿಗೂ ಈ ಪರಿಹಾರದ ಪ್ಯಾಕೇಜ್ ಅನ್ನು ವಿಸ್ತರಿಸಬೇಕು ಹಾಗೂ ಹಣಕಾಸು ಅನುದಾನವನ್ನು ಹೆಚ್ಚಿಸುವಂತೆ ಕೆಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಮನವಿ ಮಾಡಿದ್ದಾರೆ.
ಬಹುತೇಕ ಬೀಡಿ ಕಾರ್ಮಿಕರು, ಮನೆಗೆಲಸಗಾರರು, ಬೀದಿ ಬದಿ ಮಾರಾಟಗಾರರಲ್ಲಿ ಒಂಟಿ ಮಹಿಳೆಯರು, ಸಂಸಾರದ ನಿರ್ವಹಣೆಯ ಹೊಣೆಗಾರಿಕೆ ಇರುವವರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಈಗಾಗಲೇ ರಾಜ್ಯ ಅಸಂಘಟಿತ ಕಾರ್ಮಿಕರ ಕಾಂಗ್ರೆಸ್ ಸಮಿತಿ ಹಾಗೂ ವಿವಿಧ ರಂಗದ, ವಲಯದ ಸಂಘಟನೆಗಳು ಪರಿಹಾರ ಕೋರಿ ಮುಖ್ಯಮಂತ್ರಿಗಳಿಗೆ ಕಾರ್ಮಿಕ ಸಚಿವರಿಗೆ ಹಾಗೂ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಹಲವಾರು ಮನವಿ ಪತ್ರಗಳನ್ನು ಸಲ್ಲಿಸಿರುವುದನ್ನು ಪರಿಗಣಿಸುವಂತೆ ಮನವಿ ಮಾಡಿದ್ದಾರೆ.
ಕೋವಿಡ್ ವಾರಿಯರ್ ಅಡಿಯಲ್ಲಿ ದುಡಿಯುತ್ತಿರುವ ಪೌರಕಾರ್ಮಿಕರು, ಆರೋಗ್ಯ ಇಲಾಖೆಯ ವಿವಿಧ ಗುತ್ತಿಗೆ ನೌಕರರು, ಆಶಾ ಕಾರ್ಯಕರ್ತರು, ಅಂಗನವಾಡಿ ನೌಕರರಿಗೆ ವಿಶೇಷ ಪ್ಯಾಕೇಜ್ ನೀಡಬೇಕೆಂದು ಆಗ್ರಹಿಸಿದರು.