ಸುರಪುರ: ಕಳೆದ ಮಾರ್ಚ್ ತಿಂಗಳ 23 ರಂದು ಯಾದಗಿರಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿ, ತಾಲೂಕಿನ ಅಮಲಹಾಳ ಗ್ರಾಮದ ಯುವತಿ ವಿಜಯಲಕ್ಷ್ಮೀ ಎಂಬುವವರ ಸಾವು ಆತ್ಮಹತ್ಯೆಯಲ್ಲ,ಅದು ಮನೆಯವರೆ ನಡೆಸಿದ ಮರ್ಯಾದಾ ಹತ್ಯೆಯಾಗಿದೆ.ಇದನ್ನು ತನಿಖೆ ನಡೆಸುವಂತೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ಆರೋಪಿಸಿದರು.
ಈ ಕುರಿತು ನಗರದ ತಹಸೀಲ್ ಕಚೇರಿ ಮುಂದೆ ಸಾಂಕೇತಿಕ ಪ್ರತಿಭಟನೆ ನಡೆಸಿ ಮಾತನಾಡಿ,ಅಮಲಿಹಾಳ ಗ್ರಾಮದ ಮೃತ ಯುವತಿ ವಿಜಯಲಕ್ಷ್ಮೀ ಹಾಗು ಯಾದಗಿರಿ ತಾಲೂಕಿನ ಎಂ.ಹೊಸಹಳ್ಳಿ ಗ್ರಾಮದ ಯುವಕ ಮಹೇಶ ತುಬಾಕದೊರೆ ಎಂಬುವವರನ್ನು ಪ್ರೀತಿಸಿದ್ದಳು,ಇದು ಮನೆಯವರಿಗೆ ಗೊತ್ತಾಗಿದ್ದರಿಂದ ದಲಿತ ಸಮುದಾಯದ ಬೇಡ ಜನಾಂಗಕ್ಕೆ ಸೇರಿದ ಯುವಕನನ್ನು ಪ್ರೀತಿಸಿದ್ದರಿಂದ ಮನೆಯವರೆ ಯುವತಿಯನ್ನು ಹತ್ಯೆ ಮಾಡಿದ್ದು ಮರ್ಯಾದಾ ಹತ್ಯೆ ನಡೆದಿದೆ ಎಂದು ಆರೋಪಿಸಿದರು.
ತಾವೆ ಹತ್ಯೆ ಮಾಡಿ ಅದನ್ನು ದಲಿತ ಸಮುದಾಯದ ಯುವಕ ಮಹೇಶ ತುಬಾಕದೊರೆ ಮೇಲೆ ಆರೋಪ ಹೊರಿಸಿ ಅವನನ್ನು ಮತ್ತವನ ಜೊತೆಗಾರರನ್ನು ಒಟ್ಟು ನಾಲ್ಕು ಜನರನ್ನು ಜೈಲಿಗೆ ಹಾಕಿಸಿದ್ದಾರೆ.ಇದರಿಂದ ಮಹೇಶನ ಕುಟುಂಬ ತುಂಬಾ ನೊಂದಿದೆ.ಆದ್ದರಿಂದ ಮರ್ಯಾದಾ ಹತ್ಯೆ ನಡೆಸಿದ ವಿಜಯಲಕ್ಷ್ಮೀ ಕುಟುಂಬದ ಮೇಲೆ ಕ್ರಮ ಕೈಗೊಳ್ಳಬೇಕು ಮತ್ತು ಬಂಧಿಸಿದ ಮಹೇಶ ಮತ್ತವರ ಜೊತೆಗಾರರನ್ನು ಬಿಡುಗಡೆಗೊಳಿಸಬೇಕು.
ಇಲ್ಲವಾದಲ್ಲಿ ಇದೇ ತಿಂಗಳ 14 ರಂದು ಡಿಸಿ ಮತ್ತು ಎಸ್ಪಿಯವರಿಗೆ ಮನವಿ ಮಾಡಲಾಗುವುದು,ಇದಕ್ಕೂ ಜಿಲ್ಲಾಡಳಿತದಿಂದ ನ್ಯಾಯ ಸಿಗದೇ ಹೋದಲ್ಲಿ ಈ ತಿಂಗಳ 27ನೇ ತಾರೀಖಿನಿಂದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಅಮರಣಾಂತ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದೆಂದು ಎಚ್ಚರಿಸಿ ಮುಖ್ಯಮಂತ್ರಿಗಳಿಗೆ ಬರೆದ ಮನವಿಯನ್ನು ಶಾಸಕ ನರಸಿಂಹ ನಾಯಕ (ರಾಜುಗೌಡ) ಹಾಗು ತಹಸೀಲ್ದಾರ ನಿಂಗಣ್ಣ ಬಿರಾದಾರ್ ಮೂಲಕ ಸಲ್ಲಿಸಿದರು.
ಈ ಸಂದರ್ಭದಲ್ಲಿ ಗ್ರೇಡ-2 ತಹಸೀಲ್ದಾರ ಸೂಫಿಯಾ ಸುಲ್ತಾನ, ಡಿವೈಎಸ್ಪಿ ವೆಂಕಟೇಶ ಹುಗಿಬಂಡಿ,ಪಿಐ ಎಸ್.ಎಂ.ಪಾಟೀಲ ಹಾಗು ಸಂಘಟನೆಯ ಮುಖಂಡರಾದ ತಿಪ್ಪಣ್ಣ ಶೆಳ್ಳಿಗಿ,ಜೆಟ್ಟೆಪ್ಪ ನಾಗರಾಳ,ಖಾಜಾ ಹುಸೇನ್ ಗುಡಗುಂಟಿ,ಚಮದ್ರಕಾಂತ ಹಂಪಿನ್,ಮಹೇಶ ಸುಂಗಲಕರ್ ಸೇರಿದಂತೆ ಅನೇಕರಿದ್ದರು.