ಕಲಬುರಗಿ: ನಿಷೇಧಾಜ್ಞೆ ಉಲ್ಲಂಘನೆ ಆರೋಪದಡಿ ದುರುದ್ದೇಶದಿಂದ ನನ್ನ ಮೇಲೆ ಕೇಸ್ ಹಾಕಲಾಗಿದೆ ಅಂತ ಮಾಜಿ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ಆರೋಪಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಟಿ ಕರೆದು ಮಾತನಾಡಿದ ಅವರು, ದುರುದ್ದೇಶದಿಂದ ನನ್ನ ಮೇಲೆ ಕೇಸ್ ಹಾಕಲಾಗಿದೆ. ಜಿಲ್ಲೆಯಲ್ಲಿ ಬಿಜೆಪಿಯವರು ಕಾಂಗ್ರೆಸ್ ಅನ್ನು ಹತ್ತಿಕ್ಕಲು ಪ್ರಯತ್ನ ಮಾಡುತ್ತಿದ್ದಾರೆ. ನಾನು ಜನರ ಸಮಸ್ಯೆಗಳನ್ನು ಆಲಿಸಲು ಹೋಗಿದ್ದೆ. ಕೇವಲ 10 ನಿಮಿಷಗಳ ಕಾಲ ಮಾತ್ರ ಜನರನ್ನು ಭೇಟಿ ಮಾಡಿದ್ದೆ. ಆದ್ರೆ ಶಾಸಕರ ಒತ್ತಡದಿಂದ ನನ್ನ ಮೇಲೆ ಕೇಸ್ ಹಾಕಲಾಗಿದೆ. ಇದ್ಯಾವುದಕ್ಕೂ ನಾನು ಹೆದರುವುದಿಲ್ಲ ಎಂದು ಸೇಡಂ ಬಿಜೆಪಿ ಶಾಸಕ ರಾಜಕುಮಾರ ಪಾಟೀಲ್ ತೆಲ್ಕೂರ ವಿರುದ್ಧ ಶರಣ ಪ್ರಕಾಶ ಪಾಟೀಲ್ ಹರಿಹಾಯ್ದರು.
ನಿನ್ನೆ ಸುಲೇಪೆಟ್ ಪೊಲೀಸ್ ಠಾಣೆಯಲ್ಲಿ ಶರಣ ಪ್ರಕಾಶ್ ಪಾಟೀಲ್ ಸೇರಿ 23 ಜನರ ವಿರುದ್ಧ ಕೇಸ್ ದಾಖಲಾಗಿತ್ತು.
ಕೇಸ್ ವಾಪಸ್ ಪಡೆಯಬೇಕೆಂದು ಕಲಬುರಗಿ ಜಿಲ್ಲಾ ಕಾಂಗ್ರೆಸ್ ಸಮಿತಿ ಕಲಬುರಗಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಆಗ್ರಹಿದೆ.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ತೀಪ್ಪಣ್ಣ ಕಮಕನೂರ್, ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಜಗದೇವ್ ಗುತ್ತೇದಾರ, ಮಾಜಿ ವಿಧಾನ ಪರಿಷತ್ ಸದಸ್ಯ ಅಲ್ಲಮಪ್ರಭು ಪಾಟೀಲ ಸೇರಿ ಇತರರು ಇದ್ದರು.