ಕಲಬುರಗಿ: ಗುಲ್ಬರ್ಗಾ ವೈದ್ಯಕೀಯ ವಿಜ್ಞಾನ ಸಂಸ್ಥೆ (ಜಿಮ್ಸ್ ) ಯ ಕೋವಿಡ್ ಲ್ಯಾಬ್ ನಲ್ಲಿ ಜಿಲ್ಲೆಗೆ ಬಂದಿರುವ ಕಾರ್ಮಿಕರು ಸೇರಿ ವಲಸಿಗರಿಗೆ RAPID ಪರೀಕ್ಷೆ ನಡೆಸುವ ನಿಟ್ಟಿನಲ್ಲಿ ತುರ್ತಾಗಿ ಅಗತ್ಯವಿದ್ದ ಕಿಟ್ (ರಾಸಾಯನಿಕ ಪದಾರ್ಥ)ಗಳನ್ನು ಸ್ವತಃ ತಮ್ಮ ಕಾರಿನಲ್ಲಿ
ಸಂಸದ ಡಾ. ಉಮೇಶ್ ಜಾಧವ್ ಅವರು ಬೆಂಗಳೂರಿನಿಂದ ಕಲಬುರಗಿ ತೆಗೆದುಕೊಂಡು ಬರುತ್ತಿದ್ದಾರೆ.
ಬೆಂಗಳೂರಿನ ರಾಷ್ತ್ರೀಯ ವೈರಾಣು ಪ್ರಯೋಗಾಲಯದಿಂದ ಜಿಮ್ಸ್ ಗೆ ತರಲಾಗುತ್ತಿದೆ. ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಮಂಜುಗಡ್ಡೆ ( ಹಾರ್ಡ್ ಐಸ್)ಯಲ್ಲಿಟ್ಟು , 16 ಗಂಟೆಯೊಳಗೆ ಕೊಂಡೊಯ್ಯಲೇಬೇಕಾಗಿದ್ದು, ಈ ಹಿನ್ನೆಲೆಯಲ್ಲಿ ಜಾಧವ್ ಅವರೇ ಮುಂದಾಗಿದ್ದಾರೆ.
ನಾಲ್ಕು ಬಾರಿ ಮನವಿ : ಆರ್.ಎನ್.ಎ ಎಕ್ಟ್ರಾಕ್ಷನ್ ಕಿಟ್ – 5000 ಹಾಗೂ “ಎ” ಸ್ಟಾರ್ ಫಾರ್ಟಿಟ್ಯೂಟ್ 2.0 ಪಿಸಿಆರ್ ಕಿಟ್ – 5000 ಕಳುಹಿಸುವಂತೆ ಜಿಮ್ಸ್ ಎನ್ಐವಿಗೆ ಈಗಾಗಾಲೇ ನಾಲ್ಕು ಬಾರಿ ಮನವಿ ಮಾಡಿತ್ತು. ಇದನ್ನು ಎನ್ಐವಿ ಕಿವಿಗಾಕಿಕೊಂಡಿರಲಿಲ್ಲ. ಯಾಕೆಂದರೆ, ರಾಜ್ಯದಲ್ಲಿ ಒಟ್ಟು 17 ಲ್ಯಾಬ್ ಗಳಿದ್ದು, ಸಹಜವಾಗಿ ಅದರ ಮೇಲೆ ತೀವ್ರ ಒತ್ತಡವಿತ್ತು.
ಫೋನ್ ನಲ್ಲಿ ಮನವಿ : ಕೆಲಸ ನಿಮಿತ್ತ ಬೆಂಗಳೂರಿಗೆ ತೆರಳಿದ್ದ ಲೋಕಸಭಾ ಸದಸ್ಯ ಜಾಧವ್ ಅವರಿಗೆ ಜಿಮ್ಸ್ ನಿಂದ ಅಧಿಕಾರಿಗಳು ಪೋನ್ ಕರೆ ಮಾಡಿ ಮನವಿ ಮಾಡಿದರು. ತುರ್ತು ಸಂದರ್ಭವನ್ನು ಅರಿತ ಸಂಸದರು, ತಮ್ಮೆಲ್ಲಾ ಕೆಲಸ- ಕಾರ್ಯಗಳನ್ನು ಬದಿಗೊತ್ತಿ ಖುದ್ದಾಗಿ ನಿಮ್ಹಾನ್ಸ್ ಬಳಿ ಇರುವ ಎನ್ಐವಿಗೆ ತೆರಳಿದರು.
ತಕ್ಷಣವೇ ಸಂಸದರು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್,ನವದೆಹಲಿ) ಕಚೇರಿಗೆ ಕರೆ ಮಾಡಿ ಸಂಬಂಧಪಟ್ಟ ಅಧಿಕಾರಿಗಳಿಗೊಂದಿಗೆ ಮಾತಾನಾಡಿ, ಎನ್ ಐವಿ ವೈದ್ಯರಿಗೆ ನಿರ್ದೇಶನ ಕೊಡಿಸಿದರು. ಬಳಿಕ ಕಿಟ್ ಗಳನ್ನು ಸಂಸದರಿಗೆ ಹಸ್ತಾಂತರ ಮಾಡಿದರು.
8000 ಟೆಸ್ಟ್ ಸಾಮಾರ್ಥ್ಯ : ಇದೀಗ ಆರ್.ಎನ್.ಎ ಎಕ್ಟ್ರಾಕ್ಷನ್ 5000 ಪೈಕಿ 1728 ಹಾಗೂ ಎ ಸ್ಟಾರ್ ಫಾರ್ಟಿಟ್ಯೂಡ್ 2.0 ಪಿಸಿಆರ್ 5000 ಪೈಕಿ 2000 ಕಿಟ್ ಪೂರೈಸಲಾಗಿದೆ. ಇದರಿಂದ 8 ಸಾವಿರ ಪ್ರಕರಣಗಳ ಪರೀಕ್ಷೆ ನಡೆಸಬಹುದಾಗಿದೆ ಎಂದು ಡಾ. ಉಮೇಶ್ ಜಾಧವ್ ಅವರು ತಿಳಿಸಿದ್ದಾರೆ.
ಒಟ್ಟು 50 ಲಕ್ಷ ರೂಪಾಯಿ ಮೌಲ್ಯದ ಕಿಟ್ ಗಳಾಗಿದ್ದು, ಜಿಲ್ಲೆಗೆ ಬಂದಿರುವ ಕಾರ್ಮಿಕರು ಹಾಗೂ ವಲಸಿಗರ ರ್ಯಾಪಿಡ್ ಪರೀಕ್ಷೆ ಗೆ ಉಪಯೋಗವಾಗಲಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದ್ದಾರೆ.
ಈ ಹಿಂದೆಯೂ ಕೂಡ (18.03.2020)ಜಿಮ್ಸ್ ಲ್ಯಾಬ್ ಪ್ರಾರಂಭಿಸುವಾಗ ಸಂಸದರು, ನವದೆಹಲಿಯಲ್ಲಿ ಐಸಿಎಂಆರ್ ಮುಖ್ಯಸ್ಥರೊಂದಿಗೆ ಮಾತನಾಡಿ, ಲ್ಯಾಬ್ ಗೆ ಸಂಬಂಧಿಸಿದ ರೀ ಏಜೆಂಟ್ ತರಿಸುವಲ್ಲಿ ಶ್ರಮವಹಿಸಿದ್ದರು.