ವಾಡಿ: ಸ್ಥಳೀಯ ಮುಸ್ಲಿಂ ಸಮುದಾಯದ ಭಾಯ್ ಭಾಯ್ ಗ್ರೂಪ್ ಕಾರ್ಯಕರ್ತರು ಹಾಗೂ ಟೀಂ ಪ್ರಿಯಾಂಕ್ ಖರ್ಗೆ ಪದಾಧಿಕಾರಿಗಳು, ಕ್ವಾರಂಟೈನ್ ಕಾರ್ಮಿಕರೊಂದಿಗೆ ರಂಜಾನ್ ಈದ್ ಆಚರಿಸುವ ಮೂಲಕ ಕೋಮು ಸೌಹಾರ್ಧತೆ ಮೆರೆದ ಪ್ರಸಂಗ ನಡೆಯಿತು.
ಒಂಬತ್ತು ನೂರು ಮಹಾ ವಲಸಿಗರಿಗೆ ಆಶ್ರಯ ನೀಡುವ ಮೂಲಕ ಜಿಲ್ಲೆಯ ಬಹುದೊಡ್ಡ ಕ್ವಾರಂಟೈನ್ ಕೇಂದ್ರವೆಂದು ಗುರುತಿಸಿಕೊಂಡಿರುವ ಹಳಕರ್ಟಿ ದರ್ಗದಲ್ಲಿ ಸೋಮವಾರ ರಂಜಾನ್ ಹಬ್ಬದ ಸಂಭ್ರಮ ಕಂಡುಬಂದಿತು.
ತಮ್ಮ ತಮ್ಮ ಮನೆಯಲ್ಲಿ ನಮಾಜ್ ಮಾಡಿ ತಾಲೂಕು ಆಡಳಿತದ ಪರವಾನಿಗೆಯೊಂದಿಗೆ ಕ್ವಾರಂಟೈನ್ ಕೇಂದ್ರದಲ್ಲಿ ತರಕಾರಿ ಫಲಾವ್ ಸಿದ್ಧಪಡಿಸಿದ ಭಾಯ್ ಭಾಯ್ ಗ್ರೂಪ್ ಕಾರ್ಯಕರ್ತರು ಹಾಗೂ ಟೀಂ ಪ್ರಿಯಾಂಕ್ ಖರ್ಗೆ ಪದಾಧಿಕಾರಿಗಳು, 900ಕ್ಕೂ ಹೆಚ್ಚು ಜನರ ಒಡಲಿಗೆ ಅನ್ನ ಬಡಿಸಿದರು. ಪ್ರತಿಯೊಬ್ಬರಿಗೂ ರಂಜಾನ್ ಹಬ್ಬದ ವಿಶೇಷ ಖಾದ್ಯ ಸುರಕುರ್ಮಾ ವಿತರಿಸಿ ಈದ್ ಸಂತೋಷ ಹಂಚಿಕೊಂಡರು.
ಇವರೊಟ್ಟಿಗೆ ವೈದ್ಯರು, ಆಶಾ ಕಾರ್ಯಕರ್ತೆಯರು, ಆರೋಗ್ಯ ಸಿಬ್ಬಂದಿ ಹಾಗೂ ಪೊಲೀಸ್ ಸಿಬ್ಬಂದಿಗಳು ಸುರಕುರ್ಮಾ ಮತ್ತು ತರಕಾರಿ ಫಲಾವ್ ರುಚಿ ಸವಿದರು. ಕ್ವಾರಂಟೈನ್ ಕಾರ್ಮಿಕರೊಂದಿಗೆ ಈದ್ ಆಚರಿಸುವ ಮೂಲಕ ಮುಸ್ಲಿಂ ಯುವ ಮುಖಂಡರು, ಕೋಮು ಸೌಹಾರ್ಧತೆ ಕಾಪಾಡಿದ್ದು ಕಾರ್ಮಿಕರ ಮೆಚ್ಚುಗೆಗೆ ಪಾತ್ರವಾಯಿತು.
ಟೀಂ ಪ್ರಿಯಾಂಕ್ ಖರ್ಗೆ ಸಂಘದ ಅಧ್ಯಕ್ಷ ಶಮಶೀರ್ ಅಹ್ಮದ್, ಭಾಯ್ ಭಯ್ ಗ್ರೂಪ್ ಅಧ್ಯಕ್ಷ ಮಹ್ಮದ್ ಇರ್ಫಾನ್, ಅಖಿಲ ಭಾರತ ಬಂಜಾರಾ ಸೇವಾ ಸಂಘದ ಅಧ್ಯಕ್ಷ ಶಂಕರ ಜಾಧವ, ಪುರಸಭೆ ಸದಸ್ಯ ಶರಣು ನಾಟೀಕಾರ, ವಾಡಿ ಲಾರಿ ಮಾಲೀಕರ ಸಂಘದ ಕಾರ್ಯದರ್ಶಿ ಮಹಾದೇವ ಸಜ್ಜನ್, ಮುಖಂಡರಾದ ಬಾಳು ಚವ್ಹಾಣ, ಅಲ್ತಾಫ್ ಸೌಧಾಗರ, ಸೋಮಲಾ ಚವ್ಹಾಣ, ಚಾಂದ್‍ಪಾಶಾ, ವಿನಾಯಕ ರಾಠೋಡ, ನಿಂಗಣ್ಣ, ಗಿರೆಪ್ಪಾ ನಾಟೀಕಾರ, ಅಖ್ತರ್ ಪಾಶಾ, ಸಲಮಾನ್ ಪಟೇಲ ಮತ್ತಿತರರು ಭಾಗವಹಿಸಿದ್ದರು.