ಕಲಬುರಗಿ: ರಾಜ್ಯದ ಕಲಬುರಗಿ ಸೇರಿದಂತೆ ಬಳ್ಳಾರಿ, ವಿಜಯಪುರ ಮತ್ತು ಮೈಸೂರು ಮಹಾನಗರಗಳನ್ನು ಸ್ಮಾರ್ಟ್ ಸಿಟಿ ಯೋಜನೆಯಡಿ ಸೇರಿಸುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ರಾಜ್ಯದ ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜ ಹೇಳಿದರು.
ಸೋಮವಾರ ಇಲ್ಲಿನ ಟೌನ್ ಹಾಲ್‌ನಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡುತ್ತಾ, ಸ್ಮಾರ್ಟ ಸಿಟಿ ಯೋಜನೆಯಡಿ ಈ ನಗರಗಳು ಸೇರಿದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ತಲಾ ೫೦೦ ಕೋಟಿ ರೂ. ಅನುದಾನ ಹರಿದು ಬರಲಿದೆ. ಈ ಅನುದಾನದಿಂದ ರಸ್ತೆ, ಒಳಚರಂಡಿ, ಬೀದಿ ದೀಪ, ಉದ್ಯಾನವನ, ಕೆರೆ ಅಭಿವೃದ್ದಿ ಹೀಗೆ ಅನೇಕ ಅಭಿವೃದ್ಧಿ ಕಾರ್ಯಗಳು ಕೈಗೊಳ್ಳಲು ಅವಕಾಶವಿರಲಿದ್ದು, ಇದರಿಂದ ನಗರದ ಅಭಿವೃದ್ಧಿಯ ಚಿತ್ರಣವೆ ಬದಲಾಗಿ ಸುಂದರ ನಗರ ನಿರ್ಮಿಸಲು ಸಾಧ್ಯ ಎಂದರು.
ಈ ಸಂಬಂಧ ಶೀಘ್ರವೆ ತಾವು ಕೇಂದ್ರ ನಗರಾಭಿವೃದ್ಧಿ ಸಚಿವರನ್ನು ಖುದ್ದಾಗಿ ಭೇಟಿಯಾಗಿ ಸ್ಮಾಟ ಸಿಟಿ ಪಟ್ಟಿಯಲ್ಲಿ ಈ ನಗರಗಳನ್ನು ಸೇರಿಸಲು ಮನವರಿಕೆ ಮಾಡಿಕೊಡಲಾಗುವುದು ಎಂದ ಅವರು ಸ್ಮಾರ್ಟ್ ಸಿಟಿ ಪಟ್ಟಿಯಲ್ಲಿ ಈಗಾಗಲೆ ರಾಜ್ಯದ ಬೆಂಗಳೂರು ಬಿಬಿ.ಎಂಪಿ. ಅಲ್ಲದೆ ರಾಜ್ಯದ ೭ ನಗರಗಳು ಸೇರಿವೆ ಎಂದರು.
ಇಂದು ಕಲಬುರಗಿ ಮಹಾನಗರ ಪಾಲಿಕೆ ಮತ್ತು ನಗರಾಭಿವೃದ್ಧಿ ಪ್ರಾಧಿಕಾರದ ಪ್ರಗತಿ ಪರಿಶೀಲನೆ ನಡೆಸಿದ್ದು, ರಸ್ತೆ, ಕುಡಿಯುವ ನೀರು ಪೂರೈಕೆ, ಒಳಚರಂಡಿ, ಬೀದಿ ದೀಪ ನಿರ್ವಹಣೆ, ಸ್ವಚ್ಛತಾ ಕಾರ್ಯವನ್ನು ಎಲ್ಲಿಯೂ ಲೋಪವಾಗದಂತೆ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಲು ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇನೆ ಎಂದರು.
ಕಲಬುರಗಿ ಪಾಲಿಕೆಯ ೨೧೪ ಪೌರ ಕಾರ್ಮಿಕರಿಗೆ ೧೭.೩೪ ಕೋಟಿ ರೂ. ವೆಚ್ಚದಲ್ಲಿ ಗೃಹ ಭಾಗ್ಯ ಯೋಜನೆಯಡಿ ಮನೆ ನಿರ್ಮಿಸಲು ಟೆಂಡರ್ ಪ್ರಕ್ರಿಯೆ ನಡೆದಿದೆ ಎಂದ ಸಚಿವರು ಕಲಬುರಗಿ ನಗರಕ್ಕೆ ಮೂರು ದಿನ ಬದಲಾಗಿ ೨ ದಿನಕ್ಕೊಮ್ಮೆ ಕುಡಿಯುವ ನೀರು ಪೂರೈಕೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದರು.
ಕೊರೋನಾ ಸಾಂಕ್ರಾಮಿಕ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಕಲಬುರಗಿ ನಗರದ ಎಲ್ಲಾ ೫೫ ವಾರ್ಡುಗಳಲ್ಲಿ ಮತ್ತೊಮ್ಮೆ ಫಾಗಿಂಗ್ ಮಾಡಲಾಗುವುದು. ಹೆಚ್ಚಿನ ಸಂಖ್ಯೆಯಲ್ಲಿ ಕೊರೋನಾ ಸೋಂಕು ಪತ್ತೆಯಾದ ಕಲಬುರಗಿಯ ಮೋಮಿನಪುರ ಪ್ರದೇಶವನ್ನು ಸಂಪೂರ್ಣವಾಗಿ ಸ್ಯಾನಿಟೈಸೇಷನ್ ಮಾಡುವಂತೆ ಪಾಲಿಕೆ ಆಯುಕ್ತ ರಾಹುಲ್ ಪಾಂಡ್ವೆ ಅವರಿಗೆ ಸೂಚಿಸಲಾಗಿದೆ ಎಂದು ಸಚಿವ ಬಿ.ಎ.ಬಸವರಾಜ ತಿಳಿಸಿದರು.
ಬೀದಿ ದೀಪ, ಸ್ವಚ್ಛತೆಯಲ್ಲಿ ನಿರ್ಲಕ್ಷ್ಯ ಸಹಿಸುವುದಿಲ್ಲ: ನಗರದ ಬೀದಿ ದೀಪ ಮತ್ತು ಸ್ವಚ್ಛತಾ ಕೆಲಸದಲ್ಲಿ ಯಾವುದೇ ಲೋಪವನ್ನು ಸಹಿಸಲಾಗುವುದಿಲ್ಲ. ದೂರು ಬಂದಲ್ಲಿ ಅಧಿಕಾರಿಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
೨೪x೭ ಕುಡಿಯುವ ನೀರಿ ಕಾಮಗಾರಿಗೆ ಶೀಘ್ರವೇ ಗುದ್ದಲಿ ಪೂಜೆ: ಕಲಬುರಗಿ ಮಹಾನಗರದ ಜನತೆಗೆ ಶುದ್ಧ ಕುಡಿಯುವ ನೀರು ಪೂರೈಕೆಗೆ ವಿಶ್ವ ಬ್ಯಾಂಕ್ ನೆರವಿನಿಂದ ೮೩೮ ಕೋಟಿ ರೂ. ಮೊತ್ತದ ೨೪x೭ ಕುಡಿಯುವ ನೀರು ಪೂರೈಕೆ ಯೋಜನೆಗೆ ಅಡಳಿತಾತ್ಮಕ ಅನುಮೋದನೆ ನೀಡಿ ಈಗಾಗಲೆ ವಿಶ್ವ ಬ್ಯಾಂಕ್‌ನೊಂದಿಗೆ ಒಪ್ಪಂದಕ್ಕೂ ಸಹಿಯಾಗಿದ್ದು, ಶೀಘ್ರವೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಚಾಲನೆ ನೀಡಲಾಗುವುದು ಎಂದು ಸಚಿವ ಬಿ.ಎ.ಬಸವರಾಜ ಹೇಳಿದರು.
ಜನಸ್ಪಂದನಾ ಸಭೆ: ಪಾಲಿಕೆಗೆ ಸಂಬಂಧಿಸಿದಂತೆ ಮಹಾನಗರದ ಜನತೆಯ ಕುಂದುಕೊರತೆಗಳನ್ನು ಖುದ್ದಾಗಿ ಆಲಿಸಲು ಮುಂದಿನ ಪ್ರವಾಸ ಸಂದರ್ಭದಲ್ಲಿ ಜನಸ್ಪಂದನಾ ಸಭೆ ನಡೆಸಲಾಗುವುದು ಎಂದು ಸಚಿವ ಬಿ.ಎ.ಬಸವರಾಜ ಇಲ್ಲಿ ಪ್ರಕಟಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಶಾಸಕರಾದ ದತ್ತಾತ್ರೇಯ ಪಾಟೀಲ ರೇವೂರ, ಬಸವರಾಜ ಮತ್ತಿಮೂಡ, ಡಾ.ಅವಿನಾಶ ಜಾಧವ, ಜಿಲ್ಲಾಧಿಕಾರಿ ಶರತ್ ಬಿ., ಮಹಾನಗರ ಪಾಲಿಕೆಯ ಆಯುಕ್ತ ರಾಹುಲ ಪಾಂಡ್ವೆ ಇದ್ದರು.