ಸುರಪುರ: ಇಂದು ಚೀನಾ ಕಾಲು ಕೆರೆದು ಭಾರತದೊಂದಿಗೆ ಕಾದಾಟಕ್ಕೆ ಇಳಿದಿದೆ.ಅದಕ್ಕೆ ತಕ್ಕ ಶಾಸ್ತಿಯನ್ನು ಭಾರತೀಯ ಸೇನೆಯು ಮಾಡುತ್ತಿದೆ.ಅನಾವಶ್ಯಕವಾಗಿ ನಮ್ಮೊಂದಿಗೆ ಯುದ್ಧಕ್ಕೆ ಬರುವ ಚೀನಾದ ನಡೆ ಖಂಡನಾರ್ಹವಾಗಿದೆ ಎಂದು ಎಐಟಿಯುಸಿ ಜಿಲ್ಲಾ ಉಪಾಧ್ಯಕ್ಷ ದೇವಿಂದ್ರಪ್ಪ ಪತ್ತಾರ ಮಾತನಾಡಿದರು.
ನಗರದ ಡಾ:ಬಾಬಾ ಸಾಹೇಬ್ ಅಂಬೇಡ್ಕರ್ ವೃತ್ತದಲ್ಲಿ ಪ್ರಗತಿಪರ ಸಾಮೂಹಿಕ ಸಂಘಟನೆಗಳ ವೇದಿಕೆಯಿಂದ ಗುಲ್ವಾಮ ಹುತಾತ್ಮ ಯೋಧರಿಗೆ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿ,ಭಾರತೀಯ ಸೇನೆಯು ಎಲ್ಲಾ ನಿಟ್ಟಿನಿಲ್ಲಿ ಸನ್ನಧ್ಧವಾಗಿದೆ.ಆದರೆ ಯುದ್ಧವೆಂಬುದು ಇಂದು ಅನಾವಶ್ಯಕವಾದ ಸಂಗತಿ,ಚೀನಿಯರು ವಿನಾಕಾರಣ ಭಾರತದೊಂದಿಗೆ ಯುದ್ಧಕ್ಕೆ ಬರುವುದನ್ನು ನಿಲ್ಲಿಸಬೇಕೆಂದು ಆಗ್ರಹಿಸಿದರು.ಅಲ್ಲದೆ ಕೇಂದ್ರ ಸರಕಾರ ನಮ್ಮ ದೇಶದ ಯೋಧರ ಸಾವಿನ ಬಗ್ಗೆ ಸರಿಯಾದ ವಿವರಣೆ ನೀಡುತ್ತಿಲ್ಲ ಮತ್ತು ಚೀನಾದ ಮೇಲೆ ಕೈಗೊಳ್ಳುವ ಕ್ರಮದ ಬಗ್ಗೆಯು ಮಾತನಾಡದೆ ದೇಶದ ಜನರಿಗೆ ಯಾಮಾರಿಸುವ ಕೆಲಸ ಮಾಡುತ್ತಿದೆ ಇದನ್ನು ಎಲ್ಲರು ಖಂಡಿಸಬೇಕೆಂದರು.
ನಂತರ ಮೂಲನಿವಾಸಿ ಅಂಬೇಡ್ಕರ ಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಹುಲ್ ಹುಲಿಮನಿ ಮಾತನಾಡಿ,ಲಡಾಖ್ ಗುಲ್ವಾಮದಲ್ಲಿ ಹುತಾತ್ಮರಾದ ನಮ್ಮ ದೇಶದ ೨೦ ಜನ ಸೈನಿಕರು ಈ ದೇಶಕ್ಕಾಗಿ ತಮ್ಮ ಪ್ರಾಣವನ್ನು ಅರ್ಪಿಸಿದ್ದಾರೆ.ಯೋಧರಿಂದಲೆ ದೇಶದ ಜನರು ನಿತ್ಯವು ಸುಖವಾಗಿರುವುದು.ಆದ್ದರಿಂದ ನಿತ್ಯವು ಎಲ್ಲರು ಯೋಧರನ್ನು ಸ್ಮರಿಸಬೇಕೆಂದರು.ಅಲ್ಲದೆ ಚೀನಾ ದೇಶ ನಮ್ಮೊಡನೆ ಯುದ್ಧಕ್ಕಿಳಿಯುತ್ತಿದೆ,ಅದಕ್ಕೆ ದೇಶದ ಎಲ್ಲರು ಕೂಡ ಖಂಡಿಸುವ ಜೊತೆಗೆ ಆ ದೇಶ್ಕಕೆ ನಮ್ಮಿಂದ ಹೋಗುವ ಆದಾಯವನ್ನು ನಿಲ್ಲಿಸುವತ್ತ ಮುಂದಾಗಬೇಕು ಇದಕ್ಕೆ ಕೇಂದ್ರ ಸರಕಾರ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ಹುತಾತ್ಮ ಯೋಧರ ಭಾವಚಿತ್ರಗಳಿಗೆ ಮಾಲಾರ್ಪಣೆ ಮಾಡಿ ನಂತರ ಎರಡು ನಿಮಿಷಗಳ ಮೌನಾಚರಣೆಯೊಂದಿಗೆ ಶ್ರದ್ಧಾಂಜಲಿ ಸಲ್ಲಿಸಿದರು.ಮುಖಂಡರಾದ ಮಾಳಪ್ಪ ಕಿರದಳ್ಳಿ,ಶಿವಲಿಂಗ ಹಸನಾಪುರ,ಮಹ್ಮದ್ ಮೌಲಾ ಸೌದಾಗರ್,ಮದನ್ ಶಾ,ಅಬ್ದುಲ್ ರೌಫ್,ಆನಂದ ಕಟ್ಟಿಮನಿ,ಅಬೀದ್ ಹುಸೇನ್ ಪಗಡಿ,ಭೀಮಣ್ಣ ಭಜಂತ್ರಿ,ರಮೀಜ್ ರಾಜಾ,ನಿಂಗಪ್ಪ ಹುಲಿಕರ್,ಅಬ್ದುಲ್ ಸತಾರ್,ಶಾಕಿರ್ ಪಗಡಿ,ಖಾಜಾಸಾಬ್ ಬೋನಾಳ ಸೇರಿದಂತೆ ಅನೇಕರಿದ್ದರು.