ಸುರಪುರ: ನಗರದ ಕಂಟೋನ್ಮೆಂಟ್ ಝೋನ್‌ಗಳಲ್ಲಿನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಗಮಟಲು ದ್ರವ ಸಂಗ್ರಹಿಸಿ ಕೊರೊನಾ ಸೊಂಕಿನ ಕುರಿತು ಪತ್ತೆಗೆ ಕಳುಹಿಸಲಾಯಿತು.ಈ ಸಂದರ್ಭದಲ್ಲಿ ಹಾಜರಿದ್ದ ಅನೇಕ ಜನ ಮಕ್ಕಳ ಪಾಲಕರು ವರದಿ ಏನು ಬರುವುದೊ ಎಂದು ಆತಂಕಪಟ್ಟರು.
ಇದೇ ಸಂದರ್ಭದಲ್ಲಿ ಕೆಲ ಸಮಯ ಗಂಟಲು ದ್ರವ ಸಂಗ್ರಹಕ್ಕೆ ವಿರೋಧ ವ್ಯಕ್ತವಾಯಿತು.ಕಂಟೋನ್ಮೆಂಟ್ ಝೋನ್ ಮಕ್ಕಳ ಗಂಟಲು ದ್ರವ ಸಂಗ್ರಹದಿಂದ ಮಕ್ಕಳು ಆತಂಕಗೊಳ್ಳುತ್ತಾರೆ.ಇದರಿಂದ ಮಕ್ಕಳು ಪರೀಕ್ಷೆ ಬರೆಯಲು ತೊಂದರೆಯಾಗಲಿದೆ,ಅಲ್ಲದೆ ಈ ಹಿಂದೆ ಎಲ್ಲರ ಗಂಟಲು ದ್ರವ ಸಂಗ್ರಹಿಸಿದ ನಂತರ ವರದಿ ಬರಲು ವಾರಗಟ್ಟಲೆ ಸಮಯ ತಗುಲಿದೆ.
ಈಗ ಪರೀಕ್ಷೆ ಎರಡು ದಿನಗಳಿರುವಾಗ ಗಂಟಲು ದ್ರವ ಸಂಗ್ರಹಿಸಿದರೆ ವರದಿ ಬರುವುದು ಯಾವಾಗ,ಪರೀಕ್ಷೆ ದಿನದ ಒಳಗೆ ವರದಿ ಬರದಿದ್ದಲ್ಲಿ ಯಾರಿಗಾದರು ಪಾಸಿಟಿವ್ ಇದ್ದರೆ ಉಳಿದ ಮಕ್ಕಳ ಗತಿ ಏನು? ಆದ್ದರಿಂದ ಎರಡು ದಿನದಲ್ಲಿ ವರದಿ ಬಂದರೆ ಮಕ್ಕಳನ್ನು ಪರೀಕ್ಷೆಗೆ ಕಳುಹಿಸುತ್ತೇವೆ.ಇಲ್ಲವಾದಲ್ಲಿ ಕಳುಹಿಸುವುದಿಲ್ಲ ಎಂದು ಲೋಕ ಜನಶಕ್ತಿ ಪಕ್ಷದ ಜಿಲ್ಲಾಧ್ಯಕ್ಷ ಅಪ್ಪಾರಾವ್ ನಾಯಕ ತಿಳಿಸಿದರು.
ಈ ಸಂದರ್ಭದಲ್ಲಿ ಗಮಟಲು ದ್ರವ ಸಂಗ್ರಹ ಶಿಬಿರದ ನೇತೃತ್ವ ವಹಿಸಿದ್ದ ವೈದ್ಯ ಓಂ ಪ್ರಕಾಶ ಅಂಬುರೆ ಮಾತನಾಡಿ,ಪೋಷಕರು ಆತಂಕ ಪಡುವುದು ಬೇಡ ಎಲ್ಲಾ ಮಕ್ಕಳ ವರದಿ ಪರೀಕ್ಷೆ ದಿನದ ಒಳಗೆ ಬರಲಿವೆ ಎಂದು ಭರವಸೆ ನೀಡಿದ ನಂತರ ನಿಟ್ಟುಸಿರು ಬಿಟ್ಟ ಪಾಲಕರು ಗಂಟಲು ದ್ರವ ಪರೀಕ್ಷೆಗೆ ಅನುಮತಿಸಿದರು.
ನಂತರ ಕಂಟೋನ್ಮೆಂಟ್ ಝೋನ್‌ಗಳಾದ ದೀವಳಗುಡ್ಡದ ೩೦ ಮಕ್ಕಳು,ಆಸರ ಮೊಹಲ್ಲಾದ ೭ ಮಕ್ಕಳು,ಸಿದ್ದಾಪುರದ ೫ ಮಕ್ಕಳು ಹಾಗು ಗೋನಾಲ ಎಸ್.ಡಿ ಗ್ರಾಮದ ೩ ಮಕ್ಕಳ ಗಂಟಲು ದ್ರವ ಸಂಗ್ರಹ ನಡೆಸಲಾಯಿತು.ಈ ಸಂದರ್ಭದಲ್ಲಿ ಡಾ: ಇಮ್ತಿಯಾಜ್,ಲ್ಯಾಬ್ ಟೆಕ್ನೀಶಿಯನ್ ಶಂಕರ ಜಾಜುರೆ,ಪೋಷಕರಾದ ಹ್ಯಯಾಳಪ್ಪ ಸೇರಿದಂತೆ ಅನೇಕ ಜನ ಮಕ್ಕಳು ಮತ್ತು ಪೋಷಕರಿದ್ದರು.