ಶಹಾಬಾದ: ಕಾರ್ಪೋರೇಟ್ ಕೃಷಿಯನ್ನು ಹಿಮ್ಮೆಟ್ಟಿಸಿ-ರೈತಾಪಿ ಕೃಷಿಯನ್ನು ರಕ್ಷಿಸಿ. ಎಪಿಎಂಸಿ ಕಾಯ್ದೆ, ಭೂ ಸುಧಾರಣೆ ಕಾಯ್ದೆ, ವಿದ್ಯುತ್ ಕಾಯ್ದೆ, ಬೀಜ ಕಾಯ್ದೆ ತಿದ್ದುಪಡಿಗಳನ್ನು ವಿರೋಧಿಸಿ ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ ವತಿಯಿಂದ ಗುರುವಾರ ಹೊನಗುಂಟಾ ಗ್ರಾಮ ಪಂಚಾಯತಿ ಕಛೇರಿ ಮುಂದೆ ಧರಣಿ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಅಶೋಕ ಮ್ಯಾಗೇರಿ ಮಾತನಾಡಿ, ದೇಶದ ಕೃಷಿ ಉತ್ಪಾದನೆ ಮತ್ತು ಕೃಷಿ ಮಾರುಕಟ್ಟೆಯನ್ನು ಕಾರ್ಪೋರೇಟ್ ಕಂಪನಿಗಳಿಗೆ ಒಪ್ಪಿಸಲು ಅಗತ್ಯವಿರುವ ಹಲವು ಕಾನೂನು ತಿದ್ದುಪಡಿಗಳು, ಕಾನೂನುಗಳನ್ನು ಮಾಡುತ್ತಿವೆ. ಎಪಿಎಂಸಿ ಮಾರುಕಟ್ಟೆ ವ್ಯವಸ್ಥೆಯನ್ನು ನಾಶಮಾಡಿ, ಯಾವುದೇ ನಿಯಂತ್ರವಿಲ್ಲದೆ ಕಾರ್ಪೋರೇಟ್ ಕಂಪನಿಗಳು ಇನ್ನು ಮುಂದೆ ಎಲ್ಲಿ ಬೇಕಾದರೂ, ಎಷ್ಟು ಬೇಕಾದರೂ, ಯಾವ ದರಕ್ಕೆ ಬೇಕಾದರೂ ಕೃಷಿ ಉತ್ಪನ್ನಗಳನ್ನು ಖರೀದಿ ಮಾಡಲು ಅವಕಾಶ ಕೊಟ್ಟಿವೆ.
ಈ ಮೂರು ಸುಗ್ರೀವಾಜ್ಞೆಗಳು ಮತ್ತು ಎಪಿಎಂಸಿ ಕಾಯ್ದೆಯ ತಿದ್ದುಪಡಿಗಳು ದೇಶದ ರೈತರನ್ನು ಲೂಟಿ ಮಾಡಲು ಜಗತ್ತಿನ ಕಾಪೋರೇಟ್ ಕಂಪನಿಗೆ ಮುಕ್ತ ಅವಕಾಶ ಒದಗಿಸಿಕೊಟ್ಟ ಕರಾಳ ದಿನ ವಾಗಿದೆ.ಕೂಡಲೇ ಇದನ್ನು ಕೈಬಿಡಬೇಕೆಂದು ಆಗ್ರಹಿಸಿದರಲ್ಲದೇ, ಭೂ ಸುಧಾರಣೆಗಳ ಕಾಯ್ದೆ ತಿದ್ದುಪಡಿಯನ್ನು ಬಿಡಬೇಕು.ಉದ್ಯೋಗ ಖಾತ್ರಿಯಲ್ಲಿ ಒಬ್ಬರಿಗೆ ಕನಷ್ಠ೨೦೦ ದಿನ ಕೆಲಸ ನೀಡಬೇಕು.ರೈತರ ಸಂಪೂರ್ಣ ಸಾಲಮನ್ನಾ ಮಾಡುವ ಮೂಲಕ ಋಣ ಮುಕ್ತ ಕಾಯ್ದೆಯನ್ನು ಅಂಗೀಕರಿಸಬೇಕು ಸೇರಿದಂತೆ ಅನೇಕ ಬೇಡಿಕಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿದರು.
ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕಾ ಸಂಚಾಲಕ ರಾಯಪ್ಪ ಹುರಮುಂಜಿ, ಶಿವಕುಮಾರ.ಎಮ್.ಕಾರೊಳ್ಳಿ, ಸಾಯಬಣ್ಣ ಕಂಠಿಕರ್ ಇತರರು ಇದ್ದರು.