ಗುತ್ತಿಗೆ ಕಾರ್ಮಿಕರಿಂದ ಎಸಿಸಿ ಸಿಮೆಂಟ್ ಕಂಪನಿಗೆ ಮುತ್ತಿದೆ

0
47

ವಾಡಿ: ಶಾಸ್ವತ ಕೆಲಸ ಕಳೆದುಕೊಳ್ಳುವ ಆತಂಕ ಎದುರಿಸುತ್ತಿರುವ ಸ್ಥಳೀಯ ಎಸಿಸಿ ಸಿಮೆಂಟ್ ಕಂಪನಿಯ ೨೦೦ಕ್ಕೂ ಹೆಚ್ಚು ಗುತ್ತಿಗೆ ಕಾರ್ಮಿಕರು, ಗುರುವಾರ ಧಿಡೀರ್ ಕಂಪನಿ ಗೇಟ್‌ಗೆ ಮುತ್ತಿಗೆ ಹಾಕುವ ಮೂಲಕ ಮಾಸಿಕ ೨೦ ದಿನ ಕೆಲಸ ಖಾತ್ರಿಪಡಿಸುವಂತೆ ಪಟ್ಟುಹಿಡಿದು ಕುಳಿತ ಪ್ರಸಂಗ ನಡೆಯಿತು.

ಕಂಪನಿ ಮುಖ್ಯ ದ್ವಾರದ ಬಳಿ ಜಮಾಯಿಸಿದ್ದ ಪವರ್ ಪ್ಲಾಂಟ್ ಘಟಕದ ಮಹಿಳೆ ಮತ್ತು ಪುರುಷ ಕಾರ್ಮಿಕರು, ಕಂಪನಿ ಮಾಡುತ್ತಿರುವ ಅನ್ಯಾಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಲಾಕ್‌ಡೌನ್ ನೆಪದಲ್ಲಿ ಕೆಲಸದಿಂದ ವಂಚಿಸಲಾಗುತ್ತಿದೆ. ಸಾಮಾಜಿಕ ಅಂತರ ಕಾನೂನು ದುರುಪಯೋಗ ಪಡೆಸಿಕೊಂಡು ನಮ್ಮನ್ನು ಕೆಲಸದಿಂದ ತೆಗೆದುಹಾಕಲಾಗುತ್ತಿದೆ. ತಿಂಗಳಿಗೆ ಕೇವಲ ಮೂರು ದಿನ ಕೆಲಸ ನೀಡಲಾಗುತ್ತಿದೆ. ಬರುವ ೧೪೦೦ ರೂ. ವೇತನದಲ್ಲಿ ಸಂಸಾರ ಹೇಗೆ ನೀಗಿಸಬೇಕು.

Contact Your\'s Advertisement; 9902492681

ಇದರಲ್ಲಿ ಮತ್ತೆ ಪಿಎಫ್ ಕಡಿತ ಮಾಡಲಾಗುತ್ತದೆ. ಹೊಟ್ಟೆಗೆ ಏನು ತಿನ್ನಬೇಕು? ಕಳೆದ ನಾಲ್ಕು ತಿಂಗಳಿಂದ ಕಂಪನಿ ನಮಗೆ ಕೆಲಸ ಕೊಟ್ಟಿಲ್ಲ. ಲಾಕ್‌ಡೌನ್ ಸಂದರ್ಭದಲ್ಲಿ ತಿಂಗಳಿಗೆ ಒಬ್ಬರಿಗೆ-೩, ಮತ್ತೊಬ್ಬರಿಗೆ-೪ ಹಾಜರಿ ಲೆಕ್ಕದಂತೆ ಬಿಡಿಗಾಸು ವೇತನ ನೀಡಲಾಗಿದೆ. ೧೫ ವರ್ಷಗಳಿಂದ ಕೆಲಸ ಮಾಡುತ್ತಿದ್ದೇವೆ. ಪುರುಷ ಕಾರ್ಮಿಕರ ಸಮಾನವಾಗಿ ಶ್ರಮಪಡುತ್ತಿದ್ದೇವೆ. ನಮ್ಮೆಲ್ಲರನ್ನು ಹೊರದಬ್ಬಿ ಕೆಲವೇ ಪುರುಷ ಕಾರ್ಮಿಕರನ್ನು ಮಾತ್ರ ಉಳಿಸಿಕೊಳ್ಳುವ ಹುನ್ನಾರ ನಡೆಯುತ್ತಿದೆ ಎಂದು ಆರೋಪಿಸಿದ ಮಹಿಳಾ ಕಾರ್ಮಿಕರು, ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ತಿಂಗಳಿಗೆ ೨೦ ದಿನ ಕೆಲಸ ಕಡ್ಡಾಯಗೊಳಿಸಬೇಕು. ಇಲ್ಲದಿದ್ದರೆ ಕಾರ್ಮಿಕ ನ್ಯಾಯಾಲಯದ ಮೊರೆ ಹೋಗುತ್ತೇವೆ ಎಂದು ಗುಡುಗಿದರು.

ಭೂಮಿ ಕೊಟ್ಟವರ ಅಳಲು: ಎಸಿಸಿ ಕಂಪನಿಗೆ ಸುಮಾರು ೧೪೦೦ ಎಕರೆ ಕೃಷಿ ಭೂಮಿ ಬರೆದುಕೊಟ್ಟು ಎಸಿಸಿ ಘಟಕದಲ್ಲಿ ಗುತ್ತಿಗೆ ಕಾರ್ಮಿಕರಾಗಿ ದುಡಿಯುತ್ತಿದ್ದೇವೆ. ಭೂಮಿ ಖರೀದಿಸುವಾಗ ಖಾಯಂ ನೌಕರಿ ಕೊಡುವುದಾಗಿ ಮತುಕೊಟ್ಟಿದ್ದ ಕಂಪನಿ, ಈಗ ಕನಿಷ್ಠ ಕೂಲಿ ಕೊಡದೆ ವಂಚಿಸುತ್ತಿದೆ. ಕೆಲಸವೂ ಇಲ್ಲ ವೇತನವೂ ಇಲ್ಲ. ಅಕ್ಷರಶಃ ಬೀದಿಗೆ ಬಿದ್ದಿದ್ದೇವೆ. ಉತ್ಪಾದನೆ ಮತ್ತು ಲಾಭದ ಹಿಂದೆ ಬಿದ್ದಿರುವ ಎಸಿಸಿ ಕಂಪನಿ ಆಡಳಿತ ಮಂಡಳಿಯವರು, ಕಾರ್ಮಿಕರನ್ನು ಕಾಲು ಕಸದಂತೆ ಕಾಣುತ್ತಿದ್ದಾರೆ. ಅನ್ಯಾಯ ಪ್ರಶ್ನಿಸಲು ಮುಂದಾದರೆ ಕಾರ್ಮಿಕರ ಐಕ್ಯತೆ ಮುರಿಯಲು ಷಢ್ಯಂತ್ರ ರೂಪಿಸುತ್ತಾರೆ. ನೌಕರಿ ಆಸೆಗೆ ಚಿನ್ನದಂತಹ ಭೂಮಿ ಬರೆದುಕೊಟ್ಟು ಮೋಸಹೋಗಿದ್ದೇವೆ. ಎಸಿಸಿ ಅಧಿಕಾರಿಗಳು ನಮ್ಮ ಬೆನ್ನಿಗೆ ಚೂರಿ ಹಾಕಿದ್ದಾರೆ ಎಂದು ಗುತ್ತಿಗೆ ಕಾರ್ಮಿಕರಾಗಿ ದುಡಿಯುತ್ತಿರುವ ರೈತರ ಮಕ್ಕಳು ಆಕ್ರೋಶ ವ್ಯಕ್ತಪಡಿಸಿದರು.

ಕೆಲಸ ಕೊಡಲು ಸಾಧ್ಯವಿಲ್ಲ: ಕಾರ್ಮಿಕರ ಸಮಸ್ಯೆ ಕೇಳಲು ಸ್ಥಳಕ್ಕೆ ಬಂದ ಎಸಿಸಿ ಘಟಕ ಮುಖ್ಯಸ್ಥ ಕೆ.ಆರ್.ರೆಡ್ಡಿ, ಕೊರೊನಾ ಲಾಕ್‌ಡೌನ್ ಸಂಕಟದಲ್ಲಿ ಉತ್ಪಾದನೆ ಸ್ಥಗಿತಗೊಂಡು ಕಂಪನಿ ನಷ್ಟದಲ್ಲಿದೆ. ಪರಿಣಾಮ ೧೫ ಜನ ಇಂಜಿನೀಯರ್‌ಗಳನ್ನು ವರ್ಗಾವಣೆ ಮಾಡಿದ್ದೇವೆ. ಇನ್ನೂ ಐವರು ಕೆಲಸ ಬಿಡಲು ಸಿದ್ಧರಾಗಿದ್ದಾರೆ. ಸ್ವಚ್ಚತೆ ಕೆಲಸಕ್ಕೆ ಮಹಿಳಾ ಕಾರ್ಮಿಕರನ್ನು ನೇಮಿಸಿಕೊಳ್ಳಲಾಗಿತ್ತು. ಆದರೆ ಆ ಕೆಲಸಕ್ಕೂ ನಾವು ಕಾರ್ಮಿಕರನ್ನು ಬಳಕೆ ಮಾಡಿಕೊಳ್ಳುವುದನ್ನು ನಿಲ್ಲಿಸಿದ್ದೇವೆ. ತಿಂಗಳಲ್ಲಿ ಕೇವಲ ೩ ದಿನ ಕೆಲಸ ಕೊಡಲಾಗುತ್ತಿತ್ತು. ಈಗ ಆರು ದಿನ ಕೆಲಸ ಕೊಡಲು ಚಿಂತಿಸುತ್ತಿದ್ದೇನೆ. ಇದಕಿಂತ ಹೆಚ್ಚು ಭರವಸೆ ನಾನು ನಿಮಗೆ ಕೊಡುವ ಪರಸ್ಥಿತಿಯಲ್ಲಿ ಇಲ್ಲ ಎಂದು ಕಡ್ಡಿಮುರಿದಂತೆ ಹೇಳಿಬಿಟ್ಟರು. ಇದಕ್ಕೆ ಪ್ರತ್ಯುತ್ತರ ನೀಡಿದ ಮಹಿಳಾ ಕಾರ್ಮಿಕರು, ೧೫ ವರ್ಷಗಳಿಂದ ಎಸಿಸಿಯಲ್ಲಿ ದುಡಿಯುತ್ತಿದ್ದೇವೆ. ಈಗ ಕಂಪನಿ ಕೈಬಿಟ್ಟರೆ ನಮ್ಮ ಕುಟುಂಬ ಬೀದಿಪಾಲಾಗುತ್ತದೆ. ತಲಾ ೮ ಲಕ್ಷ ರೂ. ಪರಿಹಾರ ನೀಡುವುದಾದರೆ ಸ್ವಯಂ ನಿವೃತ್ತಿ ಪಡೆಯಲು ಸಿದ್ಧರಿದ್ದೇವೆ ಎಂದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here