ಶಹಾಪುರ: ನಗರದ ಜೆಸ್ಕಾಂ ಅಧಿಕಾರಿಗಳು ಕಾನೂನು ಉಲ್ಲಂಘನೆ ಮಾಡಿ ತಮಗೆ ಬೇಕಾದವರಿಗೆ ವಿದ್ಯುತ್ ಸಂಪರ್ಕ ನೀಡಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿದ್ದಾರೆ ಇವರ ವಿರುದ್ಧ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಾಮಾಜಿಕ ಕಾರ್ಯಕರ್ತ ಮಾನಪ್ಪ ಹಡಪದ ಪ್ರಾದೇಶಿಕ ಆಯುಕ್ತರಿಗೆ ಪತ್ರ ಬರೆದಿದ್ದಾರೆ.
ಪ್ರತಿಯೊಬ್ಬ ಸಾರ್ವಜನಿಕರು ವಿದ್ಯುತ್ ಸಂಪರ್ಕ ಪಡೆಯಬೇಕಾದರೆ ನಗರಸಭೆಯಿಂದ ನಿರಪೇಕ್ಷಣಾ ಪತ್ರ ಪಡೆಯಬೇಕು,ಅಂತ ಸರ್ಕಾರದ ಸುತ್ತೋಲೆ ಇದ್ದರೂ ಕೂಡ ಜೆಸ್ಕಾಂ ಅಧಿಕಾರಿಗಳು ಬೇಕಾಬಿಟ್ಟಿಯಾಗಿ ಅನಧಿಕೃತವಾಗಿ ದುಡ್ಡು ಕೊಟ್ಟವರಿಗೆ ವಿದ್ಯುತ್ ಸಂಪರ್ಕ ನೀಡಿದ್ದಾರೆ.ಇಲ್ಲಿ ಕಾನೂನಿನ ಉಲ್ಲಂಘನೆಯಾಗಿರುವದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.
ನಗರದ ಪದವಿಪೂರ್ವ ಕಾಲೇಜು ಇಲಾಖೆಗೆ ಸೇರಿರುವ ಸರ್ವೇ ನಂಬರ್ 1 ಹಾಗೂ ಕೊಳಚೆ ಮಂಡಳಿ ಸ್ವಾಧೀನದಲ್ಲಿರುವ ಸರ್ವೆ ನಂಬರ್ 7 ರ ಈ ಎರಡೂ ಆಸ್ತಿಯು ಸರಕಾರದ ಸ್ವಾಧೀನದಲ್ಲಿದೆ, ಸ್ಥಳೀಯ ಪ್ರಭಾವಿ ವ್ಯಕ್ತಿಗಳು ಅನಧಿಕೃತವಾಗಿ ಈ ಜಾಗದಲ್ಲಿ ಅಂಗಡಿಗಳು ತೆರೆದಿದ್ದಾರೆ. ಇಂಥ ಅಂಗಡಿಗಳಿಗೆ ಅನಧಿಕೃತವಾಗಿ ವಿದ್ಯುತ್ ಸಂಪರ್ಕ ನೀಡಿ ಸರಕಾರಿ ಜಾಗ ಅತಿಕ್ರಮಣ ಪಡಿಸಿಕೊಂಡು ಬಾಡಿಗೆ ಪಡೆಯುತ್ತಿರುವ ಸ್ಥಳೀಯರಿಗೆ ಬೆನ್ನೆಲುಬಾಗಿ ನಿಂತು ಸರಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿರುವ ಜೆಸ್ಕಾಂ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಪ್ರಾದೇಶಿಕ ಆಯುಕ್ತರಿಗೆ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಲಾಗಿದೆ.