ಸುರಪುರ: ಆಸ್ತಿ ವಿಷಯವಾಗಿ ಮಹಿಳೆಯ ಮೇಲೆ ಹಲ್ಲೆ ಮಾಡಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿಗೆ ಒಂದು ವರ್ಷ ಆರು ತಿಂಗಳು ಜೈಲು ಶಿಕ್ಷೆ ಹಾಗೂ 21 ಸಾವಿರ ದಂಡವನ್ನು ಜೆಎಂಎಫ್ ನ್ಯಾಯಾಲಯದ ನ್ಯಾಯಾಧೀಶ ಚಿದಾನಂದ ಬಡಿಗೇರ ವಿಧಿಸಿದ್ದಾರೆ.
ಸದರಿ ಪ್ರಕರಣದಲ್ಲಿ ಒಂದನೇ ಆರೋಪಿ ಬಸಲಿಂಗಪ್ಪ ಅವರ ವಿರುದ್ಧ ಆರೋಪ ಸಾಬೀತಾಗಿದ್ದರಿಂದ ಶಿಕ್ಷೆ ವಿಧಿಸಿದ್ದಾರೆ. ಆದರೆ ಎರಡನೇಯ ಆರೋಪಿ ನಿಂಗಪ್ಪ ಅವರ ವಿರುದ್ಧ ಆರೋಪ ಸಾಬೀತಾಗದ ಕಾರಣ ಬಿಡುಗಡೆಗೊಳಿಸಲಾಗಿದೆ.ನ್ಯಾಯಾಲಯವು ವಿಧಿಸಿದ ದಂಡದಲ್ಲಿ 15 ಸಾವಿರ ನೊಂದ ಮಹಿಳೆಗೆ ಹಾಗೂ $6ಸಾವಿರ ನ್ಯಾಯಾಲಯಕ್ಕೆ ಜಮಾ ಮಾಡಲು ಆದೇಶದಲ್ಲಿ ತಿಳಿಸಿದ್ದಾರೆ.
ಘಟನೆಯ ವಿವರ: 2012 ಮಾರ್ಚ್ 31 ರಂದು ದೇವರಗೋನಾಲದ ನಿವಾಸಿ ಫಿರ್ಯಾದಿದಾರಳಾದ ಹಣಮಂತಿ ಅವರು ನಮ್ಮ ತಂದೆಯ ಪಾಲಿಗೆ ಬರಬೇಕಾದ ಆಸ್ತಿಯನ್ನು ನೀಡುವಂತೆ ಕೇಳಿದ್ದಕ್ಕೆ ಆರೋಪಿಗಳಾದ ಬಸಲಿಂಗಪ್ಪ ಹಾಗೂ ನಿಂಗಪ್ಪ ಇಬ್ಬರು ಕೂಡಿಕೊಂಡು ಹೊಡಿಬಡಿ ಮಾಡಿ ಗಾಯಗೊಳಿಸಿದ್ದರಿಂದ ಸುರಪುರ ಠಾಣೆಯಲ್ಲಿ ವಿವಿಧ ಕಲಂ ಅಡಿಯಲ್ಲಿ ದೂರು ದಾಖಲಾಗಿತ್ತು. ಅಂದಿನ ತನಿಖಾಧಿಕಾರಿ ಎಚ್.ಎಸ್.ಪಟೇದ ಅವರು ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದರು. ಫಿರ್ಯಾದಿದಾರಳ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ಮಹಾಂತೇಶ ಮಸಳಿ ವಾದ ಮಂಡಿದ್ದರು.
ನ್ಯಾಯಾಲಯವು ಶಿಕ್ಷೆ ನೀಡಿದ ಬಗ್ಗೆ ಸಹಾಯಕ ಸರ್ಕಾರಿ ಅಭಿಯೋಜಕ ಮಹಾಂತೇ ಮಸಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.