ಶಹಾಬಾದ: ಅರಣ್ಯ ನಾಶದಿಂದ ಪರಿಸರದ ತಾಪಮಾನ ಹೆಚ್ಚಾಗಿ ಪ್ರಕೃತಿ ವಿಕೋಪಗಳು ಸಂಭವಿಸುತ್ತಿವೆ. ಆದ್ದರಿಂದ ಈ ತಾಪಮಾನವನ್ನು ತಡೆಯಲು ಪ್ರತಿಯೊಬ್ಬರೂ ಕಡ್ಡಾಯವಾಗಿ ಒಂದಾದರೂ ಸಸಿಯನ್ನು ನೆಟ್ಟು ಪೋಷಿಸಬೇಕೆಂದು ತಹಸೀಲ್ದಾರ ಸುರೇಶ ವರ್ಮಾ ಹೇಳಿದರು.
ಅವರು ತಾಲೂಕಿನ ಭಂಕೂರ ಗ್ರಾಮದ ದಿ.ಚಂದ್ರಕಾಂತ ಪಾಟೀಲ, ಗ್ರಾಮೀಣ ಅಭಿವೃದ್ದಿ ಟ್ರಸ್ಟ್ ವತಿಯಿಂದ ಆಯೋಜಿಸಲಾದ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಗಿಡಮರಗಳು ಇಲ್ಲದೇ ಹೋದರೆ ಉಸಿರಾಡಲು ಆಮ್ಲಜನಕವಿಲ್ಲದೇ ಯಾವ ಜೀವಿಗಳು ಬದುಕುಳಿಯಲಾರವು. ಆದ್ದರಿಂದ ಸಸಿಗಳನ್ನು ನೆಟ್ಟರೆ ಸಾಲದು ಅವುಗಳನ್ನು ಸೂಕ್ತ ರೀತಿಯಲ್ಲಿ ಪೋಷಣೆ ಮಾಡಿ ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಪ್ರತಿಜ್ಞೆ ಮಾಡಬೇಕೆಂದು ಹೇಳಿದರು.
ಬಿಜೆಪಿ ಚಿತ್ತಾಪೂರ ತಾಲೂಕ ಅಧ್ಯಕ್ಷ ನೀಲಕಂಠರಾವ ಪಾಟೀಲ ಮಾತನಾಡಿ, ಹಿಂದೆ ರೈತರು ತಮ್ಮ ಹೊಲದ ಬದುವಿನಲ್ಲಿ ಅನೇಕ ಮರಗಳನ್ನು ಬೆಳೆಯುವ ಮೂಲಕ ಪರಿಸರದ ಉಳಿವಿಗೆ ಕಾರಣರಾಗಿದ್ದರು. ಆದರೆ ಇಂದು ಗಿಡ ಮರಗಳನ್ನು ಬೆಳೆಸಲು ನಿರಾಸಕ್ತಿ ತೋರುತ್ತಿರುವುದರಿಂದ ಪರಿಸರ ನಾಶವಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಭೂಮಿಯಲ್ಲಿ ಸಸಿಗಳನ್ನು ನೆಡುವುದರ ಮೂಲಕ ಉತ್ತಮ ಪರಿಸರವನ್ನು ನಿರ್ಮಾಣ ಮಾಡಲು ಮುಂದಾಗಿ ಎಂದು ಹೇಳಿದರು.
ಸುರೇಶ ಮೆಂಗನ್, ಡಾ.ಮಲ್ಲೇಶಿ ಸಜ್ಜನ, ಗ್ರಾಪಂ. ಮಹ್ಮದ ಜಾಕೀರ, ಮಹೇಶ ಧರಿ, ಸುರೇಶ ಚವ್ಹಾಣ, ರಾಜೇಶ ಯನಗುಂಟಿಕರ್, ಹಣಮಂತ ಮಂತಟ್ಟಿ, ಬಸವರಾಜ, ಜೆಇ ರೇವಣಿಸಿದ್ದಪ್ಪ, ಮರಲಿಂಗ ಯಾದಗಿರಿ. ಹಣಮಂತ ಕುಂಬಾರ ಇದ್ದರು.