-
ಆಶಿಕ್ ಮುಲ್ಕಿ
ಸೂಫಿ ನೀನೆಂದರೆ
ಸಮುದ್ರದ ಅಲೆ
ಲೆಕ್ಕವಿಟ್ಟಷ್ಟು ಹೆಚ್ಚುವ ದರ್ದು…
ಹೀಗೆ ಸಿನೆಮಾವೊಂದು ಕಟ್ಟಿಕೊಡಬಲ್ಲ ಅನುಭವವನ್ನು ‘ಸೂಫಿಯುಂ ಸುಜಾದೆಯುಂ’ ನನ್ನಲ್ಲೂ ಕಟ್ಟಿಕೊಟ್ಟಿದೆ. ಸುಜಾದ ಎಂಬಾಕೆಯ ಮೌನ ಆಳವಾಗಿ ಎದೆಗಿಳಿಯುವಂತದ್ದು. ನಿರ್ದೇಶಕನ ಆ ಚಾಕಚಕ್ಯತೆಗೆ ಬಹುಪರಾಕ್. ಸೂಫಿಯ ಅಝಾನಿನ ತಾಳ, ಲಯ, ಇಂಪು ಅನ್ಯ ಧರ್ಮದ ಹೆಣ್ಣನ್ನು ಕುಣಿಯುವಂತೆ ಮಾಡುವುದು ಇದೆಯಲ್ಲಾ ಅದುವೇ ನೋಡಿ ಪ್ರೇಮ. ಇಲ್ಲಿ ಪ್ರೇಮವೆಂದರೆ ಸೂಫಿ. ಭಕ್ತಿ ಪರಕಾಷ್ಠೆಯಿಂದ ಅಝಾನಿನ ದಿವ್ಯಾನುಭೂತಿ ಪಡೆದುಕೊಳ್ಳವವರ ಮಧ್ಯೆ ಅಝಾನೆಂದರೆ ‘ಸುಜಾದೆ’ಯಂತವರ ಕಾಲು ಕುಣಿಯುವಂತೆ ಮಾಡುತ್ತವೆ. ಸೂಫಿಯೂ ಅಷ್ಟೇ, ಅದೆಷ್ಟು ಕಲೆಗಳನ್ನು ಕರಗತ ಮಾಡಿಕೊಂಡು, ಧರ್ಮದ ಆಳ ಅಗಲವನ್ನು ಅರಿತುಕೊಂಡು, ಖುರಾನಿನ ಸಾಲುಗಳನ್ನ ಬೋಧಿಸುವುದುರ ಜೊತೆಗೆ ‘ಕಾಫಿರಳ’ ಮೋಹಕ್ಕೆ ಬೀಳುವುದು ಇದೆಯಲ್ಲಾ ಅದೇ ಪ್ರೇಮ.
ಕಡಲಾಳದಲ್ಲಿ ಅಡಗಿರುವ ಮತ್ತು
ಸುಲಭದಲ್ಲಿ ಧಕ್ಕುವಂತದ್ದಲ್ಲ;
ನಿನ್ನಂತೆ ಸೂಫಿ…
ಪ್ರೇಮವೆಂದರೆ ಬರೀ ಮೋಹವಲ್ಲ. ಕಾಯುವಿಕೆ. ಗುರುವಿನ ಒಮ್ಮತ ಮೀರಿ ಸೂಫಿ ತನ್ನೆದೆಯೊಳಗೆ ಒಂದಿಚು ಜಾಗ ಸುಜಾದಾಳಿಗೆ ನೀಡುತ್ತೇನೆ ಎಂಬ ಗಟ್ಟಿ ನಿರ್ಧಾರ ಇಲ್ಲಿನ ಜನರ ಆತ್ಮವನ್ನು ಒಮ್ಮೆಗೆ ಕದಡುವಂತದ್ದು. ಇಲ್ಲಿ ನಿರ್ದೇಶಕರು ಸೂಫಿ ಸಂತ ಅಬೂ ಕೈಗೆ ಕ್ಲಾರೆಟ್ ಇಡುವ ಉದ್ದೇಶ ಅಗಾಧವಾದ ಯೋಚನೆಗೆ ಒಡ್ಡುವಂತದ್ದು. ನನ್ನ ತಿಳುವಳಿಕೆಯ ಮಟ್ಟಿಗೆ, ಕ್ಲಾರೆಟ್ ವಾದ್ಯಕ್ಕೂ ಈ ಇಸ್ಲಾಂಗೂ ಯಾವ ಸಂಬಂಧ..? ಕ್ಲಾರೆಟ್ ನಿಂದ ಹೊರಹೊಮ್ಮುವ ನಾದ ಮಸೀದಿಯ ಅಂಗಳದಲ್ಲಿ ಓರ್ವ ಹಿಂದೂ ಹೆಣ್ಣಿನ ಮೈ ಬಳುಕಿಗೆ ಕಾರಣಾವಾಗುವುದು ಇಂದಿನ ಪೀಳಿಗೆಯ ಎದೆಳಾಯದಲ್ಲಿ ಕಿಚ್ಚು ಹಚ್ಚುವಂತೆ ಮಾಡಬೇಕು.
ಸೂಫಿ ಜೊತಗೆ ಮೋಹಕ್ಕೆ ಬಿದ್ದು ಸುಜಾದ ಮೌನದಲ್ಲೇ ಮಾತಾಡುವುದು ಪ್ರೇಮಕ್ಕೆ ಕೊಟ್ಟ ಹೊಸ ಭಾಷ್ಯ. ತನ್ಮಾತ್ರಗಳು ಮಾತ್ರ ಉಳಿಯುವಂತೆ ರಾಜೀವ್ ಸುಜಾದಳ ಕೈ ಹಿಡಿಯುವುದು ಸೂಫಿಯಲ್ಲಿ ಉಂಟು ಮಾಡುವ ತಲ್ಲಣಗಳು ಪ್ರತಿಧ್ವನಿಸುವುದು ಮಾತ್ರ ಸುಜಾದಾಳಲ್ಲಿ. ಎಂದರೆ ಇಲ್ಲಿ ಧರ್ಮ ಮೀರಿ ಸೂಫಿ ಹಾಗೂ ಸುಜಾದ ಪ್ರೇಮವನ್ನು ಕಂಡುಕೊಂಡಿದ್ದಾರೆ. ಇನಿಯನ ನಮಾಝು ತನ್ನದೂ ಎಂದು ಸುಜಾದ ಈವರೆಗೆ ಮುಟ್ಟದ ಮುಸಲ್ಲ ಮುಟ್ಟಿ, ಹಾಸಿ ದುಪ್ಪಟ್ಟ ತಲೆ ಮೇಲೆ ಎಳೆದು ಸೂಫಿಯ ಮೂಗು, ತುಟಿ, ಗಡ್ಡವನ್ನೇ ದಿಟ್ಟಿಸುತ್ತಾ ಕೂರುವುದು ಎರಡು ಸಮುದಾಯಗಳು ಈವರೆಗೂ ಕುರುಡಾಗಿ ನಂಬಿಕೊಂಡ ಬಂದ ನಂಬಿಕೆ ಬೀಳುವ ಕೊಡಲಿ ಏಟು.
ಸಿನೆಮಾ ಅಂತ್ಯ ಹಾಡುವ ಹೊತ್ತಿಗೆ ರಾಜೀವ್ ನನ್ನನ್ನು ಹೆಚ್ಚು ಕಾಡುತ್ತಾನೆ. ಸೂಫಿಯ ನೆನಪುಗಳ ಮುತ್ತುಗಳಿಂದ ಪೋಣಿಸಿದ ತಸ್ಬೀಬ್ ಮಾಲೆಯನ್ನು ಖಬರಿನ ಅಂಚೆತ್ತಿ ಅದರೊಳಕ್ಕೆ ಹಾಕುವ ದೃಶ್ಯ ಸುಜಾದಳ ಆಳದಲ್ಲಿ ಉಂಟು ಮಾಡಬಲ್ಲ ದರ್ದು ರಾಜೀವ್ ಗೆ ಮಾತ್ರ ಗೊತ್ತು ಮಾಡುತ್ತದೆ. ಆವರೆಗೂ ರಾಜೀವ್ ಸಂಗಾತಿಯ ಇನಿಯನ ಕೊನೆಗಾಲವನ್ನು ಅವಳ ಕಣ್ಣಿಂದಲೇ ತುಂಬಿಸಿ ಗಹಗಹಿಸಲು ಹೊರಟವನು. ಆದರೆ ಸೂಫಿಯ ಖಬರಿನ ಮೇಲೆ ನಿಂತೇ ಪ್ರೇಮವೆಂದರೆ ಏನು ಎಂಬುವುದರ ಹೊಸ ನಾನರ್ಥಗಳನ್ನು ಹುಡುಕಿಕೊಳ್ಳುತ್ತಾನೆ ರಾಜೀವ್.
ಜಿನ್ನ್ ಮಸೀದಿ ಸೇರ ಬೇಕಾದರೆ ಒಂದು ನದಿಯನ್ನು ಹಾಯಬೇಕು. ಅದು ಕೇವಲ ಪ್ರೇಮಿನ ಸೌಂದರ್ಯಕ್ಕಾಗಿ ಕಟ್ಟಿದ ನೈಸರ್ಗಿಕ ಕಲ್ಪನೆಯಲ್ಲ. ಬದಲಿಗೆ ಸೂಫಿ ಹಾಗೂ ಸುಜಾದ ಎಂಬ ದಿವ್ಯ ಪ್ರೇಮಿಗಳಿಬ್ಬರು ಸಂಧಿಸುವ ಜಾಗಕ್ಕೆ ಹೊರಡುತ್ತಿದ್ದೀರ, ನಿಮ್ಮೊಳಗಿನ ಎಲ್ಲವನ್ನೂ ಈ ಹರಿಯುವ ನೀರಿನಲ್ಲಿ ಹರಿಯ ಬಿಡಿ. ಅವರಂತೆ ಮನುಷ್ಯರಾಗಿ ಬನ್ನಿ ಎಂಬುದುರ ಸಂಕೇತವೆ..? ನನ್ನೊಳಗೆ ನಿರ್ಮಿತಗೊಂಡ ಆಯಾಮಗಳಿವು.
ಹೀಗೆ ನನ್ನೊಳಗೆ ಗೋಜಲು ಹುಟ್ಟಿಸಿ ‘ಸೂಫಿಯುಂ ಸುಜಾದೆಯುಂ’ ಮುಗಿದೇ ಹೋಯ್ತು. ನಾನು ಮಾತ್ರ ರಾಜೀವ್ ಜಿನ್ನ್ ಪಳ್ಳಿಯ ಖಬರಿಸ್ತಾನದಲ್ಲಿ ಸೂಫಿಯ ಖಬರಿನ ಮೇಲೆ ಏಕಾಂಗಿಯಾಗಿ ನಿಂತಂತೇ ನಿಂತಿದ್ದೇನೆ.