ಕಲಬುರಗಿ: ಆಳಂದ ತಾಲೂಕಿನ ಗೋಳಾ(ಬಿ) ಗ್ರಾಮದ ಲಕ್ಕಮ್ಮ ದೇವಸ್ಥಾನದ ಹತ್ತಿರದಲ್ಲಿ 2020ರ ಮೇ 30 ರಂದು ಪತ್ತೆಯಾದ ಸುಮಾರು ಒಂದು ದಿವಸದ ಹೆಣ್ಣು ಮಗುವನ್ನು ಕಲಬುರಗಿಯ ಡಾನ್ಬಾಸ್ಕೋ ಪ್ಯಾರ್ ಚೈಲ್ಡ್ ಲೈನ್ ಸಂಸ್ಥೆಯ ಸಿಬ್ಬಂದಿಯವರು 2020ರ ಮೇ 31 ರಂದು ಕಲಬುರಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಮೂಲ್ಯ ಶಿಶುಗೃಹದಲ್ಲಿ ದಾಖಲಿಸಿರುತ್ತಾರೆ ಎಂದು ಅಮೂಲ್ಯ ಶಿಶು ಗೃಹದ ಅಧೀಕ್ಷಕರು ತಿಳಿಸಿದ್ದಾರೆ.
ಈ ದೇವಸ್ಥಾನದ ಹತ್ತಿರದಲ್ಲಿ ಯಾರೋ ಅಪರಿಚಿತರು ಬಿಟ್ಟು ಹೋಗಿರುವ ಮಗುವಿನ ಕುರಿತು ಸಾರ್ವಜನಿಕರು 1098ಗೆ ಕರೆ ಮಾಡಿದಾಗ ಕಲಬುರಗಿಯ ಡಾನ್ಬಾಸ್ಕೋ ಪ್ಯಾರ್ ಚೈಲ್ಡ್ ಲೈನ್ ಸಂಸ್ಥೆಯ ಸಿಬ್ಬಂದಿಯವರು ಈ ಸ್ಥಳಕ್ಕೆ ಭೇಟಿ ನೀಡಿ ಈ ಮಗುವನ್ನು ರಕ್ಷಿಸಿ ಚಿಕಿತ್ಸೆಗಾಗಿ ಜಿಮ್ಸ್/ಜಿಲ್ಲಾ ಆಸ್ಪತ್ರೆಯ ಪಿಐಸಿಯು ನಲ್ಲಿ ದಾಖಲಿಸಿರುತ್ತಾರೆ. ನಂತರ ಈ ಹೆಣ್ಣು ಮಗುವಿನ ಪಾಲನೆ, ಪೋಷಣೆ ಹಾಗೂ ರಕ್ಷಣೆಗಾಗಿ ಈ ಅಮೂಲ್ಯ ಶಿಶು ಗೃಹದಲ್ಲಿ ದಾಖಲಿಸಿರುತ್ತಾರೆ.
ಬಿಳುಪು ಬಣ್ಣ ಹೊಂದಿರುವ ಈ ಹೆಣ್ಣು ಮಗುವಿನ ಆರೋಗ್ಯ ಸ್ಥಿತಿ ಸಾಮಾನ್ಯವಾಗಿದೆ. ಮೇಲ್ಕಂಡ ಹೆಣ್ಣು ಮಗುವಿನ ಪಾಲಕರು ಮತ್ತು ಪೋಷಕರು ಪ್ರಕಟಣೆಯಾದ 30 ದಿನದೊಳಗೆ ಸಂಬಂಧಪಟ್ಟ ಅಗತ್ಯ ದಾಖಲೆಗಳೊಂದಿಗೆ ಅಧೀಕ್ಷಕರು, ಅಮೂಲ್ಯ ಶಿಶು ಗೃಹ, ಆಳಂದ ರಸ್ತೆ, ಕಲಬುರಗಿ ಕಚೇರಿಗೆ ಭೇಟಿ ನೀಡಬೇಕು. ತಪ್ಪಿದಲ್ಲಿ ಕಾನೂನು ಪ್ರಕಾರ ಈ ಹೆಣ್ಣು ಮಗುವಿನ ದತ್ತು ಪ್ರಕ್ರಿಯೆ ಕೈಗೊಳ್ಳಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಅಮೂಲ್ಯ ಶಿಶುಗೃಹದ ಅಧೀಕ್ಷಕರನ್ನು ಹಾಗೂ ದೂರವಾಣಿ ಸಂಖ್ಯೆ 08472-265588 ಹಾಗೂ ಮೊಬೈಲ್ ಸಂಖ್ಯೆ 8139950601ಗೆ ಸಂಪರ್ಕಿಸಲು ಕೋರಲಾಗಿದೆ.