ಕಲಬುರಗಿ: ಮುಂಬೈನ ದಾದರ್ ನಲ್ಲಿರುವ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರ ರಾಜಗೃಹದ ಮೇಲೆ ದುಷ್ಕರ್ಮಿಗಳು ದಾಳಿ ನಡೆದಿರುವುದನ್ಮು ಖಂಡಿಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿ ಮಾದಿಗ ಸಮುದಾಯದ ಮುಖಂಡರ ನೇತೃತ್ವದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿಗೆ ಮನವಿ ಮಾಡಿಕೊಂಡಿದ್ದಾರೆ.
ವಾಡಿ ಪಟ್ಟಣದ ಪೊಲೀಸ್ ಠಾಣೆಗೆ ಭೇಟಿ ನೀಡಿದ ಸಮುದಾಯದ ಮುಖಂಡರು ಹಾಗೂ ಮಾದಿಗ ದಂಡೋರ ಸಂಘಟನೆಯ ಕಾರ್ಯಕರ್ತರು ವಾಡಿ ಪೊಲೀಸ್ ಠಾಣೆ ಪಿಎಸ್ಐ ವಿಜಯಕುಮಾರ್ ಬಾವಗಿ ಅವರ ಮುಖಾಂತರ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.
ದೇಶದ ಸಂವಿಧಾನ ರಚಿಸಿ ದೀನದಲಿತರ, ಬಡವರ ಪಾಲಿಗೆ ಬೆಳಕಾದ ಡಾ. ಬಿ. ಆರ್ ಅಂಬೇಡ್ಕರ್ ಅವರ ರಾಜಗೃಹದ ಮೇಲೆ ಉದ್ದೇಶಪೂರ್ವಕವಾಗಿ ದಾಳಿ ಮಾಡಲಾಗಿದೆ, ಆದರಿಂದ ಕೂಡಲೇ ಮಹಾರಾಷ್ಟ್ರ ಸರ್ಕಾರ ತಪ್ಪಿತಸ್ಥರನ್ನು ಬಂಧಿಸಿ ದೇಶದಿಂದ ಗಡಿಪಾರು ಮಾಡುವಂತೆ ಒತ್ತಾಯಿಸಿದರು.
ಘಟನೆ ನಡೆದು ಹಲವು ದಿನಗಳು ಕಳೆದರು ಕೂಡ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ವಿಫಲವಾದ ಮಹಾರಾಷ್ಟ್ರ ಸರ್ಕಾರ ಗೃಹಮಂತ್ರಿಗಳು ರಾಜೀನಾಮೆ ನೀಡಬೇಕೆಂದು ಈ ಸಂದರ್ಭದಲ್ಲಿ ಆಗ್ರಹಿಸಿದ್ದಾರೆ.