ಕಲಬುರಗಿ: ಕಳೆದ ಎರಡು ದಿನಗಳಿಂದ ಜಿಲ್ಲಾದ್ಯಂತ ಸುರಿಯುತ್ತಿರುವ ಭಾರೀ ಮಳೆಯಿಂದ ಬಹುತೇಕ ಕೃಷಿ ಜಮೀನುಗಳು ಜಲಾವೃತವಾಗಿ ಬೆಳೆ ನಾಶವಾಗಿವೆ. ಈಗಲೂ ಮೋಡ ಕವಿದ ವಾತಾವರಣವಿದ್ದು, ಇನ್ನೂ ಮಳೆಯಾಗುವ ಸಾಧ್ಯತೆಗಳಿವೆ. ಲಾಕ್ ಡೌನ್ ನಡುವೆ ಜಿಲ್ಲೆಗೆ ಮತ್ತೊಂದು ಬರೆ ಎಳೆದಂತಾಗಿದೆ.
ಕೊರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರಕಾರದ ಆದೇಶದಂತೆ ಜು.14 ರಿಂದ 20 ವರೆಗೆ ಲಾಕ್ ಡೌನ್ ಘೋಷಣೆಯಾಗಿದ್ದು, ಮಂಗಳವಾರ ರಾತ್ರಿಯಿಂದ ಸುರಿಯುತ್ತಿರುವ ಮಳೆ ಗುರುವಾರ ಬೆಳಗ್ಗಿನ ಜಾವದ ವರೆಗೆ ಭಾರಿ ಮಳೆ ಸುರಿದಿದೆ.
ಇದರಿಂದಾಗಿ ನಗರ ಪ್ರದೇಶದಲ್ಲಿ ಅನೇಕ ಮನೆಗಳಲ್ಲಿ ಸಂಪೂರ್ಣವಾಗಿ ಮಳೆ ನೀರು ನುಗ್ಗಿ ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಅಲ್ಲದೆ ನಗರದ ಹೃದಯ ಭಾಗವಾದ ಮಿನಿ ವಿಧಾನ ಸೌಧದ ಮಖ್ಯ ಮಾರ್ಗ ಕೆಬಿಎನ್ ಆಸ್ಪತ್ರೆ ಮುಂಭಾಗದಲ್ಲಿ ಹೊಳೆಯ ನೀರು ಹರಿದ ಅನುಭವ ಕಾಣುತ್ತಿತ್ತು. ನೀರಿನಲ್ಲಿ ಸಂಚರಿಸುವ ವಾಹನ ಸವಾರರಿಗೆ ದೋಣಿಯಲ್ಲಿ ಸಂಚರಿಸುವ ಅನುಭವ ಬಿಸಿಲು ನಾಡಿನಲ್ಲಿ ಉಂಟಾಗಿರುವ ಸಣ್ಣ ವಿಡಿಯೋ ತುಣುಕಲ್ಲಿ ಕಂಡುಬಂತು.
ಲಾಕ್ ಡೌನ್ ನಡುವೆ ಭಾರಿ ಮಳೆ ಜನರಿಗೆ ಸಂಕಷ್ಟಕ್ಕೆ ಸಿಲುಕಿಸಿ ಗಾಯದ ಮೇಲೆ ಬರೆ ಎಳೆದಂತಾಗಿದೆ. ಜಲವೃತಗೊಂಡಿರುವ ಮನೆ ಹಾಗೂ ಜಿಲ್ಲಾದ್ಯಂತ ನಾಶವಾಗಿರುವ ಕೃಷಿ ಜಮೀನು ಮತ್ತು ಕೆಲ ದಿನಗಳ ಹಿಂದಷ್ಟೇ ಬಿತ್ತನೆ ಮಾಡಲಾಗಿದ್ದ ತೊಗರಿ, ಹೆಸರು, ಉದ್ದು, ಎಳ್ಳು ಇತ್ಯಾದಿ ಬೆಳೆಗಳು ನೀರಿನಲ್ಲಿ ನಿಂತು ಕೊಚ್ಚಿ ಹೋಗಿವೆ.
ಮಳೆಯಿಂದ ಕಂಗಾಲಾದ ರೈತರು ಜಿಲ್ಲಾಡಳಿತ ಮೇಲೆ ನಿರೀಕ್ಷೆ ಇಟ್ಟಿದ್ದಾರೆ.