ವಾಡಿ: ಹಾಲು ಕುಡಿಯುವ ಮಕ್ಕಳನ್ನ ಮನ್ಯಾಗ ಬಿಟ್ಟು, ಮಹಾಮಾರಿ ಸೋಂಕಿತರ ಮನೆಗೆ ಭೇಟಿ ಕೊಟ್ಟು, ಅಸುರಕ್ಷತೆಯ ನಡುವೆ ನಿರ್ಭಯವಾಗಿ ಶಂಕಿತ ರೋಗಿಗಳ ಕೈಗಳಿಗೆ ಸೀಲ್ ಹಾಕಿದ್ದು ತಪ್ಪಾಯ್ತೋ? ಜನರ ಆರೋಗ್ಯ ಸೇವೆಯೇ ದೇವರ ಸೇವೆ ಎಂದು ಹಗಲು ರಾತ್ರಿ ಎನ್ನದೆ ಕರ್ತವ್ಯ ನಿರ್ವಹಿಸಿದ್ದೇ ತಪ್ಪಾಯ್ತೋ? ಯಾಕ್ ಸರ್ಕಾರ ನಮ್ಮ ಕಷ್ಟ ಕೇಳುತ್ತಿಲ್ಲ? ಹೊಟ್ಟೆ ತುಂಬುವಷ್ಟು ಊಟ ಕೊಡ್ರೀ ಅಂತ ಕೇಳೋದೇ ತಪ್ಪಾ? ಪಗಾರ್ ಇಲ್ದೆ ಕಣ್ಣೀರಾಗ ಕೈತೊಳಿಲಾಕತ್ತೀವ್ರಿ. ನಮ್ಮ ಬ್ಯಾನಿ ನಮ್ಗೇ ಗೊತ್ರಿ. ಮನ್ಯಾಗ ಒಪ್ಪತ್ತಿನ ಕೂಳಿಲ್ದೆ ಸಾಯಾಕತ್ತೀವ್ರಿ. ಕೆಲ್ಸಾ ಬಿಟ್ಟು ಹೋರಾಟಕ್ಕೆ ನಿಂತು ೧೧ ದಿನ ಆಯಿತ್ರಿ. ಇಷ್ಟಾದ್ರೂ ಯಾರೂ ನಮ್ಮ ಕಷ್ಟ ಕೇಳಾವಲ್ರಿ. ನಾವೇನು ಪಾಪಿಗಳಾ..? ಹೀಗೆ ತನ್ನ ಬದುಕಿನ ಗೋಳು ಹೇಳಿಕೊಳ್ಳುತ್ತಲೇ ಆಶಾ ಕಾರ್ಯಕರ್ತೆಯೊಬ್ಬರು ಕಣ್ಣೀರಾದ ಪ್ರಸಂಗ ನಡೆಯಿತು.
ಗೌರವಧನ ಹೆಚ್ಚಳ ಸೇರಿದಂತೆ ಇತರ ಬೇಡಿಕೆಗಳಿಗಾಗಿ ಆಗ್ರಹಿಸಿ ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ (ಎಐಯುಟಿಯುಸಿ) ನೇತೃತ್ವದಲ್ಲಿ ಮುಷ್ಕರಕ್ಕೆ ಕರೆ ನೀಡಿ ಹೋರಾಟದಲ್ಲಿರುವ ಆಶಾ ಕಾರ್ಯಕರ್ತೆಯರು, ಮಂಗಳವಾರ ಸ್ಥಳೀಯ ಪೊಲೀಸ್ ಠಾಣೆಗೆ ಆಗಮಿಸಿ ಪಿಎಸ್‌ಐ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡುತ್ತ ವಿಜುಬಾಯಿ ರಾಠೋಡ ಎಂಬ ಆಶಾ ಕಾರ್ಯಕರ್ತೆ ಕೊರೊನಾ ವಾರಿಯರ್ಸ್ ಆಶಾಗಳ ಜೀವನದ ಹಿಂದಿನ ಕರಾಳ ಕಥೆ ಬಿಚ್ಚಿಡುವ ಮೂಲಕ ಭಾವುಕರಾದರು. ಇಷ್ಟು ದಿನ ನಮ್ಮ ಸೇವೆಯನ್ನು ಬಳಸಿಕೊಂಡ ಸರಕಾರಕ್ಕೆ ಇಂದು ನಾವು ಬೇಡವಾಗಿದ್ದೇವೆ. ಹೋರಾಟದ ಹಕ್ಕಿನಡಿ ನ್ಯಾಯ ಪಡೆಯುತ್ತೇವೆ. ಎಲ್ಲಾ ಸಂಘ ಸಂಸ್ಥೆಗಳು ನಮಗೆ ದನಿಯಾಗಬೇಕು ಎಂದು ಮನವಿ ಮಾಡಿದರು.
ಆಶಾ ಹೋರಾಟ ಬೆಂಬಲಿಸಿ ಮಾತನಾಡಿದ ವಿವಿಧ ಸಂಘಟನೆಗಳ ಮುಖಂಡರಾದ ಸಿದ್ದಯ್ಯಶಾಸ್ತ್ರೀ ನಂದೂರಮಠ, ಭಾಗಣ್ಣ ಬಿ.ದೊರೆ ಹಾಗೂ ಎಐಡಿಎಸ್‌ಒ ಕಾರ್ಯದರ್ಶಿ ವೆಂಕಟೇಶ ದೇವದುರ್ಗ, ಮಾಸಿಕ ರೂ.೧೨೦೦೦ ಗೌರವಧನ ಹೆಚ್ಚಳದ ಬೇಡಿಕೆ ಸಮಂಜಸವಾಗಿದೆ. ಮಹಾಮಾರಿ ಕೊರೊನಾ ಯುದ್ಧದಲ್ಲಿ ಪ್ರಾಮಾಣಿಕ ಸೈನಿಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಸರ್ಕಾರ ಕನಿಷ್ಟ ಗೌರವಧನ ಹೆಚ್ಚಿಸಿಲು ಹಿಂದೇಟು ಹಾಕುತ್ತಿರುವುದು ಅಮಾನವೀಯವಾಗಿದೆ. ರಾಜ್ಯದ ಮುಖ್ಯಮಂತ್ರಿಗಳು ಎಚ್ಚೆತ್ತುಕೊಂಡು ಆಶಾಗಳ ಬೇಡಿಕೆಗೆ ಸ್ಪಂದಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಜಂಟಿ ಕಾರ್ಯದರ್ಶಿ ಶರಣು ಹೇರೂರ, ಎಐಡಿವೈಒ ಮುಖಂಡ ರಾಜು ಒಡೆಯರಾಜ, ಬಸವರಾಜ ನಾಟೀಕಾರ, ಆಶಾಗಳಾದ ವಿಜುಬಾಯಿ ರಾಠೋಡ, ರತ್ನಮ್ಮ ಕಟ್ಟಿಮನಿ, ಶಿವುಲೀಲಾ ಹಡಪದ, ಸುನೀತಾ ಸಿಂಧೆ, ಅನಿತಾ ಬೂತಪೂರ, ಅರುಣಾ ಫಸ್ಫುಲ್, ಶಾಂತಾಬಾಯಿ ವಾಡೇಕರ ಸೇರಿದಂತೆ ಮತ್ತಿತರರು ಪಿಎಸ್‌ಐ ವಿಜಯಕುಮಾರ ಭಾವಗಿ ಅವರ ಮೂಲಕ ಸರಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.