ಸುರಪುರ: ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಹಾ ಮಳೆಗೆ ತಾಲೂಕಿನಲ್ಲಿ ಅನೇಕ ರೀತಿಯ ಅವಾಂತರಗಳನ್ನು ಸೃಷ್ಟಿ ಮಾಡಿದೆ.ಅದರಂತೆ ನಗರದ ವಾರ್ಡ್ ನಂಬರ್ ೩೦ ಮತ್ತು ೩೧ರ ವಣಕಿಹಾಳದಲ್ಲಿರುವ ಮೂರು ನೂರಕ್ಕೂ ಹೆಚ್ಚು ಮನೆಗಳಲ್ಲಿ ಸುಮಾರು ೫೦ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿವೆ.
ವಣಕಿಹಾಳದಲ್ಲಿ ಭೀಕ್ಷಾಟನೆ ಮಾಡುತ್ತಿದ್ದ ಹಾಗು ಕೂದಲು ತುಂಬುವ,ಪ್ಲಾಸ್ಟಿಕ್ ವಸ್ತುಗಳ ಮಾರಾಟ ಮಾಡುವ,ಹಳೆ ವಸ್ತುಗಳನ್ನು ತುಂಬುವ ಜನರ ಗುಡಿಸಲುಗಳಿವೆ.ಇಲ್ಲಿ ಅನೇಕ ವರ್ಷಗಳಿಂದ ಈ ಕುಟುಂಬಗಳು ವಾಸಿಸುತ್ತಿದ್ದು ಇಲ್ಲಿ ಪ್ರತಿ ವರ್ಷ ಮಳೆಗಾಲ ಬಂದರೆ ಇಲ್ಲಿಯ ಕುಟುಂಬಗಳಿಗೆ ತೊಂದರೆಯಿದೆ.ಈಗಲು ಕೂಡ ಕಳೆದ ಮೂರು ದಿನಗಳಿಂದ ಸುರಿದ ಮಹಾ ಮಳೆಗೆ ಸಿಲುಕಿರುವ ಇಲ್ಲಿಯ ಕುಟುಂಬಗಳು ತೀವ್ರವಾದ ಸಂಕಷ್ಟವನ್ನು ಹೆದರಿಸುವಂತಾಗಿದೆ.
ಇಡೀ ರಾತ್ರಿ ಸುರಿದ ಮಳೆಗೆ ನೀರು ಗುಡಿಸಲುಗಳಲ್ಲಿ ಹೊಕ್ಕಿದ್ದರಿಂದ ಮನೆಯ ಎಲ್ಲರು ರಾತ್ರಿ ಬೀದಿಯಲ್ಲಿ ಕಾಲ ಕಳೆಯುವಂತಾಗಿದೆ.ಜನರ ಮನೆಯಲ್ಲಿನ ಎಲ್ಲಾ ವಸ್ತುಗಳು ನೀರು ಪಾಲಾಗಿದ್ದು ಬದುಕು ನಡೆಸುವುದು ಹೇಗೆಂದು ಚಿಂತಿಸುವಂತಾಗಿದೆ.ಈ ಕುರಿತು ಸ್ಥಳಿಯ ವ್ಯಕ್ತಿ ದುರ್ಗಪ್ಪ ಮಾತನಾಡಿ,ಸುಮಾರು ನಾಲ್ಕು ದಶಕಗಳಿಂದ ನಾವು ಇಲ್ಲೆ ಇರುತ್ತಿದ್ದು ಪ್ರತಿವರ್ಷ ಮಳೆಗಾಲ ಬಂದರೆ ನಮಗೆ ಇದೇ ಗತಿಯಿದೆ.ನಮಗೆ ಒಂದೊಳ್ಳೆ ರಸ್ತೆಯನ್ನು ಮಾಡಿಲ್ಲ,ಎಂದಿಗೂ ನಾವು ಗುಡಿಸಲುಗಳಲ್ಲೆ ಕಾಲ ಕಳೆಯ ಬೇಕಿದೆ ಒಂದು ಮನೆಯನ್ನೂ ನಿರ್ಮಿಸಿಕೊಟ್ಟಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಸ್ಥಳಕ್ಕೆ ಲೋಕ ಜನಶಕ್ತಿ ಪಕ್ಷದ ಜಿಲ್ಲಾಧ್ಯಕ್ಷ ರಾಜಾ ಅಪ್ಪಾರಾವ್ ನಾಯಕ ಭೇಟಿ ನೀಡಿ,ವಣಕಿಹಾಳ ಗ್ರಾಮದ ಜನರಿಗೆ ಕೂಡಲೆ ಮನೆಗಳನ್ನು ನಿರ್ಮಿಸಿಕೊಡುವ ಜೊತೆಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು.ಇಲ್ಲಿಯ ಕುಟುಂಬಗಳು ಇಷ್ಟೊಂದು ತೊಂದರೆಯಲ್ಲಿದ್ದರು ಇದುವರೆಗೆ ಯಾವ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಭೇಟಿ ನೀಡದಿರುವುದು ನೋವಿನ ಸಂಗತಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.