ಬಸವೇಶ್ವರ ಆಸ್ಪತ್ರೆ, ಕೆಬಿಎನ್ ಆಸ್ಪತ್ರೆಗಳಲ್ಲೂ ಕೋವಿಡ್ ಟೆಸ್ಟ್ ಲ್ಯಾಬ್: ಡಾ. ಉಮೇಶ್ ಜಾಧವ್

0
51

ಕಲಬುರಗಿ: ಜಿಲ್ಲೆಯಲ್ಲಿ ಕೋವಿಡ್-19 ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇಎಸ್‍ಐಸಿ ಮೆಡಿಕಲ್ ಕಾಲೇಜು ಜೊತೆಗೆ ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಮಹಾದೇವಪ್ಪ ರಾಂಪುರೆ ಮಡಿಕಲ್ ಕಾಲೇಜು ಅಥವಾ ಬಸವೇಶ್ವರ ಆಸ್ಪತ್ರೆ ಹಾಗೂ ಕೆಬಿಎನ್ ಆಸ್ಪತ್ರೆಗಳಲ್ಲೂ ಶೀಘ್ರದಲ್ಲಿ ಕೋವಿಡ್-19 ಸೋಂಕು ಪರೀಕ್ಷಿಸುವ ಟೆಸ್ಟ್ ಲ್ಯಾಬ್ ಆರಂಭಿಸಲಾಗುವುದು ಎಂದು ಸಂಸದ ಉಮೇಶ್ ಜಾಧವ್ ಅವರು ಹೇಳಿದರು.

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಶುಕ್ರವಾರ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

Contact Your\'s Advertisement; 9902492681

ಭಾರತೀಯ ವೈದ್ಯಕೀಯ ಸಂಶೋಧನಾ ಕೇಂದ್ರದ (ಐಸಿಎಂಆರ್) ಮಹಾನಿರ್ದೇಶಕ ಭಾರ್ಗವ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇನ್ನು ಹೆಚ್ಚಿನ ಲ್ಯಾಬ್‍ಗಳ ಅವಶ್ಯಕತೆಯಿದೆ. ಅದಕ್ಕಾಗಿ ಕೂಡಲೇ ಬಸವೇಶ್ವರ ಆಸ್ಪತ್ರೆ (ಎಂಆರ್‍ಎಂಸಿ) ಮತ್ತು ಕೆಬಿಎನ್ ಆಸ್ಪತ್ರೆಗಳಲ್ಲಿ ಕೋವಿಡ್-19 ಟೆಸ್ಟ್‍ಲ್ಯಾಬ್ ಪ್ರಾರಂಭಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಕೋರಿದರು.

ಇಎಸ್‍ಐಸಿ ಮೆಡಿಕಲ್ ಆಸ್ಪತ್ರೆಯಲ್ಲಿ ಅವಶ್ಯಕತೆಯಿರುವ ಹುದ್ದೆಗಳಿಗಾಗಿ ಗುತ್ತಿಗೆ ಆಧಾರದ ಮೇಲೆ ಅರ್ಜಿ ಕರೆದು, ಸ್ಥಳೀಯ ಜನರಿಗೆ ಉದ್ಯೋಗಾವಕಾಶ ನೀಡಲಾಗುವುದು ಎಂದ ಅವರು, ಕೊರೋನಾದಿಂದಾಗಿ ಸಾವನ್ನಪ್ಪಿದ ವ್ಯಕ್ತಿಯ ಕುಟುಂಬಕ್ಕೆ ಆತ್ಮ ವಿಶ್ವಾಸ ಮೂಡಿಸುವಲ್ಲಿ ವೈದ್ಯರು ಪ್ರಮುಖ ಪಾತ್ರವಹಿಸಬೇಕು ಎಂದು ವೈದ್ಯರಿಗೆ ಸಲಹೆ ನೀಡಿದರು.

ಕೋವಿಡ್‍ನಿಂದ ಸಾವನ್ನಪ್ಪಿದ ವ್ಯಕ್ತಿಯ ಅಂತಿಮ ಸಂಸ್ಕಾರ ಸಂದರ್ಭದಲ್ಲಿ ಕೊರೋನಾ ಸ್ವಯಂಸೇವಕರಿಗೆ ಅಗತ್ಯ ಸಹಕಾರ ನೀಡುವುದರ ಮೂಲಕ ಅಂತ್ಯಸಂಸ್ಕಾರದಲ್ಲಿ ಯಾವುದೇ ಅಡೆ ತಡೆಯಾಗದಂತೆ ಎಚ್ಚರವಹಿಸಬೇಕು ಎಂದು ಅಧಿಕಾರಿಗಳಿಗೆ ಹೇಳಿದರು.

ವೈದ್ಯರು ಕೋವಿಡ್ ಪೀಡಿತರಿಗಾಗಿ ಹಗಲು ರಾತ್ರಿ ದುಡಿಯುತ್ತಿರುವುದು ಶ್ಲಾಘನೀಯ, ಸ್ವತ: ರೋಗಿಯ ಸಂಬಂಧಿಕರೇ ರೋಗಿಯ ಹತ್ತಿರ ಹೋಗಲು ಹೆದರುತ್ತಿರುವ ಪ್ರಸಕ್ತ ಸನ್ನಿವೇಶದಲ್ಲಿ ಆರೋಗ್ಯ ಸಿಬ್ಬಂದಿಗಳು ನಿರಂತರವಾಗಿ ರೋಗಿಯೊಂದಿಗೆ ಭೇದ-ಭಾವ ತೋರದೆ ಆರೈಕೆ ಮಾಡುತ್ತಿರುವುದು ಹೆಮ್ಮೆಯ ವಿಷಯ ಎಂದರು.

ಇಎಸ್‍ಐ ಆಸ್ಪತ್ರೆಯಲ್ಲಿ ಎಲ್ಲಾ ರೀತಿಯ ಸವಲತ್ತುಗಳನ್ನು ಒದಗಿಸಲಾಗಿದ್ದು ಅದರ ಸದುಪಯೋಗಪಡೆದುಕೊಳ್ಳಬೇಕು ಎಂದು ಅವರು ಕರೆ ನೀಡಿದರು.

ಜಿಮ್ಸ್‍ಗೆ ಸಂಸದರ ಭೇಟಿ: ಇದೇ ಸಂದರ್ಭದಲ್ಲಿ ಜಿಮ್ಸ್ ಕೋವಿಡ್ ಆಸ್ಪತ್ರೆಗೆ ಭೇಟಿ ನೀಡಿದ ಸಂಸದರು, ಕೊರೋನಾ ಸೋಂಕಿತ ವ್ಯಕ್ತಿಗಳೊಂದಿಗೆ ದೂರವಾಣಿ ಮೂಲಕ ಮಾತನಾಡಿ ಯೋಗಕ್ಷೇಮ ವಿಚಾರಿಸಿದರು. ಜಿಮ್ಸ್ ಆಸ್ಪತ್ರೆಯಲ್ಲಿ ಎಲ್ಲಾ ರೀತಿಯ ಸವಲತ್ತುಗಳಿದ್ದು, ರೋಗಿಗಳು ಯಾವುದೇ ಕಾರಣಕ್ಕೂ ಆತಂಕಕ್ಕೆ ಒಳಗಾಗದೇ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಧೈರ್ಯ ತುಂಬಿದರು.

ಬಸವೇಶ್ವರ ಆಸ್ಪತ್ರೆಯ ಸೆಂಟ್ರಲ್ ಲ್ಯಾಬ್ ನಿರ್ದೇಶಕ ಡಾ. ಎಸ್. ಎಂ. ಅವಂತಿ, ಕೆಬಿಎನ್ ಆಸ್ಪತ್ರೆಯ ಎಡಿಎಂ ಡಾ. ಮಹಮ್ಮದ್ ಫಾರೂಕ್, ಅಸೋಸಿಯೇಟ್ ಪ್ರೊಫೆಸರ್ ಡಾ. ಎಂ. ಅಲಿ ಆರ್. ಪಟೇಲ್, ಇಎಸ್‍ಐಸಿ ಮೈಕ್ರೋ ವಿಭಾಗದ ಸಂಯೋಜಕರಾದ ಡಾ.ಪಾಕಂಡೆಕರ್ ಪ್ರಶಾಂತ್ ಕೆ. ಅವರು ಈ ಸಂದರ್ಭದಲ್ಲಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here