ಸುರಪುರ: ಇಂದು ಮುಖ್ಯಮಂತ್ರಿ ಯಡಿಯೂರಪ್ಪನವರು ಸೇರಿದಂತೆ ಇಡೀ ದೇಶದ ಎಲ್ಲಾ ರಾಜಕಾರಣಿಗಳು ಅಧಿಕಾರ ನಡೆಸುತ್ತಿರುವುದು ಮತ್ತು ರಾಜಕಾರಣ ಮಾಡುತ್ತಿರುವುದು ಅಂದಿನ ಎಲ್ಲಾ ಸ್ವಾತಂತ್ರ್ಯ ಹೋರಾಟಗಾರರ ಫಲದಿಂದ ಎಂಬುದನ್ನು ಮರೆಯಬಾರದು ಎಂದು ಕುರುಬ ಸಮುದಾಯದ ಯುವ ಮುಖಂಡ ರಂಗನಗೌಡ ಪಾಟೀಲ ದೇವಿಕೆರಾ ಎಚ್ಚರಿಸಿದ್ದಾರೆ.
ಕರ್ನಾಟಕ ಶಾಲಾ ಪಠ್ಯದಿಂದ ರಾಣಿ ಅಬ್ಬಕ್ಕ,ಸಂಗೊಳ್ಳಿ ರಾಯಣ್ಣ ಮತ್ತಿತರೆ ಸ್ವಾತಂತ್ರ್ಯ ಹೋರಾಟಗಾರರ ಚರಿತ್ರೆಯನ್ನು ತೆಗೆದಿರುವುದನ್ನು ಖಂಡಿಸಿ ಪತ್ರಿಕಾ ಹೇಳಿಕೆ ನೀಡಿರುವ ಅವರು,ಅಂದು ಕಿತ್ತೂರ ರಾಣಿ ಚೆನ್ನಮ್ಮ,ರಾಣಿ ಅಬ್ಬಕ್ಕ,ಸುರಪುರದ ಅರಸರು,ಸಂಗೊಳ್ಳಿ ರಾಯಣ್ಣ ನಂತಹ ಪರಾಕ್ರಮಿ ದೇಶ ಪ್ರೇಮಿಗಳ ಹೋರಾಟದ ಫಲದಿಂದ ಇಂದು ನಿವೆಲ್ಲರು ಅಧಿಕಾರ ನಡೆಸುತ್ತಿರುವಿರಿ.ಆದರೆ ಅದೇ ಸ್ವಾತಂತ್ರ್ಯ ಹೋರಾಟಗಾರರನ್ನೆ ಶಾಲಾ ಪಠ್ಯದಿಂದ ತೆಗೆದು ಮಕ್ಕಳಿಗೆ ಇನ್ಯಾವ ನೀತಿಯನ್ನು ಕಲಿಸಲು ಹೊರಟಿರುವಿರಿ.
ಇತಿಹಾಸ ಮರೆತವರು ಇತಿಹಾಸ ನಿರ್ಮಿಸಲಾರರು ಎನ್ನುವ ಮಾತಿನಂತೆ ತಾವು ಇತಿಹಾಸವನ್ನೆ ಪಠ್ಯದಿಂದ ತೆಗೆದು ನಾಡಿನ ಸ್ವಾತಂತ್ರ್ಯ ಹೋರಾಟಗಾರರನ್ನು ಅಪಮಾನಿಸುವ ಕೆಲಸ ಮಾಡುತ್ತಿರುವುದು ಖಂಡನಿಯವಾಗಿದೆ.ಕೂಡಲೆ ಪಠ್ಯದಿಂದ ಕೈಬಿಟ್ಟ ಸ್ವಾತಂತ್ರ್ಯ ಹೋರಾಟಗಾರರ ಚರಿತ್ರೆಯನ್ನು ಸೇರಿಸಬೇಕು ಇಲ್ಲವಾದಲ್ಲಿ ರಾಜ್ಯದಲ್ಲಿನ ಎಲ್ಲಾ ಜಿಲ್ಲಾ ಮತ್ತು ತಾಲೂಕುಗಳಲ್ಲಿನ ಶಿಕ್ಷಣ ಇಲಾಖೆ ಕಚೇರಿಗಳಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.