ಮದ್ಯ ಸೇವನೆ ಮಾಡಿ ವಾಹನ ಚಾಲನೆಗೆ ಕಡಿವಾಣ ಹಾಕಿ: ಜಿಲ್ಲಾಧಿಕಾರಿ ಶರತ್ ಬಿ

0
24
ಕಲಬುರಗಿ: ನಗರ ಸೇರಿದಂತೆ ಜಿಲ್ಲೆಯಾದ್ಯಂತ ರಸ್ತೆ ಅಪಘಾತಗಳನ್ನು ತಗ್ಗಿಸಲು ಮದ್ಯ ಸೇವನೆ ಮಾಡಿ ವಾಹನ ಚಾಲನೆಗೆ ಕಡಿವಾಣ ಹಾಕಬೇಕು ಎಂದು ಪೊಲೀಸ್ ಮತ್ತು ಆರ್.ಟಿ.ಓ. ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಶರತ್ ಬಿ. ಅವರು ಸೂಚನೆ ನೀಡಿದರು.
ಬುಧವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ರಸ್ತೆ ಸುರಕ್ಷತೆ ಕುರಿತು ಕರೆಯಲಾದ ಸಭೆಯಲ್ಲಿ ಅವರು ಮಾತನಾಡುತ್ತಾ ಕಲಬುರಗಿ ನಗರದಲ್ಲಿ ಸಂಚಾರಿ ಪೊಲೀಸರು ಮತ್ತು ಗ್ರಾಮೀಣ ಭಾಗದಲ್ಲಿ ಪೊಲೀಸರು ಮತ್ತು ಆರ್.ಟಿ.ಓ. ಅಧಿಕಾರಿಗಳು ಹೆಚ್ಚಿನ ತಪಾಸಣೆ ಮಾಡಬೇಕು ಎಂದರು.
ರಸ್ತೆ ಸುರಕ್ಷತೆ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಜಿಲ್ಲೆಯಾದ್ಯಂತ 3 ತಿಂಗಳಿಗೊಮ್ಮೆ ಭಾಗಿದಾರ ಇಲಾಖೆಗಳಾದ ಸಾರಿಗೆ, ಪೊಲೀಸ್, ಲೊಕೋಪಯೋಗಿ, ಶಿಕ್ಷಣ, ಆರೋಗ್ಯ, ಸ್ಥಳೀಯ ನಗರಾಡಳಿತ, ಕಾನೂನು, ಸ್ಥಳೀಯ ವೈದ್ಯಕೀಯ ಕಾಲೇಜು, 108 ಇಎಂಆರ್ಐ, ಸ್ವಯಂ ಸೇವಾ ಸಂಸ್ಥೆಗಳು, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಹಾಗೂ ಮಾಧ್ಯಮದವರನ್ನು ಒಳಗೊಂಡಂತೆ ಎಲ್ಲರ ಪಾಲ್ಗೊಳ್ಳುವಿಕೆಯಿಂದ ಸಾರ್ವಜನಿಕರಿಗೆ ಹೆಲ್ಮೆಟ್ ಧರಿಸುವಿಕೆ, ಲೇನ್ ಡ್ರೈವಿಂಗ್ ಮತ್ತು ವೇಗದ ಚಾಲನೆ, ಪ್ರಥಮ ಚಿಕಿತ್ಸೆ, ಮದ್ಯ ಸೇವನೆ ಮಾಡದೆ ಚಾಲನೆ, ಸೀಟ್ ಬೆಲ್ಟ್ ಧರಿಸುವಿಕೆ, ದಾರಿಹೋಕರ ಸುರಕ್ಷತೆ ಬಗ್ಗೆ ಅರಿವು ಮೂಡಿಸವ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದು ಡಿ.ಸಿ. ಶರತ್ ಬಿ. ಅವರು ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಕಪ್ಪು ಚುಕ್ಕೆ ಸ್ಥಳ ಗುರುತಿಸಿ: ಕಲಬುರಗಿ ನಗರ ಪೊಲೀಸ್ ಆಯುಕ್ತಾಲಯ ವ್ಯಾಪ್ತಿಯಲ್ಲಿ 52, ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಯಿಂದ ಗ್ರಾಮೀಣ ಭಾಗದಲ್ಲಿ ಗುರುತಿಸಿದ 42 ಹಾಗೂ ಪಂಚಾಯತ್ ರಾಜ್ ಇಂಜಿನೀಯರಿಂಗ್ ವಿಭಾಗದಿಂದ ಗ್ರಾಮೀಣ ಭಾಗದಲ್ಲಿ ಗುರುತಿಸಿರುವ 30 ಸೇರಿದಂತೆ ಒಟ್ಟಾರೆ 124 ಕಪ್ಪು ಚುಕ್ಕೆ ಸ್ಥಳಗಳಿಗೆ ಸಾರಿಗೆ, ಲೋಕೋಪಯೋಗಿ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ಭೇಟಿ ನೀಡಿ ಇಲ್ಲಿ ರಸ್ತೆ ಅಪಘಾಟತಗಳನ್ನು ತಡೆಯಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ವರದಿ ನೀಡಬೇಕು. ವರದಿ ಬಂದ ನಂತರ ಕ್ರಿಯಾ ಯೋಜನೆಯಲ್ಲಿ ಇದನ್ನು ಸೇರಿಸಿ ಮುಂದಿನ ಕ್ರಮ ವಹಿಸಲಾಗುವುದು. ಮುಂದೆ ರಸ್ತೆ ನಿರ್ಮಾಣ ಮಾಡುವ ಎಲ್ಲಾ ಅನುಷ್ಟಾನ ಏಜೆನ್ಸಿಗಳು ಈ ರೀತಿಯ ಕಪ್ಪು ಚುಕ್ಕೆ ಸ್ಥಳ ರಸ್ತೆಯಲ್ಲಿ ಇರದಂತೆ ನಿಗಾ ವಹಿಸಬೇಕು ಎಂದು ಎಲ್ಲಾ ಅನುಷ್ಟಾನ ಏಜೆನ್ಸಿಗಳಿಗೆ ಪತ್ರ ಬರೆಯುವಂತೆ ಡಿ.ಸಿ.ಶರತ್ ಬಿ. ಅವರು ಸೂಚಿಸಿದರು.
ಆರ್.ಟಿ.ಓ. ಕೆ.ದಾಮೋದರ ಮಾತನಾಡಿ 2019-20ನೇ ಸಾಲಿನಲ್ಲಿ ಸಾರಿಗೆ ಇಲಾಖೆಯ ಪ್ರವರ್ತನ ಚಟುವಟಿಕೆಯಡಿ 1290 ಪ್ರಕರಣಗಳಿಂದ 2,75,80,346 ರೂ., ಗ್ರಾಮೀಣ ಭಾಗದಲ್ಲಿ ಪೊಲೀಸ್ ಇಲಾಖೆಯಿಂದ 99556 ಪ್ರಕರಣ ದಾಖಲಿಸಿ 2,47,54,200 ರೂ. ಹಾಗೂ ಕಲಬುರಗಿ ನಗರ ಪೊಲೀಸ್ ಆಯುಕ್ತಾಲಯದಿಂದ 2,05,168 ಪ್ರಕರಣಗಳಿಂದ 2,50,84,400 ರೂ. ರಾಜಸ್ವ ಸಂಗ್ರಹಿಸಲಾಗಿದೆ. 2017-18 ರಲ್ಲಿ ಜಿಲ್ಲೆಯಾದ್ಯಂತ 499 ರಸ್ತೆ ಅಪಘಾತಗಳು ಸಂಭವಿಸಿ 103 ಜನ ಮೃತರಾದರೆ, 482 ಗಾಯಾಳುಗಳಾಗಿದ್ದಾರೆ. 2018-19ರಲ್ಲಿ 551 ರಸ್ತೆ ಅಪಘಾತಗಳು ಸಂಭವಿಸಿ 129 ಜನ ಮೃತರಾದರೆ, 659 ಗಾಯಾಳುಗಳಾಗಿದ್ದಾರೆ ಹಾಗೂ 2019-20ನೇ ವರ್ಷ ಸೇರಿದಂತೆ ಮೇ-2020ರ ವರೆಗೆ 286 ರಸ್ತೆ ಅಪಘಾತಗಳು ಸಂಭವಿಸಿ 68 ಜನ ಮೃತರಾದರೆ, 297 ಗಾಯಾಳುಗಳಾಗಿದ್ದಾರೆ ಎಂದು ಅವರು ಸಭೆಗೆ ವಿವರಿಸಿದರು.
ಸಭೆಯಲ್ಲಿ ಮಹಾನಗರ ಪಾಲಿಕೆಯ ಆಯುಕ್ತ ರಾಹುಲ ಪಾಂಡ್ವೆ, ಹೆಚ್ಚುವರಿ ಎಸ್.ಪಿ. ಪ್ರಸನ್ನ ದೇಸಾಯಿ ಸೇರಿದಂತೆ ಪೊಲೀಸ್, ಸಂಚಾರಿ ಪೊಲೀಸ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here