ಅಲ್ಲಮಪ್ರಭುಗಳ ಜೊತೆ ತಿರುಗಾಡಿದ ಶರಣ ರೇವಣಸಿದ್ಧರು ಮತ್ತು ಅವರ ಪುತ್ರ ರುದ್ರಮುನಿ ಬಸವಕಲ್ಯಾಣಕ್ಕೆ ಬಂದಿದ್ದರು. ಬಸವಣ್ಣನವರ ತತ್ವಗಳನ್ನು ಒಪ್ಪಿಕೊಂಡ ಅವರು ಹಿಂತಿರುಗಿ ನೋಡಲಿಲ್ಲ. ರುದ್ರಮುನಿ ೮ ವರ್ಷದವರಿದ್ದಾಗ ರೇವಣಸಿದ್ಧರು ರುದ್ರಮುನಿಗೆ ಶಿವದೀಕ್ಷೆ ಕೊಟ್ಟರು. ಆನಂತರ ಅವರು ಬೇರಾರಿಗೂ ದೀಕ್ಷೆ ಕೊಡಲಿಲ್ಲ ಎಂಬುದನ್ನು ಗಮನಿಸಬೇಕು. ಆನಂತರ ಅಲ್ಲಮ, ಸಿದ್ಧರಾಮ, ಬಸವಣ್ಣನ ಜೊತೆಗೆ ಒಬ್ಬ ತಂದೆಯ ಸ್ವರೂಪದಲ್ಲಿ ಅವರಿದ್ದರು. ಶೈವ ಧರ್ಮದ ಗುರುಗಳು ಆದಯ್ಯ ಮತ್ತು ಏಕಂತರಾಮಯ್ಯನವರಲ್ಲಿ ಕಾಣುವ ವೀರಭಕ್ತಿ ರೇವಣಸಿದ್ಧರಲ್ಲಿ ಕಾಣುವುದಿಲ್ಲ. ಆದರೆ ಇವರು ಹಿರಿಯ ಶರಣರಾಗಿದ್ದರು.
ಈಗಿನ ತೆಲಂಗಾಣದ ಕೊಲ್ಲಿಪಾಕಿ (ಕೋಲನ್ ಪಾಕಿ), ಮಾಸನೂರ, ಕಲ್ಯಾಣ, ಮಂಗಳವೇಡೆ, ಲಂಕೆ, ಮಂಗಳವೇಡಿ, ಕೊಲ್ಲಾಪುರ, ವಾರಣಾಶಿ, ಹಾವಿನಾಳ, ಮಂಗಳವೇಡೆ, ಸೊಲ್ಲಾಪುರ, ಮಂಗಳವೇಡೆ, ಕೊಲ್ಲಿಪಾಕಿ ಮುಂತಾದ ಕಡೆ ರೇವಣಸಿದ್ಧರು ಓಡಾಡಿದ್ದರು. ಕೊನೆಗೆ ಕೊಲ್ಲಿಪಾಕಿಯಲ್ಲೇ ಲಿಂಗೈಕ್ಯರಾದರು ಎಂಬುದು ಹರಿಹರನ “ರೇವಣಸಿದ್ಧೇಶ್ವರರ” ರಗಳೆಯಿಂದ ತಿಳಿದು ಬರುತ್ತದೆ.
ಜಚನಿ ಅವರ “ಜಗದ್ಗುರು ಆದಿ ರೇಣುಕ” ಕೃತಿಯಲ್ಲಿ ಜಗದ್ಗುರು ಆದಿರೇಣುಕರು ಕೊಲ್ಲಿಪಾಕಿಯ ಸೋಮೇಶ್ವರ ಲಿಂಗದಿಂದ ಉದ್ಭವವಾಗಿ ಏಳುನೂರು ವರ್ಷ ಬದುಕಿ ಅನೇಕ ಲೀಲೆಗಳನ್ನು ಮಾಡಿ ಕೊನೆಗೆ ಕೊಲ್ಲಿಪಾಕಿಯ ಲಿಂಗದಲ್ಲಿಯೇ ಒಂದಾದವರು. ಅತ್ತ ಅಗಸ್ತ್ಯಮುನಿಯನ್ನು ಇತ್ತ ವಿಭಿಷಣ ರಾಜನನ್ನು ಅನುಗ್ರಹಿಸಿದ್ದು ರೇಣುಕರ ಕಾಲವಾವುದೆಂದು ಕೇಳಬೇಕಿಲ್ಲ. ಮೂವರೆ ಸಾವಿರ ವರ್ಷಕ್ಕಿಂತ ಕಡಿಮೆಯಿಲ್ಲ. ಶರಣ ರೇವಣಸಿದ್ಧರು ಮತ್ತು ಆದಿ ರೇಣುಕರು ಇವರ ಸಂಗತಿಗಳು ಬೆರೆತುಕೊಂಡಿವೆ. ಹರಿಹರನಿಂದಲೇ ಕೂಡಿಸಿ ಹೇಳುವುದು ಶುರುವಾಗಿದೆ. ರೇಣುಕ, ರೇವಣರನ್ನು ಪ್ರತ್ಯೇಕವಾಗಿ ನೋಡಿದ ಒಂದೇ ಒಂದು ಕೃತಿ “ಸಿದ್ಧಾಂತ ಶಿಖಾಮಣಿ” ಒಂದೇ ಎಂದು ಹೇಳುತ್ತರೆ.
ಸಂಶೋಧಕ ಡಾ. ಎಂ. ಚಿದಾನಂದಮೂರ್ತಿಯವರು “ರೇವಣಸಿದ್ಧ: ಹಿನ್ನೆಲೆ-ಮುನ್ನೆಲೆ” ಎಂಬ ಇತ್ತೀಚಿಗೆ ಬರೆದ ಕೃತಿಯಲ್ಲಿ ಸಿದ್ಧಾಂತ ಶಿಖಾಮಣಿ ಎಂಬ ಅನಿರ್ಧಿಷ್ಟ (೧೨೦೦-೧೨೫೦) ಕಾಲ. ರೇಣುಕ, ಅಗಸ್ತ್ಯರು ಪೌರಾಣಿಕ ಕಲ್ಪನೆಗಳು ಎಂಬುದು ಸ್ಪಷ್ಟ ಎಂದು ಹೇಳುತ್ತಾರೆ. ಇವುಗಳಿಂದ ರೇಣುಕಾಚಾರ್ಯರು ಪೌರಾಣಿಕ ವ್ಯಕ್ತಿ. ಶರಣ ರೇವಣಸಿದ್ಧರು ಶರಣರು ಎಂಬ ಮಾತನ್ನು ನಾವೆಲ್ಲರು ಗಮನಿಸಬೇಕಿದೆ.
ಇದು ನಮಗೆ ಇನ್ನಷ್ಟು ಸ್ಪಷ್ಟವಾಗಬೇಕಾದರೆ ತೆಲಂಗಾಣದಲ್ಲಿರುವ ಕೊಲ್ಲಿಪಾಕಿಯ ಸೋಮೇಶ್ವರ ದೇವಾಲಯಕ್ಕೆ ಭೇಟಿ ನೀಡಬೇಕು. ಮಹಾದ್ವಾರ ಪ್ರವೇಶಿದರೆ ಕಲ್ಲಿನ ಮಂಟಪ ಕಾಣಿಸುತ್ತದೆ. ಇದನ್ನು ನ್ಯಾಯಲಿಂಗ ಮಂಟಪ ಎಂದು ಕರೆಯುತ್ತಾರೆ. ಒಳಗಡೆ ಶಿವಲಿಂಗ ಹಾಗೂ ನಂದಿಯ ವಿಗ್ರಹಗಳಿವೆ. ದೇವಸ್ಥಾನದ ಪ್ರವೇಶ ದ್ವಾರದ ಎಡ ಬಲಗಳಲ್ಲಿ ಶೈವ, ಜೈನ, ಚಾಲೂಕ್ಯರ ಕಾಲದ ಅನೇಕ ಶಿಲ್ಪ ಮೂರ್ತಿಗಳಿರುವ ಪ್ರಾಚ್ಯವಸ್ತು ಸಂಗ್ರಹಾಲಯ ಇದೆ. ಸೋಮೇಶ್ವರ ದೇವಾಲಯ ಮೂರು ಭಾಗಗಳಲ್ಲಿ ಕಟ್ಟಡ ನಿರ್ಮಾಣವಾಗಿರುವುದನ್ನು ಕಾಣುತ್ತೇವೆ. ಒಳಗಡೆ ಬ್ಯಾಳಿ ಬಸಪ್ಪನ ದೇವಸ್ಥಾನವಿದೆ. ಗರ್ಭಗುಡಿಯ ಬಾಗಿಲ ತೋಳುಗಳಲ್ಲಿ ಗಜಲಕ್ಷ್ಮೀಯ ಚಿಹ್ನೆ ಇರುವುದನ್ನು ಕಾಣಬಹುದು.
ಸೋಮೇಶ್ವರ ಶಿವಲಿಂಗ ವಿಗ್ರಹದ ಹಿಂದೆ ರೇಣುಕಾಚಾರ್ಯರ ಮೂರ್ತಿ ಕಾಣಬಹುದು. ಬಿರುಕು ಬಿಟ್ಟ ಲಿಂಗವನ್ನು ತೋರಿಸಿ ಇಲ್ಲಿಯೇ ರೇಣುಕಾಚಾರ್ಯರು ಉದ್ಭವವಾಗಿದ್ದಾರೆ ಎಂದು ಪೂಜಾರಿಗಳು ಹೇಳುತ್ತಾರೆ. ರೇಣುಕರ ಈ ಮೂರ್ತಿ ೨೦ನೇ ಶತಮಾನದ ಕೊನೆಯಲ್ಲಿ ಸ್ಥಾಪಿಸಲಾಗಿದೆ ಎಂದು ಹೇಳುತ್ತಾರೆ. ಪೂಜಾರಿ ಸೋಮಯ್ಯ ಕೂಡ ೧೯೭೩ರಲ್ಲಿ ರೇಣುಕರ ಈ ಮೂರ್ತಿ ಸ್ಥಾಪಿಸಲಾಗಿದೆ ಎಂದು ಹೇಳುತ್ತಾರೆ. ಸೋಮೇಶ್ವರ ದೇವಾಲಯದ ಮಗ್ಗುಲಲ್ಲೇ ಮಲ್ಲಿಕಾರ್ಜುನ, ಚಂಡೇಶ್ವರಿ ದೇವಾಲಯ, ಮಗ್ಗುಲಲ್ಲಿ ಶರಣ ರೇವಣಸಿದ್ಧನ ಮಗ ಘನಲಿಂಗ ರುದ್ರಮುನಿಯ ದೇವಾಲಯ ಇರುವುದನ್ನು ಗಮನಿಸಿದರೆ ಚಾಲೂಕ್ಯರ ಕಾಲದಲ್ಲಿ (೧೦೬೭) ಈ ದೇವಾಲಯ ಶಿವ ಶಕ್ತಿಯ ದೇವಾಲಯವಾಗಿತ್ತು ಎಂಬುದು ನಮಗೆ ತಿಳಿದು ಬರುತ್ತದೆ.
ಹೀಗಾಗಿ ನಮ್ಮಲ್ಲಿ ಈಗಾಗಗಲೇ ನಿರ್ಮಾಣಗೊಂಡಿರುವ ರೇವಣಸಿದ್ಧರ ಗುಡಿ ಗುಂಡಾರಗಳು ರೇಣುಕಾಚಾರ್ಯರಿಗೆ ಸಂಬಂಧಸಿದವುಗಳಲ್ಲ. ಈ ರೇವಣಸಿದ್ಧ ಶರಣರು ಬರೆದ ಒಂದು ವಚನ ದೊರಕಿದೆ ಎಂದು ಹೇಳುವ ಚಿದಾನಂದಮೂರ್ತಿಯವರು “ಆದವಲ್ಲ ದಶ ದಿಕ್ಕಿನಲ್ಲಿ ದಶನಾದಂಗಳು… ತ್ರಿಪುರಾಂತಕ ಸೋಮಲಿಂಗ ಚೆನ್ನಬಸವಯ್ಯನು” ಎಂಬ ವಚನವನ್ನು ಉಲ್ಲೇಖಿಸಿಸಿದ್ದಾರೆ. ಶರಣರ ರೇವಣಸಿದ್ಧರು ತಮ್ಮ ಪುತ್ರ ರುದ್ರಮುನಿಯ ಜೊತೆಗೆ ಕೊಲ್ಲಿಪಾಕಿಗೆ ಆಗಮಿಸಿ ೧೮ ಮಠಗಳನ್ನು ಕಟ್ಟಿದರು ಎಂಬುದಕ್ಕೆ ಸೋಮೇಶ್ವರ ದೇವಸ್ಥಾನದ ಸುತ್ತಮುತ್ತ ಒಂದೊಂದು ಗಲ್ಲಿಯಲ್ಲಿ ವಿವಿಧ ಸಮುದಾಯದವರಿಗಾಗಿ ಕಟ್ಟಿದ ಮಠಗಳಿರುವುದನ್ನು ನಾವು ಈಗಲೂ ಕಾಣಬಹುದು.
ಬಸವ ಸಮಿತಿಯ ಅನುಭವ ಮಂಟಪ
ಜಯನಗರ, ಕಲಬುರಗಿ