ಕಲಬುರಗಿ: ದಲಿತ ಯುವಕನ ಮದುವೆ ಮೆರವಣಿಗೆಗೆ ಅಡ್ಡಿ ಪಡಿಸಿ ಸವರ್ಣೀಯರು ಕಲ್ಲು ತೂರಿದ ಘಟನೆ ನಿನ್ನೆ ರಾತ್ರಿ ಜೇವರ್ಗಿ ತಾಲೂಕಿನ ನಾಗರಹಳ್ಳಿಯಲ್ಲಿ ನಡೆದಿದ್ದು, ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ದಲಿತಸೇನಾ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಮನವಿ ಸಲ್ಲಿಸಿದ್ದಾರೆ.ನಿನ್ನೆ ಗ್ರಾಮದ ಯುವಕ ಮಲ್ಲಿಕಾರ್ಜುನ ಮೇಲಿಕೇರಿ ಎಂಬ ಅವರ ಮದುವೆ ಮುಗಿಸಿಕೊಂಡು ಮಧುಮಕ್ಕಳನ್ನು ಮೆರವಣಿಗೆ ಮೂಲಕ ಕರೆದುಕೊಂಡು ತೆರಳುತ್ತಿದ್ದರು. ಈ ವೇಳೆ ಗುಂಪು ಕಟ್ಟಿಕೊಂಡು ಬಂದ ಸವರ್ಣೀಯರು ನಿಮಗೆ ಮದುವೆ ಆಗುವುದೇ ಕಷ್ಟ. ಅಂತಹದರಲ್ಲಿ ಮೆರವಣಿಗೆ ಮಾಡುತ್ತಿದ್ದಾರಾ ಎಂದು ನಿಂದಿಸಿ ಕಲ್ಲು ತೋರಾಟ ನಡೆಸಿ ಬಳಿಕ ಬಡಿಗೆಗಳಿಂದ ಹಲ್ಲೆ ಮಾಡಿದ್ದಾರೆ.
ಘಟನೆಯಲ್ಲಿ 8 ಕ್ಕೂ ಹೆಚ್ಚು ಜನ ದಲಿತ ಯುವಕರು ಗಾಯಗೊಂಡಿದ್ದು,ಜೇವರ್ಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಥಳಕ್ಕೆ ಬಂದ ಯಡ್ರಾಮಿ ಪಿಎಸ್ ಐ ಕಾರಿನ ಮೇಲೂ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ದಲಿತರ ಮೇಲೆ ಹಲ್ಲೆ ಮಾಡಿದ ಹಲ್ಲೆ ಕೋರರ ಆಸ್ತಿ-ಪಾಸ್ತಿ ಮುಟ್ಟುಗೋಲು ಹಾಕಿಕೊಳ್ಳುವಂತೆ ಮತ್ತು ದಲಿತರಿಗೆ ಸೂಕ್ತ ರಕ್ಷಣೆ ನೀಡುವಂತೆ ದಲಿತ ಸೇನೆ ಜಿಲ್ಲಾಧ್ಯಕ್ಷ ಡಿ.ಕೆ.ಮದನಕರ ಆಗ್ರಹಿಸಿದ್ದಾರೆ.
ಪ್ರತಿಭಟನೆಯಲ್ಲಿ ಮಂಜುನಾಥ ಭಂಡಾರಿ, ಶಿವಕುಮಾರ್ ಗೇಲಾ, ಶರಣು ಬೇಲೂರ ಸೇರಿದಂತೆ ಮತ್ತಿತರರು ಇದ್ದರು.