ಕಲಬರಗಿ: ಕಲ್ಯಾಣ ಕರ್ನಾಟಕದ 6 ಜಿಲ್ಲೆಗಳಲ್ಲಿ ಪ್ರಸಕ್ತ ಸಮಸ್ಯೆ ತಂದೊಡ್ಡಿರುವ ಕೋವಿಡ್-19 ಸೋಂಕು ನಿಯಂತ್ರಣಕ್ಕೆ ಮೊದಲ ಆದ್ಯತೆ ನೀಡುವುದಾಗಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ನೂತನ ಅಧ್ಯಕ್ಷ ದತ್ತಾತ್ರೇಯ ಪಾಟೀಲ್ ಸಿ. ರೇವೂರ ಅವರು ಹೇಳಿದ್ದಾರೆ.
ನಗರದ ಕೆಕೆಆರ್‍ಡಿಬಿ ಕಚೇರಿಯಲ್ಲಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, ಮಾನ್ಯ ಮುಖ್ಯಮಂತ್ರಿಗಳು ಕೂಡ ಕೋವಿಡ್ ನಿಯಂತ್ರಣ ಆದ್ಯತೆ ನೀಡುವಂತೆ ಸೂಚಿಸಿದ್ದು, ಕೊರೋನಾ ವೈರಸ್ ಹರಡುವುದನ್ನು ತಡೆಗಟ್ಟಲು ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಮೊದಲು ಕಲಬುರಗಿ ಜಿಲ್ಲೆಯನ್ನು ಪ್ರಾಯೋಗಿಕವಾಗಿ ಅಯ್ಕೆ ಮಾಡಿಕೊಳ್ಳಲಾಗುವುದು. ಇಲ್ಲಿ ಯಶಸ್ವಿಯಾದಲ್ಲಿ, ಉಳಿದ ಐದು ಜಿಲ್ಲೆಗಳಲ್ಲಿ ಕೋವಿಡ್ ನಿಯಂತ್ರಣಕ್ಕೆ ಯೋಜನೆ ರೂಪಿಸಲಾಗುವುದು ಎಂದರು.
ಈಗಾಗಲೇ ಗುಲಬರ್ಗಾ ವೈದ್ಯಕೀಯ ವಿಜ್ಞಾನ ಸಂಸ್ಥೆ (ಜಿಮ್ಸ್) ಗೆ ಮಂಡಳಿಯ ಅನುದಾನದಲ್ಲಿ ವೆಂಟಿಲೇಟರ್, ಆಕ್ಸಿಜನ್, ಸಿಟಿ ಸ್ಕ್ಯಾನಿಂಗ್ ಮಶೀನ್ ಮುಂತಾದ ವೈದ್ಯಕೀಯ ಸಾಮಾಗ್ರಿಗಳನ್ನು ಪೂರೈಸಲಾಗಿದೆ. ಇನ್ನು ಹೆಚ್ಚಿನ ಅನುದಾನ ತಂದು ಅಗತ್ಯ ವೈದ್ಯಕೀಯ ಉಪಕರಣಗಳನ್ನು ಪೂರೈಸಲಾಗುವುದು. ಪ್ರಸ್ತಾವನೆ ಸಲ್ಲಿಸಿದಲ್ಲಿ ಲ್ಯಾಬ್ ಮಂಜೂರು ಮಾಡಲಾಗುವುದು ಎಂದು ಭರವಸೆ ನೀಡಿದರು.
ಹಾಗೆಯೇ ಕೋವಿಡ್ ನಿಯಂತ್ರಣ ನಿಟ್ಟಿನಲ್ಲಿ ಟೋಲ್ ಫ್ರೀ ( ಸಹಾಯವಾಣಿ) ತೆರೆದು ಸಾರ್ವಜನಿಕರಿಗೆ ಮಾಹಿತಿ ನೀಡಲಾಗುವುದು. ಒಂದು ತಂಡ ರಚಿಸಿ, ಕೋವಿಡ್ ರೋಗಿಗಳನ್ನು ಅಂಬ್ಯುಲೆನ್ಸ್‍ನಲ್ಲಿ ಆಸ್ಪತ್ರೆಗೆ ಕರೆತರುವುದು, ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸುವುದು ಸೇರಿದಂತೆ ವಿವಿಧ ಸಹಾಯಗಳನ್ನು ಜನರಿಗೆ ಮಂಡಳಿ ವತಿಯಿಂದ ಮಾಡಲಾಗುವುದು ಎಂದು ಹೇಳಿದರು.
ಈ ನಿಟ್ಟಿನಲ್ಲಿ ಇಂದು ಸಂಜೆ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಸಭೆ ಕರೆದು ಚರ್ಚಿಸಲಾಗುವುದು ಎಂದು ಹೇಳಿದರು.
ಕಲ್ಯಾಣ ಕರ್ನಾಟಕದ ಎಲ್ಲಾ ಸಂಸದರು, ಶಾಸಕರು ಸೇರಿದಂತೆ ಎಲ್ಲಾ ಜನಪ್ರತಿನಿಧಿಗಳ ಸಹಕಾರ ಪಡೆದು ರಾಜ್ಯ ಸರ್ಕಾರದಿಂದ ಹೆಚ್ಚಿನ ಅನುದಾನ ತಂದು ಈ ಭಾಗವನ್ನು ಮತ್ತಷ್ಟು ಅಭಿವೃದ್ಧಿಪಡಿಸಲಾಗುವುದು ಎಂದು ಅವರು ಹೇಳಿದರು.
ಇದೇ ಸಂದರ್ಭದಲ್ಲಿ ಕಲಬುರಗಿ ಲೋಕಸಭಾ ಸದಸ್ಯ ಡಾ.ಉಮೇಶ್ ಜಾಧವ್ ಅವರು ಮಾತನಾಡಿ, ಇದೇ 5 ತಾರೀಖಿನಂದು ಹೈದರಾಬಾದ್ ಕರ್ನಾಟಕ ಶಿಕ್ಷಣ ಸೊಸೈಟಿಯ ಕೋವಿಡ್-19 ಲ್ಯಾಬ್ ಶುರುವಾಗಲಿದೆ. ಅದೇ ರೀತಿ ಇಎಎಸ್‍ಐಸಿಯಲ್ಲೂ ಲ್ಯಾಬ್ ಸ್ಥಾಪನೆ ಸಂಬಂಧ ಶೇಕಡ 95ರಷ್ಟು ಕೆಲಸ ಮುಗಿದಿದೆ. ಸದ್ಯದಲ್ಲೇ ಆರಂಭವಾಗಲಿದೆ. ಕೆಬಿಎನ್ ಆಸ್ಪತ್ರೆ ಸೇರಿ ಒಟ್ಟು 5 ಪ್ರಯೋಗಾಲಗಳು ಕಾರ್ಯನಿರ್ವಸಲಿವೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ ನಿಯಮಿತದ ಅಧ್ಯಕ್ಷ ಬಾಬುರಾವ್ ಚಿಂಚಿನಸೂರ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಸುವರ್ಣಾ ಹಣಂತರಾಯ ಮಾಲಾಜಿ, ಶಾಸಕರಾದ ಸುಭಾಷ್ ಗುತ್ತೇದಾರ್, ವಿಧಾನ ಪರಿಷತ್ ಸದಸ್ಯರಾದ ಬಿ.ಜಿ. ಪಾಟೀಲ್, ಹೆಚ್‍ಕೆಸಿಸಿಐ ಅಧ್ಯಕ್ಷ ಅಮರ್ ನಾಥ್ ಪಾಟೀಲ್, ಜಿಲ್ಲಾ ಪಂಚಾಯತ್ ಸದಸ್ಯ ಶಿವರಾಜ್ ಪಾಟೀಲ್ ರದ್ದೇವಾಡಗಿ, ಮಂಡಳಿ ಕಾರ್ಯದರ್ಶಿಗಳೂ ಆದ ಪ್ರಾದೇಶಿಕ ಆಯುಕ್ತ ಡಾ. ಎನ್. ವಿ. ಪ್ರಸಾದ್ , ಕಲಬುರಗಿ ನಗರ ಪೊಲೀಸ್ ಆಯುಕ್ತ ಎನ್. ಸತೀಶ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಧಿಕಾರಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಮಂಡಳಿಯ ಜಂಟಿ ನಿರ್ದೇಶಕರಾದ ಪ್ರವೀಣ್ ಪ್ರಿಯಾ ಡೇವಿಡ್ ಮುಂತಾದವರು ಇದ್ದರು.