ಕಲಬುರಗಿ: ಅಂಗವೈಕಲ್ಯ ಇರುವ ವ್ಯಕ್ತಿಗಳ ಹಕ್ಕುಗಳ (ಆರ್.ಪಿ.ಡಬ್ಲ್ಯು.ಡಿ.) ಕಾಯ್ದೆ , 2016 ರ ಸೆಕ್ಷನ್ 30 ಅಂಗವೈಕಲ್ಯ ಇರುವ ವ್ಯಕ್ತಿಗಳು ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದನ್ನು ಖಾತ್ರಿಪಡಿಸಲು ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ವಿಧಿಸುತ್ತದೆ ಮತ್ತು ಅವರಿಗೆ ಕ್ರೀಡಾ ಚಟುವಟಿಕೆಗಾಗಿ ಮೂಲಸೌಕರ್ಯಗಳನ್ನು ಒದಗಿಸುವ ಪ್ರಸ್ತಾವನೆಯನ್ನೂ ಅದು ಒಳಗೊಂಡಿದೆ.
1984ರಿಂದ ಅಂಗವಿಕಲರ ಪ್ಯಾರಾಲಿಂಪಿಕ ಕ್ರೀಡಾಕೂಟ ಆರಂಭವಾಗಿದೆ. ವಿಶೇಷಚೇತನರು ಆಗ ಪೆವಿಲಿಯನ್‌ನಲ್ಲಿ ಕುಳಿತು ಸ್ಪರ್ಧೆಯನ್ನು ವೀಕ್ಷಿಸುತ್ತಿದ್ದರೆ ವಿನಃ ಮೈದಾನಕ್ಕೆ ಇಳಿಯುವ ಅವಕಾಶ ನಮಗೆ ಇರಲಿಲ್ಲ. ಕಳೆದ 35 ವರ್ಷಗಳಲ್ಲಿ ಅಂಗವಿಕಲರ ಕ್ರೀಡೆ ದೊಡ್ಡ ಪರಂಪರೆಯಾಗಿ ಬೆಳೆದಿದೆ. ಅವರ ಕ್ರೀಡಾ ಚಟುವಟಿಕೆಗಳು ಹೆಚ್ಚಾಗಿದ್ದು, ಸಂಭ್ರಮ ಎದ್ದು ಕಾಣುತ್ತಿದೆ. ನಾವು ಯಾರಿಗೂ ಕಡಿಮೆ ಇಲ್ಲ ಎನ್ನುವ ಉಮೇದು ತುಂಬಿ ತುಳುಕುತ್ತಿದೆ.
ಕಲಬುರಗಿ, ಬಿದರ, ಯಾದಗಿರ, ರಾಯಚೂರ ಮತ್ತು ಕೊಪ್ಪಳ ಭಾಗದ ದಿವ್ಯಾಂಗರು ಕ್ರೀಡೆಯ ಕುರಿತು ಆಸಕ್ತಿ ಬೆಳೆಸಿಕೊಳ್ಳುವ ಅಗತ್ಯವಿದೆ. ನಮ್ಮ ಕಲ್ಯಾಣ ಕರ್ನಾಟಕ ಭಾಗದ ವಿಶೇಷಚೇತನರಲ್ಲಿ ಕ್ರೀಡೆಯ ಆಸಕ್ತಿ ಮತ್ತು ಮನೋಭಾವ ಕಡಿಮೆಯಾಗಿದೆ. ದೈಹಿಕ ಮತ್ತು ಆತ್ಮ ಬಲ ಬೆಳೆಸಿಕೊಳ್ಳಲು ಮುಂದಾಗುತ್ತಿಲ್ಲ ಮತ್ತು ದಿವ್ಯಾಂಗರಲ್ಲಿರುವ ಸೂಕ್ತ ಪ್ರತಿಭೆ ಮತ್ತು ಸಾಮರ್ಥ್ಯಗಳನ್ನು ಗುರುತಿಸಿ, ಅರಳಿಸುವುದು ಬಹಳ ಮುಖ್ಯವಾಗಿದೆ ಎಂದು ಡಿಸೆಬಲ್ಡ ಹೆಲ್ಪಲೈನ ಫೌಂಡೆಶನನ ರಾಜ್ಯ ಸಂಯೋಜಕರಾದಂತ ಬಸವರಾಜ ಹೆಳವರ ಯಾಳಗಿ ಅಭಿಪ್ರಾಯ ವ್ಯಕ್ತಪಡಿಸಿದರು.
ಅಂಗವಿಕಲರ ಕ್ರೀಡೆಗೆ ಉತ್ತೇಜನ ನೀಡುವ ಸಲುವಾಗಿಯೇ ಎಂ. ಮಹದೇವ್ ಮತ್ತು ಸಂಗಡಿಗರು 1992ರಲ್ಲಿ ಬೆಂಗಳೂರಿನಲ್ಲಿ ಭಾರತೀಯ ಅಂಗವಿಕಲರ ಕ್ರೀಡಾ ಒಕ್ಕೂಟವನ್ನು ಹುಟ್ಟು ಹಾಕಿದ್ದಾರೆ. ದಶಕಗಳ ಹಿಂದೆ ಈ ಕ್ರೀಡೆಗೆ ಹಾಗೆ ಬಿದ್ದಿರುವ ಗಟ್ಟಿಯಾದ ಬುನಾದಿಯೇ ಇದೀಗ ಫಲ ನೀಡುತ್ತಿದೆ. ಆದ್ದರಿಂದಲೇ ರಾಜ್ಯ ಅಂಗವಿಕಲರ ಕ್ರೀಡಾ ಕ್ಷೇತ್ರದಲ್ಲಿ ಸಾಧನೆಯ ಸುಗ್ಗಿ ಶುರುವಾಗಿದೆ. ಇತ್ತೀಚೆಗೆ ರಾಜ್ಯದ ಎಲ್ಲಾ ವಿಕಲಚೇತನ ಕ್ರೀಡಾಪಟುಗಳು ಕೂಡಿಕೊಂಡು ಕರ್ನಾಟಕ ರಾಜ್ಯ ವಿಕಲಚೇತನ ಕ್ರೀಡಾಪಟುಗಳ ಒಕ್ಕೂಟ (ರಿ) ಕೂಡ ಮಾಡಿಕೊಂಡಿದ್ದಾರೆ.
ನಮ್ಮ ಹೆಮ್ಮೆಯ ಅಥ್ಲೀಟ್ ಎಚ್.ಎನ್. ಗಿರೀಶ್ ಅಂಗವಿಕಲರ ಪ್ಯಾರಾ ಒಲಿಂಪಿಕ್ ಕೂಟದಲ್ಲಿ ಬೆಳ್ಳಿ ಪದಕವನ್ನು ಗೆದ್ದ ಮೇಲಂತೂ ಸಂಭ್ರಮ ಇಮ್ಮಡಿಗೊಂಡಿದೆ. ಅಂತರಾಷ್ಟ್ರೀಯ ಕ್ರೀಡಾಪಟುಗಳಾದಂತ ಮಹೇಶ ಗೌಡ, ಪೈಡಿ ರಾಮು, ಪ್ರಭುಸ್ವಾಮಿ, ಹುಬ್ಬಳ್ಳಿಯ ಮಹಿಳಾ ಪ್ಯಾರಾ ಶೂಟರ್ ಜ್ಯೋತಿ ಸನ್ನಕ್ಕಿ ಪ್ರಶಸ್ತಿಗೆ ಭಾಜನರಾಗುವ ಮೂಲಕ ಅಂಗವಿಕಲ ಕ್ರೀಡಾಕ್ಷೇತ್ರಕ್ಕೆ ಗೌರವ ತಂದ ನೆನಪು ಇನ್ನೂ ಹಸಿರಾಗಿದೆ.
ಬೆಳಗಾವಿಯ ಅಂತರಾಷ್ಟ್ರೀಯ ವ್ಹೀಲ ಚೆರ ಕ್ರಿಡಾಪಟು ಸುನಿಲ್ ಪಾಟೀಲ , ದೆವೆಂದ್ರ ಬಿ.ಕೆ, ಮಂಜು ಮರಾಠೆ, ಮಹೇಶ ಅಗಳಿ, ಕೇಶವ ಟಿ, ಮಹಾಂತೇಶ ಅವರಂತಹ ಅಂಗವಿಕಲ ಸಾಧಕರು ನಮ್ಮ ಹೆಮ್ಮೆಯ ಪ್ರತೀಕವಾಗಿದ್ದಾರೆ. ಅಥ್ಲೆಟಿಕ್ಸ್‌ನಲ್ಲಿ ಮಾತ್ರವಲ್ಲದೆ ಈಜು, ಟೆನಿಸ್, ಬ್ಯಾಡ್ಮಿಂಟನ್ ಮತ್ತು ಕ್ರಿಕೆಟ್‌ನಲ್ಲೂ ಅಂಗವಿಕಲರ ಸಾಧನೆ ಬೆರಗುಗೊಳಿಸುವಂತಿದೆ.
ರೋಟರಿ ಮತ್ತು ಲಯನ್ಸ್‌ನಂತಹ ಸಂಸ್ಥೆಗಳು ಅಂಗವಿಕಲರ ಕ್ರೀಡೆಗೆ ಉತ್ತೇಜನ ನೀಡುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಆದಾಗ್ಯೂ ಸಂಭ್ರಮದ ಅಲೆ ಜೋರಾಗಿಯೇ ಕಾಣುತ್ತಿರುವುದು ಅಂಗವಿಕಲರ ಕ್ರೀಡಾ ಮನೋಭಾವ ಮತ್ತು ಸ್ಫೂರ್ತಿಗೆ ಹಿಡಿದ ಕನ್ನಡಿಯಾಗಿದೆ.
ಇತ್ತೀಚಿಗೆ ಅಂಗವೈಕಲ್ಯದ ಆಧಾರದ ಮೇಲೆ ವ್ಯವಸ್ಥಿತ ಕ್ರೀಡಾಕೂಟಗಳು ನಡೆಯಲು ಆರಂಭಿಸಿದ್ದು, ಅಂಗವಿಕಲರ ಕ್ರೀಡೆ ಒಂದು ಆಂದೋಲನವಾಗಿ ಬೆಳೆಯುವ ಲಕ್ಷಣ ಗೋಚರಿಸುತ್ತಿದೆ.