ಕೆಕೆಆರ್‍ಡಿಬಿಯ ಕೋವಿಡ್ ಸುರಕ್ಷಾಚಕ್ರ ಸಹಾಯವಾಣಿ ಆರಂಭ

0
35
ಕಲಬುರಗಿ: ಜಿಲ್ಲೆಯಲ್ಲಿ ಕೋವಿಡ್-19 ಸೋಂಕು ಹರಡುವುದನ್ನು ತಡೆಗಟ್ಟುವ ಹಾಗೂ ಸಾರ್ವಜನಿಕರಿಗೆ ಸಹಾಯ ಒದಗಿಸುವ ನಿಟ್ಟಿನಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕಲಬುರಗಿ ಮಹಾನಗರ ಪಾಲಿಕೆ ಸಹಯೋಗದಲ್ಲಿ ಕೋವಿಡ್ -19 ಸುರಕ್ಷಾ ಚಕ್ರ ಎಂಬ ಸಹಾಯವಾಣಿ ಕೇಂದ್ರ ತೆರೆದಿದೆ.
ನಗರದಲ್ಲಿರುವ ಕೆಕೆಆರ್ಡಿಬಿ ಕಚೇರಿಯಲ್ಲಿ ಇಂದು ಮಂಡಳಿಯ ಅಧ್ಯಕ್ಷರಾದ ದತ್ತಾತ್ರೇಯ ಪಾಟೀಲ್ ಸಿ. ರೇವೂರ್ ಅವರು ಸುರಕ್ಷಾ ಚಕ್ರ ಸಹಾಯವಾಣಿಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕೋವಿಡ್ ಸೋಂಕಿತ ರೋಗಿಗಳಿಗೆ ಅಂಬ್ಯುಲೆನ್ಸ್, ಆಸ್ಪತ್ರೆಗೆ ದಾಖಲಿಸುವುದು, ಆಸ್ಪತ್ರೆಗಳಲ್ಲಿನ ಬೆಡ್ಗಳ ಬಗ್ಗೆ ಮಾಹಿತಿ, ಪ್ರಯೋಗಾಲಯದಲ್ಲಿ ಪರೀಕ್ಷೆ ಸೇರಿದಂತೆ ಕೋವಿಡ್ ಸಂಬಂಧಿಸಿದ ಏನೇ ಸಮಸ್ಯೆಗಳಿದ್ದರೂ ಕಲಬುರಗಿ ಜಿಲ್ಲೆಯ ಜನರು ಸಹಾಯವಾಣಿಗೆ ಕರೆ ಮಾಡಿ ಪರಿಹರಿಸಿಕೊಳ್ಳಬಹುದು ಎಂದು ಅವರು ತಿಳಿಸಿದರು.
ಸಹಾಯವಾಣಿ ಸಂಖ್ಯೆ (+91) 88844-54424, 88844-54425, 88844-54426, 88844-54427 ಗೆ ಕರೆ ಮಾಡಿ ಅರ್ಧ ಗಂಟೆಯಲ್ಲಿ ಪರಿಹಾರ ಕಂಡುಕೊಳ್ಳಬಹುದೆಂದು ಅವರು ಹೇಳಿದರು. ಯಾವುದೇ ದೂರು ಬಂದಲ್ಲಿ ನಾನೂ ಸೇರಿದಂತೆ ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತರು, ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತರು ಶೀಘ್ರ ಸಮಸ್ಯೆ ಇತ್ಯರ್ಥಗೊಳಿಸಲಿದ್ದೇವೆ ಎಂದು ಅವರು ಹೇಳಿದರು.
ಪರಿಣಾಮಕಾರಿಯಾಗಿ ಸಹಾಯವಾಣಿ ಕಾರ್ಯನಿರ್ವಹಿಸಲು ತಾವು ಕೂಡ ಸಲಹೆ ನೀಡಬಹುದು ಎಂದು ಮಾಧ್ಯಮ ಪ್ರತಿನಿಧಿಗಳಿಗೆ ಅವರು ಮನವಿ ಮಾಡಿದ ಅವರು, ನಿಮ್ಮ ಸಲಹೆಗಳನ್ನು ಅಳವಡಿಸಿಕೊಳ್ಳಲಾಗುವುದು ಎಂದರು.
ಅತ್ಯಾಧುನಿಕ ಜೀವ ಸಂರಕ್ಷಕ ಅಂಬ್ಯುಲೆನ್ಸ್ ನೀಡುವಂತೆ ಮಂಡಳಿ ವ್ಯಾಪ್ತಿಯ ಆರು ಜಿಲ್ಲೆಗಳ ಆಸ್ಪತ್ರೆಗಳಿಂದ ಬೇಡಿಕೆ ಬಂದಿದ್ದು, 15-20 ದಿನಗಳಲ್ಲಿ ಇವುಗಳ ಪೂರೈಕೆಗೆ ಕ್ರಮವಹಿಸಲಾಗುವುದು ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.
ಈ ಸಂದರ್ಭದಲ್ಲಿ ಕಲಬುರಗಿ ಲೋಕಸಭಾ ಸದಸ್ಯರಾದ ಡಾ. ಉಮೇಶ್ ಜಾಧವ್ ಅವರು ಮಾತನಾಡಿ, ಸಾರ್ವಜನಿಕರು ಕೋವಿಡ್ -19 ಸುರಕ್ಷಾ ಚಕ್ರ ಸಹಾಯವಾಣಿಯ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು. ಪತ್ರಕರ್ತರು ಸೇರಿದಂತೆ ಎಲ್ಲರ ಸಲಹೆ ಪಡೆದು 8 ದಿನಗಳಲ್ಲಿ ಸಹಾಯವಾಣಿ ಇನ್ನಷ್ಟು ಉತ್ತಮವಾಗಿ ಕಾರ್ಯನಿರ್ವಹಿಸುವಂತೆÀ ಮಾಡಲಾಗುವುದು ಎಂದು ಅವರು ತಿಳಿಸಿದರು. ಸಹಾಯವಾಣಿ ಮೂಲಕ ಬರುವ ಮಾಹಿತಿ/ದೂರುಗಳನ್ನು ಆಧರಿಸಿ ಕೋವಿಡ್ ರೋಗಿಗಳಿಗೆ ಐಸಿಯು, ವೆಂಟಿಲೇಟರ್ ಮುಂತಾದವುಗಳನ್ನು ಒದಗಿಸಲು ಕ್ರಮಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ಕೋವಿಡ್ ರೋಗಿಗಳಿಗೆ ಹುಬ್ಬಳ್ಳಿ ಹಾಗೂ ಬೆಂಗಳೂರಿನಲ್ಲಿ ಪ್ಲಾಸ್ಮಾ ಥೆರಪಿ ಚಿಕಿತ್ಸೆ ನೀಡಲಾಗಿದೆ. ಅದೇ ರೀತಿ ಕಲಬುರಗಿಯಲ್ಲೂ ಈ ಚಿಕಿತ್ಸೆ ಕೊಡಿಸಲಾಗುವುದು ಎಂದು ಮೂಲತ: ವೈದ್ಯರು ಆಗಿರುವ ಸಂಸದ ಡಾ. ಉಮೇಶ್ ಜಾಧವ್ ಅವರು ಭರವಸೆ ನೀಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here