ಕಲಬುರಗಿ: ಕೊರೋನಾ ವೈರಸ್ (ಕೋವಿಡ್-19) ಹರಡುವಿಕೆಯನ್ನು ತಡೆಗಟ್ಟಲು ಹಾಗೂ ದೇವಾಲಯಕ್ಕೆ ಆಗಮಿಸುವ ಭಕ್ತಾದಿಗಳ ಮತ್ತು ದೇವಾಲಯದ ಸಿಬ್ಬಂದಿಗಳ ಸುರಕ್ಷತೆಯ ದೃಷ್ಟಿಯಿಂದ ಅಫಜಲಪುರ ತಾಲೂಕಿನ ಘತ್ತರಗಿಯ ಭಾಗ್ಯವಂತಿ ದೇವಸ್ಥಾನದಲ್ಲಿ 2020ರ ಆಗಸ್ಟ್ 19 ರಂದು ಸಾರ್ವಜನಿಕ ದರ್ಶನವನ್ನು ನಿಷೇಧಿಸಿ ಜಿಲ್ಲಾ ವಿಪತ್ತು ನಿರ್ವಹಣಾ ಸಮಿತಿ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿ ಶರತ್ ಬಿ. ಅವರು ಆದೇಶ ಹೊರಡಿಸಿದ್ದಾರೆ.
2020ರ ಆಗಸ್ಟ್ 19 ರಂದು ಅಮಾವಾಸ್ಯೆ ಇರುವ ಪ್ರಯುಕ್ತ ಈ ದೇವಾಲಯಕ್ಕೆ ನೆರೆ ರಾಜ್ಯಗಳಾದ ಮಹಾರಾಷ್ಟ್ರ, ಹಾಗೂ ತೆಲಂಗಾಣದಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸುವರು. ಈ ದೇವಾಲಯಗಳಲ್ಲಿ ಭಕ್ತಾದಿಗಳಿಗೆ ದೇವರ ದರ್ಶನಕ್ಕೆ ಅವಕಾಶ ನೀಡಿದ್ದಲ್ಲಿ ಭಕ್ತಾದಿಗಳಿಂದ ಸಾಮಾಜಿಕ ಅಂತರ ಪಾಲನೆ ಮಾಡುವುದು ಕಷ್ಟಕರವಾಗಿದೆ. ವಿಪತ್ತು ನಿರ್ವಹಣಾ ಕಾಯ್ದೆ 2005 ಹಾಗೂ ದಂಡ ಪ್ರಕ್ರಿಯ ಸಂಹಿತೆ 1973 ರ ಕಲಂ 144 ರನ್ವಯ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.