ವಾಡಿ: ಆನ್‌ಲೈನ್ ತರಗತಿಗೆ ಹಾಜರಾಗಲು ಪೋಷಕರು ಮೋಬಾಯಿಲ್ ಫೋನ್ ಕೊಡಿಸಲಿಲ್ಲ ಎಂಬ ಕಾರಣಕ್ಕೆ ಚಾಮರಾಜನಗರ ಜಿಲ್ಲೆಯ ಸಾಗಡೆ ಗ್ರಾಮದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಘಟನೆಗೆ ಆಲ್ ಇಂಡಿಯಾ ಡೆಮಾಕ್ರೇಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ (ಎಐಡಿಎಸ್‌ಒ) ತೀವ್ರ ಸಂತಾಪ ಸೂಚಿಸಿದೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಎಐಡಿಎಸ್‌ಒ ನಗರ ಸಮಿತಿ ಅಧ್ಯಕ್ಷ ಗೌತಮ ಪರತೂರಕರ ಹಾಗೂ ಕಾರ್ಯದರ್ಶಿ ವೆಂಕಟೇಶ ದೇವದುರ್ಗ, ಕೊರೊನಾ ಲಾಕ್‌ಡೌನ್ ಸಮಸ್ಯೆಯು ಅನೇಕ ಭೀಕರ ಸಂಕಷ್ಟಗಳನ್ನು ತಂದಿಟ್ಟಿದೆ. ವಿದ್ಯಾರ್ಥಿಗಳು, ಯುವಜನರು, ರೈತರು, ಕಾರ್ಮಿಕರು, ಮಹಿಳೆಯರು ನಾನಾ ರೀತಿಯ ತೊಂದರೆಗಳಿಗೆ ಒಳಗಾಗಿದ್ದಾರೆ.
ಇನ್ನೂ ಶಾಲೆಗಳಿಗೆ ಬೀಗ ಬಿದ್ದಿದ್ದು, ಆನ್‌ಲೈನ್ ತರಗತಿ ಎಂಬುದು ವಿದ್ಯಾರ್ಥಿಗಳ ಪಾಲಿಗೆ ಉರುಳಾಗಿ ಪರಿಣಮಿಸಿದೆ. ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಬಡ ಪೋಷಕರು ಮಕ್ಕಳಿಗೆ ಮೋಬಾಯಿಲ್ ಕೊಡಿಸಿ ಇಂಟರ್ನೆಟ್ ಸೌಲಭ್ಯ ಒದಗಿಸಿಕೊಡಲು ಸಾಧ್ಯವಾಗದೆ ಕೈಚೆಲ್ಲಿ ಕುಳಿತಿದ್ದಾರೆ. ಇದು ವಿದ್ಯಾರ್ಥಿಗಳ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಮಕ್ಕಳು ಮಾನಸಿಕವಾಗಿ ಒತ್ತಡಕ್ಕೊಳಗಾಗಿರುವುದು ಚಾಮರಾಜನಗರ ಜಿಲ್ಲೆಯ ವಿದ್ಯಾರ್ಥಿನಿ ಹರ್ಷಿತಾ ಆತ್ಮಹತ್ಯೆ ಪ್ರಕರಣವೇ ಸಾಕ್ಷಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಸರಕಾರಿ ಪ್ರಾಯೋಜಿತ ಚಂದನ ವಾಹಿನಿಯ ಪಾಠವನ್ನು ಕೇಳಲು ತಮ್ಮ ಮಕ್ಕಳಿಗೆ ಟಿ.ವಿ ಕೊಡಿಸಲು ಅನೇಕ ತಾಯಂದಿರು ಒಡವೆಗಳನ್ನು ಮಾರಿದ್ದಾರೆ. ಆನ್‌ಲೈನ್ ಪಾಠಗಳು ಈ ಮಕ್ಕಳಿಗೆ ತಲುಪದೇ ಶೈಕ್ಷಣಿಕ ಹಿನ್ನೆಡೆಯ ಆತಂಕ ಎದುರಿಸುತ್ತಿದ್ದಾರೆ. ಆಳುವ ಸರಕಾರಗಳ ಇಂಥಹ ನೀತಿಗಳಿಂದಾಗಿ ಹರಪ್ಪನಹಳ್ಳಿಯ ಗಾಯತ್ರಿ ಎಂಬ ಪ್ರತಿಭಾನ್ವಿತೆ ಪರೀಕ್ಷೆಯ ಶುಲ್ಕ ಪಾವತಿಸಲಾಗದೆ ಆತ್ಮಹತ್ಯೆಗೆ ಶರಣಾದಳು.
ಈಗ ಆನ್‌ಲೈನ್ ಮಹಾಮಾರಿಗೆ ಹರ್ಷಿಕಾ ಬಲಿಯಾಗಿದ್ದಾಳೆ. ಇನ್ನೂ ಮುಂದಿನ ದಿನಗಳು ಎಷ್ಟು ಕರಾಳತೆಯಿಂದ ಕೂಡಿವೆಯೋ ಗೊತ್ತಿಲ್ಲ. ಕಾರಣ ಸುಲಿಗೆಕೋರ ಆನ್‌ಲೈನ್ ತರಗತಿಗಳನ್ನು ಕೂಡಲೇ ನಿಲ್ಲಿಸಬೇಕು. ಕೊರೊನಾ ತೀವ್ರತೆ ಕಡಿಮೆಯಾಗುವವರೆಗೂ ಶೈಕ್ಷಣಿಕ ಚಟುವಟಿಕೆಗಳನ್ನು ಪುನಾರಂಭಿಸಬಾರದು. ಮಗಳನ್ನು ಕಳೆದುಕೊಂಡ ಪೋಷಕರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.