ಸ್ಥಾವರ ಮೀರಿ ಜಂಗಮದ ನೆಲೆಗೆ ಹೋದ ಶರಣರು: ಬೇಲಿಮಠ ಶ್ರೀ

0
232

ಕಲಬುರಗಿ: ಸ್ಥಾವರಪೂಜೆಯಿಂದ ವಿಮುಖರಾಗಿ ಇಷ್ಟಲಿಂಗಧಾರಣೆ ಮಾಡಿ, ಅಷ್ಟಾವರಣ, ಷಟಸ್ಥಲ, ಪಂಚಾಚಾರ, ಕಾಯಕ-ದಾಸೋಹ ತತ್ವ ನೀಡಿದ ಶರಣರು ಕಲ್ಯಾಣ ರಾಜ್ಯ ಸ್ಥಾಪಿಸಿದರು. ಅವರಿವರಂತೆ ಮಾತಿನ ಮಾಲೆ ಕಟ್ಟದೆ ಸ್ಥಾವರ ಮೀರಿ ಜಂಗಮದೆಡೆಗೆ ಸಾಗಿದರು. ಶರಣರು ನಡೆದು ನುಡಿದ ಹಾದಿ ಸಾಮಾನ್ಯವಾದುದಲ್ಲ ಎಂದು ಬೆಂಗಳೂರು ಬೇಲಿಮಠದ ಶಿವರುದ್ರ ಸ್ವಾಮೀಜಿ ನುಡಿದರು.

ಬಸವ ಸಮಿತಿ ಬೆಂಗಳೂರು, ಕಲಬುರಗಿ ಹಾಗೂ ಧಾರವಾಡ ಇವುಗಳ ಸಂಯುಕ್ತಾಶ್ರಯದಲ್ಲಿ ಶ್ರಾವಣ ಮಾಸದ ಅಂಗವಾಗಿ ಆಯೋಜಿಸಿದ್ದ “ಶರಣ ಚರಿತೆ” ವಿಶೇಷ ಆನ್‌ಲೈನ್ ಉಪನ್ಯಾಸ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಆಶಯ ಭಾಷಣ ಮಾಡಿದ ಅವರು, ೧೨ನೇ ಶತಮಾನದಲ್ಲಿ ಸಮಾನ ಮನಸ್ಕರೆಲ್ಲರು ಒಂದೆಡೆ ಸಮಾವೇಶಗೊಂಡ ಆ ವ್ಯವಸ್ಥೆ ಎಲ್ಲೆಡೆ ಆಯಸ್ಕಾಂತದಂತೆ ಆಕರ್ಷಿಸಿತು. ನಾಡಿನ ವಿವಿಧ ಮೂಲೆಮೂಲೆಗಳಿಂದ ಬಸವಲ್ಯಾಣಕ್ಕೆ ಆಗಮಿಸಿ ಸ್ವ ಕಾಯಕ ಮಾಡುತ್ತ ನೆಲೆಸಿದರು. ತತ್ಪರಿಣಾಮ ಕಲ್ಯಾಣ ಶರಣರ ಬೀಡಾಯಿತು ಎಂದು ಅವರು ತಿಳಿಸಿದರು.

Contact Your\'s Advertisement; 9902492681

ಹೃದಯದ ತಳಮಳ ಹೊಂದಿದ್ದ, ನಡೆ-ನುಡಿ ಒಂದಾಗಿದ್ದ ಶರಣರ ಬದುಕು ಹಾಗೂ ಬೋಧನೆ ಇಂದಿಗೂ ಪ್ರಸ್ತುತವಾಗಿದೆ. ಕೇವಲ ೩೬ ವರ್ಷಗಳಲ್ಲಿ ಅವರು ತೋರಿದ ಸಾಧನೆ ನಿಜಕ್ಕೂ ಅಸೀಮ, ಅನುಪಮ, ಅನನ್ಯವಾದುದಾಗಿದೆ. ಬಸವಣ್ಣನನವರ ನೇತೃತ್ವದ ಶರಣರ ತಂಡ ಅಗಣಿತ. ಜನಪರ ಮತ್ತು ಜೀವಪರವಾದ ಹತ್ತು ಹಲವು ಕಾರ್ಯ ಯೋಜನೆಗಳನ್ನು ರೂಪಿಸಿದ ಶರಣರು ಅದನ್ನು ಕಾರ್ಯಗತಗೊಳಿಸುವ ಮೂಲಕ ಇಂದಿಗೂ ಜನಮಾನಸದಲ್ಲಿ ಉಳಿದಿದ್ದಾರೆ ಎಂದು ವಿವರಿಸಿದರು.

ಶರಣರು ಕುಂತು, ನಿಂತು ಹೋದ ಸ್ಥಳಗಳು ನಮ್ಮ ಚರಿತ್ರೆಯನ್ನು ಕಟ್ಟಿಕೊಡುತ್ತವೆ. ಜಾನಪದ, ಮೌಖಿಕ ಮಾಹಿತಿ, ಕಾವ್ಯ, ಶಾಸನ, ವಿದ್ವಾಂಸರ ಅಭಿಪ್ರಾಯಗಳನ್ನು ಬಳಸಿಕೊಂಡು ಸ್ಮಾರಕಗಳ ಮೂಲಕವೇ ಶರಣರ ’ಮೌಖಿಕ ಚರಿತ್ರೆ’ ಕಟ್ಟಿಕೊಟ್ಟ ಡಾ. ವೀರಣ್ಣ ದಂಡೆ ಹಾಗೂ ಡಾ. ಜಯಶ್ರೀ ದಂಡೆಯವರು ಅಸೀಮ ಸಾಧನೆಯ ಮಹಾ ಪ್ರವಾಹವನ್ನು ಬಿಂಧುವಿನಲ್ಲಿಡಲು ಪ್ರಯತ್ನಿಸಿರುವುದು ತುಂಬಾ ಸ್ತುತ್ಯರ್ಹವಾಗಿದೆ. ಈ ಮೂಲಕ ಅವರು ಸಾರ್ಥಕವಾದ ಮಹತ್ವಪೂರ್ಣ ಕೆಲಸ ಮಾಡಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಕೊರೊನಾ ನಿಮಿತ್ತ ಆನ್‌ಲೈನ್‌ನಲ್ಲಿ ಆಯೋಜಿಸಿದ್ದ ಈ ಉಪನ್ಯಾಸ ಕಾರ್ಯಕ್ರಮವನ್ನು ೪೬ ದೇಶಗಳ ಸುಮಾರು ೧೧ ಲಕ್ಷ ಜನ ವೀಕ್ಷಿಸಿರುವುದು ಶರಣರ ಬಗೆಗಿನ ಹೆಮ್ಮೆ ಹಾಗೂ ಅಭಿಮಾನವನ್ನು ತೋರಿಸಿಕೊಡುತ್ತಿದ್ದು, ಶರಣರ ಅಲಕ್ಷಿತ ಕ್ಷೇತ್ರಗಳನ್ನು ಅಭಿವೃದ್ಧಿ ಪಡಿಸುವ ಹಿನ್ನೆಲೆಯಲ್ಲಿ ಕಾರ್ಯಯೋಜನೆಯನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಪ್ರಾಸ್ತಾವಿಕ ಮಾತನಾಡಿದ ಕೇಂದ್ರ ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ತಿಳಿಸಿದರು.

ಕಾರ್ಯಕ್ರಮ ಕುರಿತು ಮಾತನಾಡಿದ ಡಾ. ಕಲ್ಯಾಣರಾವ ಪಾಟೀಲ ಅವರು ಶರಣ ಸ್ಮಾರಕಗಳು ಅವು ಸ್ಥಾವರಗಳಲ್ಲ, ಶರಣರ ಇತಿಹಾಸವನ್ನು ಉಳಿಸಿದ ಜಂಗಮ ಗುಣವುಳ್ಳ ಐತಿಹಾಸಿಕ ಕುರುಹುಗಳು ಎಂದು ವ್ಯಾಖ್ಯಾನಿಸಿದರು. ಶೋಷಣೆವುಳ್ಳ, ಲಿಂಗತಾರತಮ್ಯವುಳ್ಳ ದೇವಸ್ಥಾನಗಳು ಸ್ಥಾವರಗಳಾಗುತ್ತವೆ. ಶರಣರ ಸ್ಮಾರಕಗಳು ಶರಣರ ಜೀವನವನ್ನು ದರ್ಶಿಸುವ ಜೀವಂತ ಸಾಕ್ಷಿಗಳಾಗಿವೆ ಎಂದರು. ಈ ಆಧಾರಗಳ ಮೇಲೆಯೇ ಇಂದು ಒಂದು ಶರಣರ ಮೌಖಿಕ ಇತಿಹಾಸವನ್ನು ಸೃಷ್ಟಿಸಿಕೊಳ್ಳಲು ಸಾಧ್ಯವಾಗಿರುವುದನ್ನು ನಾವು ಗಮನಿಸಬೇಕು ಎಂದು ಅಭಿಪ್ರಾಯಪಟ್ಟರು.

ಡಾ. ವೀರಣ್ಣ ದಂಡೆ ಅವರು ಸ್ಮಾರಕಗಳನ್ನು ವಿವರಿಸುತ್ತ ಅನೇಕ ಹೊಸ ಸಂಗತಿಗಳನ್ನು ಕನ್ನಡ ಸಂಸ್ಕೃತಿ ಸಂಶೋಧನ ವಲಯಕ್ಕೆ ಕೊಟ್ಟಿದ್ದಾರೆ ಎಂದ ಇನ್ನೊಬ್ಬ ಮುಖ್ಯ ಅತಿಥಿ ಶ್ರೀ ಶಿವರಂಜನ್ ಸತ್ಯಂಪೇಟೆ ಅವರು ವಿವರಿಸಿದರು. ಶರಣ ರೇವಣಸಿದ್ಧ ಹಾಗೂ ಪೌರಾಣಿಕ ಪುರುಷ ರೇಣುಕಾಚಾರ‍್ಯ ಬೇರೆ ಬೇರೆ ಎಂಬ ಸೂಕ್ಷ್ಮವನ್ನು ಎಲ್ಲರ ಗಮನಕ್ಕೆ ಬರುವಂತೆ ಡಾ. ವೀರಣ್ಣ ದಂಡೆ ಅವರು ವಿವರಿಸಿದ್ದು ಒಂದು ಸತ್ಯಸಂಗತಿಯಾಗಿದೆ. ಬಸವಣ್ಣನವರು ರಚಿಸಿದ ಶರಣಗಣ ಸಂಘಟನೆಯಿಂದಾಗಿ ಧರ್ಮ ಪ್ರಚಾರದ ಜವಾಬ್ದಾರಿ ಹೊತ್ತ ಪ್ರಮಥಗಣಗಳೇ ಮುಂದೆ ವೃತ್ತಿ ಹಿಂದಾಗಿ ಜಂಗಮ ಜಾತಿ ಸೃಷ್ಟಿಗೊಂಡಿದೆ, ಬಸವಣ್ಣನವರ ಪೂರ್ವಜರ ಗ್ರಾಮ ಮಂಡಿಗೆ ಜೇವರ್ಗಿ ತಾಲೂಕಿನ ಮಾಡಗಿ(ಮಂಡಗಿ) ಗ್ರಾಮವಾಗಿದೆ, ರೇವಣಸಿದ್ಧರು ತಮ್ಮ ಕೊನೆಯ ದಿನಗಳನ್ನು ಶಿರವಾಳ ಮತ್ತು ಹೋತಗಲ್ಲ ಗ್ರಾಮಗಳ ಸುತ್ತಮುತ್ತಲೇ ಕಳೆದಿದ್ದು, ಹೋತಗಲ್ಲದಲ್ಲಿರುವ ರೇವಣಸಿದ್ಧ ದೇವಾಲಯ ಅವರ ಸಮಾಧಿ-ಗದ್ದುಗೆ ಆಗಿರುವ ಸಾಧ್ಯತೆ ಇದೆ- ಎಂಬ ಅನೇಕ ಹೊಸ ಸಂಗತಿಗಳನ್ನು ಡಾ. ದಂಡೆ ಅವರು ಹೊರಹಾಕಿದ್ದಾರೆ ಎಂದು ವಿವರಿಸಿದರು.

ಶರಣರ ಸಂಘಟನೆಯನ್ನು ಗುರುತಿಸುವಾಗ ಲಕ್ಷದ ಮೇಲೆ ತೊಂಭತ್ತಾರು ಸಾವಿರ (೧,೯೬,೦೦೦) ಪ್ರಮಥ ಗಣ ಎನ್ನವುದು ಕೇವಲ ಸಂಖ್ಯಾವಾಚಕ ಪದವನ್ನು ಆಧರಿಸಿಲ್ಲ. ಆ ಪದದಲ್ಲಿ ಸಂಖ್ಯೆಯ ಜೊತೆಗೆ ಸತ್ವವೂ ಅಡಗಿದೆ. ಹೀಗಾಗಿ ಲಿಂಗ ಲಕ್ಷದ ಮೇಲಣ ೯೬ ಸಾವಿರ ಗಣಂಗಳು ಎಂದು ಪರಿಭಾವಿಸಬೇಕು. ಶರಣರು ಅಗಣಿತ. ಶರಣರ ಗಣಾಚಾರ ತತ್ವ ಕೇವಲ ಪ್ರತಿಭಟನೆಯನ್ನು ಸೂಚಿಸುವುದಿಲ್ಲ. ಎಲ್ಲವು, ಎಲ್ಲರಿಗಾಗಿ, ಎಲ್ಲರೊಂದಿಗೆ, ಎಲ್ಲರಿಗೆ ಬೇಕಾಗಿ ಬಸವ ಬೆಳಕಾಗಿ ಬೆಳೆಯುವುದು ಎಂಬುದಾಗಿದೆ. -ಪೂಜ್ಯ ಶ್ರೀ. ಶೀವರುದ್ರ ಸ್ವಾಮೀಜಿ, ಬೇಲಿಮಠ ಬೆಂಗಳೂರು

ಇದೇ ವೇಳೆಯಲ್ಲಿ ಡಾ. ವೀರಣ್ಣ ದಂಡೆ ಹಾಗೂ ಡಾ. ಜಯಶ್ರೀ ದಂಡೆ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ’೧೨ನೇ ಶತಮಾನದ ಶರಣ ಸ್ಮಾರಕಗಳು’ ಸಂಪುಟಗಳ ಲೇಖಕರಲ್ಲೊಬ್ಬರಾದ ಡಾ. ಜಯಶ್ರೀ ದಂಡೆ ಅವರು ಕಲಬುರಗಿ ಅನುಭವ ಮಂಟಪ ಶ್ರಾವಣ ಮಾಸದಲ್ಲಿ ಚಟುವಟಿಕೆಯಿಂದಿರಬೇಕೆಂಬ ಹಂಬಲದಿಂದ ’ಶರಣ ಚರಿತೆ’ ವಿಶೇಷ ಉಪನ್ಯಾಸ ಮಾಲೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಅದಕ್ಕೆ ಒಳ್ಳೆಯ ಪ್ರತಿಕ್ರಿಯೆ ದೊರಕಿರುವುದು ಸಂತೋಷದ ಸಂಗತಿ ಎಂದರು.

ಕಲಬುರಗಿ ಬಸವ ಸಮಿತಿ ಅಧ್ಯಕ್ಷೆ ಡಾ. ವಿಲಾಸವತಿ ಖೂಬಾ ಅಧ್ಯಕ್ಷತೆ ವಹಿಸಿದ್ದರು. ಎಚ್.ಕೆ. ಉದ್ದಂಡಯ್ಯ ನಿರೂಪಿಸಿದರು. ಭಾವಿಕಟ್ಟಿ ಸ್ವಾಗತಿಸಿದರು. ಭವನೇಶ್ವರಿ ವಂದಿಸಿದರು. ಡಾ. ವಾಲಿ ಕೆ.ಎಸ್. ಹಾಗೂ ಶ್ರೀಮತಿ ಪುಷ್ಪಾ ವಾಲಿ, ಕಲಬುರಗಿ ಬಸವ ಸಮಿತಿ ಕಾರ್ಯದರ್ಶಿಗಳಾದ ಬಂಡಪ್ಪ ಕೇಸೂರ, ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಪ್ರಭುಲಿಂಗ ಮಹಾಗಾಂವಕರ್, ನಳಿನಿ ಮಗಾಗಾಂವಕರ್, ಎಸ್. ವಿ. ಹತ್ತಿ, ಡಾ. ಆನಂದ ಸಿದ್ಧಾಮಣಿ, ನಂದೀಶ ರಾವೂರ, ಗುರುಶಾಂತಮ್ಮ, ಸುನಂದಾ, ಶಿವಾನಂದ ಇತರರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here