ರಾಷ್ಟ್ರೀಯ ಶಿಕ್ಷಣ ನೀತಿ ವಿರುದ್ಧ ಶಿಕ್ಷಕರ ಆಕ್ರೋಶ

0
60

ವಾಡಿ: ಕೇಂದ್ರ ಸರಕಾರ ಜಾರಿಗೆ ತರಲು ಹೊರಟಿರುವ ರಾಷ್ಟ್ರೀಯ ಶಿಕ್ಷಣ ನೀತಿ-೨೦೨೦ಗೆ ಶಿಕ್ಷಕ ಸಮುದಾಯದಿಂದ ಆಕ್ರೋಶ ವ್ಯಕ್ತವಾಗಿದೆ. ಜನಾಭಿಪ್ರಾಯ ಧಿಕ್ಕರಿಸಿ ಜನವಿರೋಧಿ ಶಿಕ್ಷಣ ನೀತಿ ಹೇರಲು ಮುಂದಾಗಿದೆ ಎಂದು ಆಪಾದಿಸಿದ್ದಾರೆ.

ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ (ಎಐಎಸ್‌ಇಸಿ) ನೇತೃತ್ವದಲ್ಲಿ ರವಿವಾರ ವಾಡಿ ನಗರದಲ್ಲಿ ಆನ್‌ಲೈನ್ ಚಳುವಳಿ ನಡೆಸಿದ ಸ್ಥಳೀಯ ವಿವಿಧ ಶಾಲೆಗಳ ಶಿಕ್ಷಕರು, ಪೋಷಕರು ಹಾಗೂ ವಿದ್ಯಾರ್ಥಿಗಳು ಕೇಂದ್ರ ಸರಕಾರದ ಸರ್ವಧೀಕಾರಿ ಧೋರಣೆ ವಿರುದ್ಧ ಘೋಷಣೆ ಕೂಗಿದರು.

Contact Your\'s Advertisement; 9902492681

ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಶಿಕ್ಷಣ ಉಳಿಸಿ ಸಮಿತಿ ಜಿಲ್ಲಾ ಸಂಚಾಲಕ ವೀರಭದ್ರಪ್ಪ ಆರ್.ಕೆ, ಖಾಸಗೀಕರಣ ಮತ್ತು ಶಿಕ್ಷಣದ ವ್ಯಾಪಾರೀಕರಣ ಎಂಬುದು ಪ್ರಾಥಮಿಕ ಹಂತದಿಂದ ಕಾಡುತ್ತಿದೆ. ಶಿಕ್ಷಣ ವ್ಯವಸ್ಥೆಯ ವಿರುದ್ಧ ಇದು ದೊಡ್ಡ ಸವಾಲನ್ನೇ ಹುಟ್ಟುಹಾಕಿದೆ. ಶಿಕ್ಷಣದ ಗುಣಮಟ್ಟ ಕುಸಿತ, ಮೂಲಭೂತ ಸೌಕರ್ಯ, ಬಜೆಟ್ ಕಡಿತ, ಆಡಳಿತ ವ್ಯವಹಾರಗಳಲ್ಲಿ ಸರಕಾರದ ಹಸ್ತಕ್ಷೇಪ, ಪಠ್ಯಪುಸ್ತಕಗಳನ್ನು ಪಕ್ಷದ ಸಿದ್ಧಾಂತಕ್ಕೆ ಅನುಗುಣವಾಗಿ ಪರಿವರ್ತಿಸುವುದು. ಹೀಗೆ ಹಲವು ಸಮಸ್ಯೆಗಳಿಗೆ ಈ ಹೊಸ ಶಿಕ್ಷಣ ನೀತಿಯಲ್ಲಿ ಪರಿಹಾರೋಪಾಯಗಳಿಲ್ಲ. ಶಿಕ್ಷಣ ತಜ್ಞರು, ಬುದ್ಧಿಜೀವಿಗಳು, ಶಿಕ್ಷಕರು, ಪಾಲಕರು ಹಾಗೂ ಭಾರತದ ಜನರ ಅಮೂಲ್ಯವಾದ ಅಭಿಪ್ರಾಯಗಳು ಮತ್ತು ವಿರೋಧಗಳನ್ನು ಸಂಪೂರ್ಣವಾಗಿ ಕಡೆಗಣಿಸಿ, ಕೇಂದ್ರ ಸಚಿವ ಸಂಪುಟ ಸಭೆ ರಾಷ್ಟ್ರೀಯ ಶಿಕ್ಷಣ ನೀತಿಗೆ ಅನುಮೋದನೆ ನೀಡಿರುವುದು ಪ್ರಜಾತಾಂತ್ರಿಕ ವ್ಯವಸ್ಥೆಗೆ ಎಸಗಿದ ದ್ರೋಹವಾಗಿದೆ ಎಂದು ಆರೋಪಿಸಿದರು.

ಎನ್‌ಇಪಿ ಕೇಂದ್ರ ಸರಕಾರದ ಸಿದ್ಧಾಂತದಿಂದ ಪ್ರಭಾವಿತವಾಗಿದೆ. ನವೋದಯ ಚಳುವಳಿ ಮತ್ತು ಸ್ವಾತಂತ್ರ್ಯ ಹೋರಾಟದ ಶ್ರೀಮಂತ ಪರಂಪರೆಯನ್ನು ಗುರುತಿಸುವುದಿಲ್ಲ ಎಂಬುದು ಸ್ಪಷ್ಟವಾಗಿದೆ. ಅಧಿಕಾರದಲ್ಲಿರುವ ಪಕ್ಷದ ಸಿದ್ಧಾಂತಕ್ಕೆ ಅನುಗುಣವಾಗಿ ಪಠ್ಯಕ್ರಮವನ್ನು ವಿರೂಪಗೊಳಿಸುವುದು ಮತ್ತು ಕೋಮು ಭಾವನೆಗಳನ್ನು ಪ್ರಚೋದಿಸುತ್ತದೆ. ಅಲ್ಲದೆ ಇದು ನಮ್ಮ ದೇಶದ ಏಕತೆಗೆ ಸಮಗ್ರತೆಗೆ ಹಾನಿಕಾರಕವಾಗಿದೆ. ಎನ್‌ಇಪಿ-೨೦೨೦ ವಾಣಿಜ್ಯೀಕರಣ, ಕೇಂದ್ರೀಕರಣ ಮತ್ತು ಶಿಕ್ಷಣದ ಕೋಮುವಾದವನ್ನು ಗುರಿಯಾಗಿಸಿಕೊಂಡಿದೆ. ಬಡವರ ವಿರೋಧಿ ಹಾಗೂ ಕಾರ್ಪೋರೇಟ್‌ಗಳ ಪರವಾಗಿದೆ ಎಂದು ದೂರಿದ ವೀರಭದ್ರಪ್ಪ ಆರ್.ಕೆ, ಕೂಡಲೇ ಈ ಮನೆಹಾಳ ಶಿಕ್ಷಣ ನೀತಿ ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ಶಿಕ್ಷಣ ಉಳಿಸಿ ಸಮಿತಿಯ ನಗರ ಘಟಕದ ಸಂಚಾಲಕ ರಮೇಶ ಮಾಶಾಳ, ಶಿಕ್ಷಕರಾದ ಯೇಸಪ್ಪ ಕೇದಾರ, ಪದ್ಮರೇಖಾ ವಿ.ಕೆ, ಸಾಯಬಣ್ಣ ನಾಟೇಕರ, ಪ್ರಕಾಶ, ಈರಣ್ಣ ನಾಟೇಕರ ಇಂಗಳಗಿ ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here