ಸುರಪುರ: ನಗರದ ಟೇಲರ್ಸ್ ಮಂಜಿಲ್ ಅತಿಥಿಗೃಹದಲ್ಲಿ ಶುಕ್ರವಾರದಂದು ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಗ್ರಾಮ ಪಂಚಾಯತ ಕ್ಲರ್ಕ ಕಂ ಡಾಟಾ ಎಂಟ್ರಿ ಆಪರೇಟರುಗಳ ಸಂಘದ ತಾಲೂಕು ಘಟಕದ ವತಿಯಿಂದ 2020-21ನೇ ಸಾಲಿನಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿ ಕೂಲಿಕಾರರಿಗೆ ಕೆಲಸ ನೀಡಿ ಉತ್ತಮ ಸಾಧನೆಗೈದು ಸರಕಾರದಿಂದ ಪ್ರಶಸ್ತಿ ಪಡೆದ ತಾಲೂಕಿನ ಆಲ್ದಾಳ ಗ್ರಾಮ ಪಂಚಾಯತಿ ಪಿಡಿಓ ರಾಜಕುಮಾರ ಸುಬೇದಾರ ಹಾಗೂ ಕ್ಲರ್ಕ ಕಂ ಡಾಟಾ ಎಂಟ್ರಿ ಆಪರೇಟರ್ ರಾಮಚಂದ್ರ ತಾಳಿಕೋಟಿ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಹಾಯಕ ನಿರ್ದೇಶಕ ವಿಶ್ವನಾಥ ಯಾದಗಿರಕರ್ ಅವರು ಮಾತನಾಡಿ ಸರಕಾರದಲ್ಲಿ ಯಾವುದೇ ಇಲಾಖೆಗಳಿರಲಿ ಸರಕಾರಿ ನೌಕರರು ತಮ್ಮ ಸೇವಾವಧಿಯಲ್ಲಿ ತಮಗೆ ಸಿಕ್ಕ ಸರಕಾರಿ ಸೇವೆಯ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಜನಸಾಮಾನ್ಯರಿಗೆ ಸರಕಾರದ ಸೌಲಭ್ಯಗಳನ್ನು ನೀಡುವ ಮೂಲಕ ಉತ್ತಮ ಸೇವೆಗೈದಲ್ಲಿ ಸರಕಾರ ಹಾಗೂ ಸಮಾಜ ಖಂಡಿತವಾಗಿ ಅಂತಹವರನ್ನು ಗುರುತಿಸುತ್ತದೆ ಮತ್ತು ಅವರ ಕುಟುಂಬದವರಿಗೆ ದೇವರು ಒಳ್ಳೆಯದನ್ನು ಮಾಡುತ್ತಾನೆ ಎಂದು ಹೇಳಿದರು, ಸನ್ಮಾನಿಸಲ್ಪಟ್ಟ ಸಾಧಕರ ಸಾಧನೆಗಳು ಉಳಿದವರಿಗೆ ಪ್ರೇರಣೆಯಾಗಲಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ತಾ ಪಂ ಕಚೇರಿ ವ್ಯವಸ್ಥಾಪಕ ವೆಂಕೋಬ ಬಾಗಲಿ, ಪಿಡಿಓಗಳಾದ ಚಂದಪ್ಪ ನಾಯಕ, ಚಾಂದ ಪಾಶಾ ಅತಿಥಿಗಳಾಗಿದ್ದರು, ಸಂಘದ ಅಧ್ಯಕ್ಷ ಅಯ್ಯಣ್ಣ ಬೆಲ್ಲದ, ಕಾರ್ಯದರ್ಶಿ ಬಸವರಾಜ ಹೇಮನೂರು, ಸಿದ್ದಣ್ಣ ಮಿಟ್ಟಾ, ಲಕ್ಷ್ಮಣ, ಯಂಕಣ್ಣ, ಭೀಮನಗೌಡ ಮೇಟಿ, ಪಿಡ್ಡಪ್ಪ ದೇವರಗೋನಾಳ ಉಪಸ್ಥಿತರಿದ್ದರು.