ಕಲಬುರಗಿ: ಅಫಜಲಪುರ ತಾಲ್ಲೂಕಿನ ಸಂಗಾಪೂರ ಗ್ರಾಮದಲ್ಲಿ ಇತ್ತೀಚೆಗೆ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ದೇವಲಗಾಣಗಾಪುರ ಪೊಲೀಸ್ ರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕೆಕ್ಕರಸಾವಳಗಿ ಸಂಗಾಪೂರ ಗ್ರಾಮದ ಪ್ರಭು ಲಕ್ಷ್ಮಣ ಕಾಂಬಳೆ, ಚಾಂದ ಹುಸೇನಸಾಬ ಜಮಾದಾರ ಮತ್ತು ಮಹ್ಮದ್ ಇಸ್ಮಾಯಿಲಸಾಬ ಹುಂಡೇಕರ ಎಂಬುವವರನ್ನು ಕೊಲೆ ಪ್ರಕರಣದ ಆರೋಪಿಗಳನ್ನು ಬಂಧಿಸಿದ್ದಾರೆ.
ಆ.30 ರಸ್ತೆಯಲ್ಲಿ ಬಾಬು ಕೋಬಾಳ ಬೈಕ್ ಮೇಲೆ ಹೋಗುತ್ತಿದ್ದಾಗ ಕೊಡಲಿಯಿಂದ ಕುತ್ತಿಗೆಗೆ ಹೊಡೆದು ರುಂಡ ದೇಹದಿಂದ ಬೇರ್ಪಡಿಸಿ ಕೊಲೆ ಮಾಡಲಾಗಿತ್ತು. ಈ ಭೀಕರ ಕೊಲೆಯಿಂದ ಜಿಲ್ಲೆಯ ಜನರು ಬೆಚ್ಚಿಬಿದ್ದಿದ್ದರು.
ಆಳಂದ ಡಿ.ಎಸ್.ಪಿ ಮಲ್ಲಿಕಾರ್ಜುನ ಸಾಲಿ ಅವರ ಮಾರ್ಗದರ್ಶನದ ಅಫಜಲಪುರ ಸಿಪಿಐ ಮಹಾದೇವ ಪಂಚಮುಖಿ, ಪಿಎಸ್ಐ ಸಂತೋಷ ತಟ್ಟೇಪಳ್ಳಿ, ರೇವೂರ ಪಿಎಸ್ಐ ಸುರೇಶ ಬಾಬು, ಎ.ಎಸ್.ಐ.ಗಳಾದ ರಾಜಶೇಖರ, ಕಮಲು ರಾಠೋಡ್, ಸಿಬ್ಬಂದಿಗಳಾದ ತುಳಜಪ್ಪ, ಕುಶಣ್ಣ, ಪ್ರಭು, ಶಿವಯ್ಯ, ಪಂಚಾಕ್ಷರಿ, ಬಾದಷ್ಯಾ, ಯಲ್ಲಪ್ಪ ಮತ್ತು ಭೀಮಾಶಂಕರ ಅವರನ್ನೊಳಗಂಡ ತಂಡ ಕಾರ್ಯಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಈ ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಮೂವರು ಸೇರಿ ಈ ಕೊಲೆ ಮಾಡಿ ಪರಾರಿಯಾಗಿದ್ದರು ಎಂದು ತಿಳಿದುಬಂದಿದೆ.