ಕೋಲಾರ: ಜಿಲ್ಲೆ ಮತ್ತು ತಾಲ್ಲೂಕಿನ ನರಸಾಪುರ ಗ್ರಾಮದಲ್ಲಿ ನರಸಾಪುರ ದಿಂದ ಕೋಲಾರ ಮುಖ್ಯ ರಸ್ತೆಯ ಪಕ್ಕದಲ್ಲಿ ಕಸದ ರಾಶಿಯಲ್ಲಿ ಸತ್ತು ಹೋದ ಪ್ರಾಣಿಗಳನ್ನು ತಂದು ಹಾಕುತ್ತಿದ್ದಾರೆ ಎಂದು ರಸ್ತೆ ಪಕ್ಕದಲ್ಲಿನ ಅಂಗಡಿ ವ್ಯಾಪಾರಸ್ಥರು ಆಕ್ರೋಶ ವ್ಯಕ್ತ ಪಡಿಸಿದರು.
ನರಸಾಪುರ ಗ್ರಾಮದಲ್ಲಿ ಸೆಪ್ಟೆಂಬರ್ 5ನೇ ತಾರೀಖಿನಂದು ಸ್ವಚ್ಛ ಭಾರತ ಅಭಿಯಾನ ಯೋಜನೆಯಡಿಯಲ್ಲಿ ನರಸಾಪುರ ಗ್ರಾಮದಲ್ಲಿ ಎಲ್ಲಾ ಕಡೆ ಸ್ವಚ್ಛತೆ ಮಾಡುತ್ತಿದ್ದೇವೆ ಎಂದು ನರಸಾಪುರ ಗ್ರಾಮ ಪಂಚಾಯ್ತಿಯವರು ತಿಳಿಸಿದ್ದರು. ಆದರೆ ನಾವು ನೋಡಿದ ಹಾಗೆ ರಸ್ತೆ ಬದಿಗಳಲ್ಲಿ ಇರುವ ಕಸದ ರಾಶಿ ಗ್ರಾಮ ಪಂಚಾಯ್ತಿಯವರಿಗೆ ಕಾಣುತ್ತಿಲ್ಲವೇ ಎಂಬ ಯೋಚನೆಯಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಇಡೀ ಭಾರತದಲ್ಲಿ ಕೊರೋನ ಸೋಂಕು ಹರಡುವ ಮುಂಚೆ ನರಸಾಪುರ ಗ್ರಾಮದಲ್ಲಿ ಮುಖ್ಯ ರಸ್ತೆಯಿಂದ ಸಂತೆ ಬೀದಿಯಲ್ಲಿ ಪ್ರತಿ ಭಾನುವಾರ ವ್ಯಾಪಾರಗಳು ನಡೆಯುವಾಗ ಯಾವುದೇ ತೊಂದರೆ ಇಲ್ಲದೆ ಗ್ರಾಹಕರು ವ್ಯಾಪಾರ ಮಾಡುತ್ತಿದ್ದರು. ಆದರೆ ಈಗ ಇಡೀ ಭಾರತದಲ್ಲಿ ಕೊರೋನ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರತಿ ಭಾನುವಾರ ಸಂತೆ ಬೀದಿಯಲ್ಲಿ ವ್ಯಾಪಾರ ವಹಿವಾಟು ನಡೆಸಬಾರದೆಂದು ನಿಷೇಧಿಸಲಾಗಿದೆ ಎಂದು ಮುಖ್ಯ ರಸ್ತೆಯ ಪಕ್ಕದಲ್ಲಿ ವ್ಯಾಪಾರ ವಹಿವಾಟು ಮಾಡಲು ಶುರು ಮಾಡಿದರು.
ಬೆಸ್ಕಾಂ ಕಛೇರಿ ಸಮೀಪದಲ್ಲಿ ಹೆಚ್ಚಿನ ವ್ಯಾಪಾರ ವಹಿವಾಟು ನಡೆಯುತ್ತಿದ್ದು, ಈಗ ಮುಖ್ಯ ರಸ್ತೆಯ ಪಕ್ಕದಲ್ಲೇ ಕಸದ ರಾಶಿ, ಕೊಳೆತ ತರಕಾರಿ, ಬೀದಿ ಬೀದಿಗಳಲ್ಲಿ ಸತ್ತು ಕೊಳೆತು ದುರ್ವಾಸನೆ ಬಂದಿರುವ ಪ್ರಾಣಿಗಳನ್ನು ತಂದು ಹಾಕುತ್ತಿದ್ದಾರೆ ನಾವು ಭಾನುವಾರದ ದಿನ ವ್ಯಾಪಾರ ಮಾಡಲು ತೊಂದರೆಯಾಗುತ್ತಿದೆ ಎಂದು ಸ್ಥಳೀಯರು ಮತ್ತು ವ್ಯಾಪಾರಸ್ಥರು ತಮ್ಮ ಸಮಸ್ಯೆಗಳನ್ನು ಹೇಳುತ್ತಿದ್ದಾರೆ.
ಕಸಕಡ್ಡಿಗಳನ್ನು ರಸ್ತೆ ಪಕ್ಕದಲ್ಲಿ ಹಾಕುತ್ತಿದ್ದರೆ, ಅನೇಕ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇದೆ ಎಂದು ಊರಿನ ಜನ ಹೇಳಿದ್ದಾರೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿಯವರು ಈ ಕಡೆ ಗಮನ ಹರಿಸಬೇಕು, ಇಲ್ಲವಾದರೆ ಪ್ರತಿಭಟನೆ ಮೂಲಕ ಪಾಠ ಕಲಿಸಬೇಕಾಗುತ್ತದೆ ಎಂದು ಸ್ಥಳೀಯ ನಿವಾಸಿಗಳು ತಿಳಿಸಿದ್ದಾರೆ.