ಶಹಾಬಾದ:ಬಿಜಾಪೂರ ಜಿಲ್ಲೆಯ ಸಿಂದಗಿ ತಾಲೂಕಿನ ಬೂದಿಹಾಳ ಗ್ರಾಮದಲ್ಲಿ ಮಾದಿಗ ದಲಿತ ಯುವ ಮುಖಂಡ ಅನೀಲ ಇಂಗಳಗಿ ಅವರ ಹತ್ಯೆ ಮಾಡಿರುವವರನ್ನು ತಕ್ಷಣವೇ ಬಂಧಿಸಿ ಕಠಿಣ ಶಿಕ್ಷೆ ನೀಡಬೇಕೆಂದು ಆಗ್ರಹಿಸಿ ಬುಧವಾರ ದಲಿತ ಮಾದಿಗ ಸಮನ್ವಯ ಸಮಿತಿಯಿಂದ ತಹಸೀಲ್ದಾರ ಕಛೇರಿಯ ಮುಂದೆ ಪ್ರತಿಭಟನೆ ನಡೆಸಿದರು.
ದಲಿತ ಮಾದಿಗ ಸಮನ್ವಯ ಸಮಿತಿ ಅಧ್ಯಕ್ಷ ಶಿವರಾಜ ಕೋರೆ ಮಾತನಾಡಿ, ರಾಜಾರೋಷವಾಗಿ ಹಾಡುಹಗಲೇ ಅನೀಲ ಇಂಗಳಗಿ ಕೊಲೆ ನಡೆದಿರುವುದು ನೋಡಿದರೇ ಕಾನೂನು ಸುವ್ಯವಸ್ಥೆ ಹದಗೆಟ್ಟು ಹೋಗಿರುವುದು ಕಂಡು ಬರುತ್ತದೆ.ಈಗಾಗಲೇ ದಲಿತ ಸಮುದಾಯದ ಅನೇಕ ಯುವಕರ ಬರ್ಬರ ಹತ್ಯೆ ನಡೆದಿದೆ.ಈ ಬಗ್ಗೆ ಕ್ರಮಕೈಗೊಳ್ಳಬೇಕಾದ ಪೊಲೀಸ್ ಇಲಾಖೆ ವಿಫಲವಾಗಿದೆ. ಕೂಡಲೇ ಅನೀಲ ಇಂಗಳಗಿ ಕೊಲೆ ಮಾಡಿದ ಸಿದ್ದು ಬಿರಾದಾರ ಹಾಗೂ ಇನ್ನೀತರ ವ್ಯಕ್ತಿಗಳನ್ನು ಬಂಧಿಸಬೇಕು. ಅವರ ಕುಟುಂಬಕ್ಕೆ ರಕ್ಷಣೆ ನೀಡುವುದರ ಮೂಲಕ ಪರಹಾರ ಒದಗಿಸಬೇಕೆಂದು ಆಗ್ರಹಿಸಿದರು.ಅಲ್ಲದೇ ಹತ್ಯೆಯಾದ ಅನೀಲ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ಹಾಗೂ 5 ಎಕರೆ ಜಮೀನನ್ನು ಮಂಜೂರು ಮಾಡಬೇಕು. ಇನ್ನೊಮ್ಮೆ ಈ ರೀತಯ ಘಟನೆಗಳು ನಡೆಯದಂತೆ ಸೂಕ್ತ ಕ್ರಮಕೈಗೊಳ್ಳಬೇಕು.ದಲಿತ ಸಮುದಾಯಕ್ಕೆ ನ್ಯಾಯ ಒದಗಿಸಬೇಕೆಂದು ಗೃಹ ಸಚಿವರಿಗೆ ಒತ್ತಾಯಿಸಿದರು.
ನಂತರ ತಹಸೀಲ್ದಾರ ಸುರೇಶ ವರ್ಮಾ ಅವರಿಗೆ ಮನವಿ ಪತ್ರ ಸಲ್ಲಿಸಿದರು.ದಲಿತ ಮಾದಿಗ ಸಮನ್ವಯ ಸಮಿತಿ ಕಾರ್ಯಾಧ್ಯಕ್ಷ ಶರಣು.ಬಿ.ಪಗಲಾಪೂರ, ಪ್ರಧಾನ ಕಾರ್ಯದರ್ಶಿ ರವಿ ಬೆಳಮಗಿ, ನಾಗರಾಜ ಮುದ್ನಾಳ, ಲಕ್ಷ್ಮಣ ಹೈಯ್ಯಾಳಕರ್, ಎಂ.ಆರ್.ದೊಡ್ಡಮನಿ, ಮರೆಪ್ಪ ಹೊನಗುಂಟಾ,ಸಿದ್ರಾಮ ಗಾಯಕವಾಡ, ನಾಗರಾಜ ರಾಯಚೂರಕರ್, ಸಿದ್ದು ಪಸಪುಲ ಇತರರು ಇದ್ದರು.