ಕಲಬುರಗಿ: ಚಿಂಚೋಳಿ ತಾಲ್ಲೂಕಿನ ಗಣಾಪುರ ಸೇತುವೆ ಬಳಿ ಪ್ರತಿ ದಿನ ಕರ್ತವ್ಯಕ್ಕೆ ಹೋಗಿ ಬರುವ ಮಾರ್ಗ ಮಧ್ಯದಲ್ಲಿ ಪ್ರವಾಹಕ್ಕೆ ಸಿಲುಕಿದ ಯಾದಗಿರಿ ತಹಶೀಲ್ದಾರ್ ಪಂಡಿತ್ ಬಿರಾದಾರ ರಕ್ಷಣೆ ಕೋರಿ ಪ್ರಾಣಾಪಾಯದಿಂದ ಇಕ್ಕಟ್ಟಿನಲ್ಲಿ ಸಿಲುಕಿದ ಪ್ರಸಂಗ ಬುಧವಾರ ಸಂಜೆ ನಡೆದಿದೆ.
ತಮ್ಮ ಕಾರಿನಲ್ಲಿ ಬುಧವಾರಬೀದರ್ ನಿಂದ ಯಾದಗಿರಿಗೆ ಕರ್ತವ್ಯಕ್ಕೆ ಹೋಗಿ ಸಂಜೆ ವಾಪಸ್ ಬೀದರಿಗೆ ಹೋಗುತ್ತಿರುವಾಗ ಈ ಘಟನೆ ನಡೆದಿದೆ. ಸತತ ಮಳೆಯಿಂದಾಗಿ ಗಣಾಪುರ ಬಳಿ ಸೇತುವೆ ಮೇಲೆ ನೀರು ಹರಿಯುತ್ತಿತ್ತು. ಸೇತುವೆ ದಾಟಿಕೊಂಡು ಹೋಗುವ ಹೋಗಬೇಕೆನ್ನುವಷ್ಟರಲ್ಲಿ ಅವರ ಕಾರು ನೀರಿನ ಸೆಳವಿಗೆ ಸಿಲುಕಿ ಸೇತುವೆಯಿಂದ ಜಾರುತ್ತಿದ್ದ ಕೂಡಲೇ ಎಚ್ಚೆತ್ತುಕೊಂಡು ಕಾರಿನಿಂದ ಇಳಿದು ಪಕ್ಕದಲ್ಲಿಯೇ ಇದ್ದ ಮರ ಏರಿ ಕುಳಿತಿದ್ದಾರೆ.
ಈ ವೇಳೆಯಲ್ಲಿ ಮಾಧ್ಯಮ ಪ್ರತಿನಿಧಿಗಳು ಸೇರಿದಂತೆ ಚಿಂಚೋಳಿ ತಾಲ್ಲೂಕಿನ ರಕ್ಷಣಾ ಅಧಿಕಾರಿಗಳಿಗೆ ದೂರವಾಣಿ ಮೂಲಕ ಕರೆ ಮಾಡಿ ತಮ್ಮನ್ನು ಪ್ರಾಣಾಪಾಯದಿಂದ ಪಾರು ಮಾಡುವಂತೆ ಅವರು ಕೋರಿದ್ದಾರೆ.
ಚಿಂಚೋಳಿ ತಹಸೀಲ್ದಾರ್ ತಹಶೀಲ್ದಾರ್ ಅರುಣಕುಮಾರ ಕುಲಕರ್ಣಿ ಹಾಗೂ ಡಿವೈಎಸ್ಪಿ ವೀರಭದ್ರಯ್ಯ ಮತ್ತು ಸರ್ಕಲ್ ಇನಸ್ಪೆಕ್ಟರ್ ಮಹಾಂತೇಶ ಪಾಟೀಲ, ಮಿರಿಯಾಣ ಠಾಣೆಯ ಪಿಎಸ್ ಐ ಸಂತೋಷ ರಾಠೋಡ್ ಹಾಗೂ ಅಗ್ನಿಶಾಮಕ ದಳದ ಅಧಿಕಾರಿಗಳು ರಕ್ಷಣೆಗೆ ಧಾವಿಸಿದ್ದಾರೆ. ಎಲ್ಲಾ ಅಧಿಕಾರಿಗಳು ಗಣಾಪುರ ಹತ್ತಿರದ ಸೇತುವೆಯ ಬಳಿ ಜಮಾಯಿಸಿ ರಕ್ಷಣೆಯ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅರುಣಕುಮಾರ ಕುಲಕರ್ಣಿ ತಿಳಿಸಿದ್ದಾರೆ.
ತಹಸೀಲ್ದಾರ್ ಬಿರಾದರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ. ಪಂಡಿತ ಬಿರಾದಾರ ಈಚೆಗೆ ಚಿಂಚೋಳಿಯಿಂದ ಯಾದಗಿರಿಗೆ ವರ್ಗವಾಗಿ ಹೋಗಿದ್ದರು. ಆದರೆ ಸ್ವಂತ ಊರಾದ ಬೀದರ್ ನಿಂದ ಪ್ರತಿ ದಿನಾಲೂ ತಮ್ಮ ಕಾರಿನಲ್ಲಿ ಯಾದಗಿರಿಗೆ ಹೋಗಿ ಕರ್ತವ್ಯ ನಿರ್ವಹಿಸುತ್ತಿದ್ದರು.